Belagavi News In Kannada | News Belgaum

ಬೆಳಗಾವಿ-ಚೋರ್ಲಾ-ಗೋವಾ ರಸ್ತೆ ದುರಸ್ತಿ ಕಾಮಗಾರಿಗೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ

 

ಬೆಳಗಾವಿ: ಬೆಳಗಾವಿ-ಚೋರ್ಲಾ-ಗೋವಾ ರಸ್ತೆ ನಿರ್ಮಾಣದ ಕುರಿತು ಸಾರ್ವಜನಿಕವಾಗಿ ಸುಮಾರು ದಿನಗಳಿಂದ ಸಾಕಷ್ಟು ಒತ್ತಡವಿತ್ತು. ಈ ನಿಟ್ಟಿನಲ್ಲಿ 43.35 ಕಿ.ಮೀ ರಸ್ತೆ, ಚರಂಡಿ, ಸೇತುವೆ ನಿರ್ಮಾಣ ಕಾಮಗಾರಿಗಳು 11 ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಲಿವೆ. ಕರ್ನಾಟಕ ಗೋವಾ ಎರಡು ರಾಜ್ಯಗಳ ಮುಖ್ಯ ಹೆದ್ದಾರಿ ಇದಾಗಿದ್ದು, ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ಖಾನಾಪೂರ ತಾಲ್ಲೂಕಿನ ಕಣಕುಂಬಿ ಗ್ರಾಮದಲ್ಲಿ ಅಂದಾಜು 58.90 ಕೋಟಿ ರೂಪಾಯಿ ವೆಚ್ಚದಲ್ಲಿ ಗೋವಾ ರಾಜ್ಯದ ಗಡಿಯಿಂದ ಕಣಕುಂಬಿ ಕ್ರಾಸ್‌ ವರೆಗಿನ ಸುಮಾರು 43 ಕಿ.ಮೀ. ಉದ್ದದ ರಸ್ತೆಯ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಹೊಸ ರಸ್ತೆ ನಿರ್ಮಾಣದ ಜೊತೆಗೆ 10 ರಿಂದ 12 ಕಿಮೀ ರಸ್ತೆ ದುರಸ್ತಿ ಕಾಮಗಾರಿ ಕೂಡ ಕೈಗೆತ್ತಿಕೊಳ್ಳಲಾಗುವುದು. ರಸ್ತೆ ಹಾಳಾಗದಂತೆ ಬದಿಯಲ್ಲಿ ಚರಂಡಿ ನಿರ್ಮಾಣ ಮಾಡಲಾಗುವುದು.

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ರಾಜ್ಯದಲ್ಲಿ ಅತಿ ವೇಗವಾಗಿ ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಅರಣ್ಯ ಇಲಾಖೆಯ ಸ್ಥಳ ಇರುವದರಿಂದ ರಸ್ತೆ ಅಗಲೀಕರಣ ಸಾಧ್ಯವಿಲ್ಲ ಎಂದು ಹೇಳಿದರು.
ಗೋಕಾಕ್ ಫಾಲ್ಸ್ ಪ್ರವಾಸಿ ತಾಣವಾಗಿ ಮಾರ್ಪಾಡು ಮಾಡಲು ಹಾಗೂ ಬೆಳಗಾವಿ ನಗರದಲ್ಲಿ ಫ್ಲಾಯ್ ಓವರ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಇದರಿಂದ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದರು.

ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಅದರಂತೆ ಹೊಸ ಬಜೆಟ್ ನಲ್ಲಿ ಉತ್ತಮ ಯೋಜನೆಗಳನ್ನು ಜನರಿಗೆ ತಲುಪಿಸಲಾಗುವುದು ಎಂದು ಸಚಿವ ಸತೀಶ ಜಾರಕಿಹೊಳಿ ಅವರು ತಿಳಿಸಿದರು.

ಈ ವೇಳೆ ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಅವರು ಮಾತನಾಡಿ, ಈಗಿರುವ ರಸ್ತೆ ಮಳೆಗಾಲದಲ್ಲಿ ಬಹಳಷ್ಟು ಹಾಳಾಗುತ್ತಿದೆ. ಬೆಳಗಾವಿಯಿಂದ ಗೋವಾ ವರೆಗೆ ಸಂಚರಿಸುವ ರಸ್ತೆಗಳಲ್ಲಿ ಚೋರ್ಲಾ ಮಾರ್ಗ ರಸ್ತೆ ಸಹ ಮುಖ್ಯ ರಸ್ತೆಯಾಗಿದೆ. ಆದ್ದರಿಂದ ಪ್ರಯಾಣಿಕರು ಹಾಗೂ ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ರಸ್ತೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆ: ಇದಕ್ಕೂ ಮುಂಚೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಖಾನಾಪೂರ ಶಾಸಕ ವಿಠ್ಠಲ ಹಲಗೇಕರ, ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ ಅವರು ಬೆಳಗಾವಿ-ಚೋರ್ಲಾ-ಗೋವಾ ರಸ್ತೆ ಕಾಮಗಾರಿಯ ಭೂಮಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.

ಬೆಳಗಾವಿ ಉತ್ತರ ವಿಧಾನ ಸಭಾ ಮತ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್, ಸವದತ್ತಿ ಶಾಸಕ ವಿಶ್ವಾಸ ವೈದ್ಯ, ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ, ಮುಖ್ಯ ಇಂಜಿನಿಯರ್ ಸಿ.ಮಂಜಪ್ಪ, ಎಜುಕೆಟಿವ್ ಇಂಜಿನಿಯರ್ ಪಿ. ರಾಜೇಂದ್ರ, ಬೆಳಗಾವಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಸೊಬರದ, ಕೆಪಿಸಿಸಿ ಕಾರ್ಯದರ್ಶಿ ಸುನೀಲ್‌ ಹಣಮನ್ನವರ್‌, ದಲಿತ ಮುಖಂಡ ಮಲ್ಲೇಶ ಚೌಗಲೆ, ಕಣಕುಂಬಿ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರು, ರಾಷ್ಟ್ರೀಯ ಹೆದ್ದಾರಿ ಮುಖ್ಯ ಇಂಜಿನಿಯರ್ ಸೇರಿದಂತೆ ಕಣಕುಂಬಿ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.