Belagavi News In Kannada | News Belgaum

ಸಿಎಂ ಬಜೆಟ್ ಉತ್ತರದ ವೇಳೆ ವಿಪಕ್ಷ ಧರಣಿ, ಸಭಾತ್ಯಾಗ..

ಬೆಂಗಳೂರು:  ವಿಧಾನಸೌಧದಲ್ಲಿ ಪಾಕಿ ಸ್ತಾನದ ಪರ ಘೋಷಣೆ ಕೂಗಿದವರನ್ನು ಬಂಧಿಸಬೇಕು. ಆ ಘಟನೆಯ ನೈತಿಕ ಹೊಣೆ ಹೊತ್ತು ಸರ್ಕಾರ ರಾಜೀನಾಮೆ ನೀಡಬೇಕೆಂದು ನಿನ್ನೆ ವಿಧಾನಸಭೆಯಲ್ಲಿ ನಡೆಸಿದ ಪ್ರತಿಭಟನೆಯನ್ನು ಇಂದು ಮುಂದುವರೆಸಿದ ಬಿಜೆಪಿ ಶಾಸಕರು, ಕಾಗಪತ್ರಗಳನ್ನು ಹರಿದು ತೂರಿ, ಸರ್ಕಾರದ ವಿರುದ್ಧ ಕೆಲಕಾಲ ಘೋಷಣೆ ಕೂಗಿ ಸಭಾತ್ಯಾಗ ಮಾಡಿದರು..

 

ಇಂದು ಬೆಳಗ್ಗೆ ಸದನ ಸಮಾವೇಶಗೊಂಡಾಗ ಬಿಜೆಪಿಯ ಶಾಸಕರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಯಲ್ಲಿ ಧರಣಿ ಮುಂದುವರೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಇಡೀ ಪ್ರಪಂಚವೇ ನಮ್ಮ ಕಡೆ ನೋಡುತ್ತಿದೆ. ಆದರೂ ದೇಶದ್ರೋಹಿಗಳ ಮೇಲೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಯಾರನ್ನೂ ಬಂಧಿಸಿಲ್ಲ.

ಸರ್ಕಾರ ಮೌನವಾಗಿದೆ. ಹೀಗಾದರೆ ರಾಜ್ಯದ ಜನತೆಗೆ ಯಾವ ಸಂದೇಶ ರವಾನೆಯಾಗುತ್ತದೆ. ರಕ್ಷಣೆ ಕೊಡಲಿ ಎಂಬ ಉದ್ದೇಶದಿಂದ ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ವಿಧಾನಸೌಧ ಉಗ್ರರ ತಾಣವಾಗಲು ಬಿಡಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದರು..

 

ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಈ ವಿಚಾರದ ಬಗ್ಗೆ ನಿನ್ನೆ ಚರ್ಚೆಯಾಗಿದೆ. ಸರ್ಕಾರವು ಉತ್ತರ ಕೊಟ್ಟಿದೆ. ಘಟನೆ ಬಗ್ಗೆ ತನಿಖೆ ಕೈಗೊಂಡಿರುವುದಾಗಿ ಹೇಳಿದೆ. ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿಗಳು ಉತ್ತರ ಕೊಡುತ್ತಾರೆ. ಧರಣಿ ಕೈಬಿಟ್ಟು ಸುಗಮ ಕಲಾಪಕ್ಕೆ ಸಹಕಾರ ಕೊಡಬೇಕು ಎಂದರು. ಆಗ ಆರ್.ಅಶೋಕ್ ಅವರು, ಕೋಲಾರದಲ್ಲಿ ಈ ಹಿಂದೆ ದಲಿತರನ್ನು ಸುಟ್ಟು ಹಾಕಿದರು. ಆಗ ಗೃಹಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಸಭೆಯಲ್ಲಿ ಕಣ್ಣೀರು ಹಾಕಿದರು. ಅದು ಅವರ ಕಳಕಳಿ. ಆದರೆ ಈ ಸರ್ಕಾರಕ್ಕೆ ಯಾವುದೇ ಜವಾಬ್ದಾರಿ ಇಲ್ಲ. ನೈತಿಕ ಹೊಣೆ ಹೊತ್ತಿಲ್ಲ ಎಂದು ಆರೋಪಿಸಿದರು..