Belagavi News In Kannada | News Belgaum

ಹಿರಿಯ ಪತ್ರಕರ್ತ ರಾಮ ಮನಗೂಳಿ ನಿಧನ

ಮುಧೋಳ : ನಾಡಿನ ಹಿರಿಯ ಪತ್ರಕರ್ತರು ಹಾಗೂ ಬಾಗಲಕೋಟೆ ರಾಮ ಮನಗೂಳಿಯವರು ಅನಾರೋಗ್ಯದಿಂದ ಬಾಗಲಕೋಟೆಯ ಕೆರೋಡಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ರಾಮ ಮನಗೂಳಿಯವರು ಸಂಯುಕ್ತ ಕರ್ನಾಟಕ ಪತ್ರಿಕೆಯ ಜಿಲ್ಲಾ ವರದಿಗಾರರು, ಸ್ಥಾನಿಕ ಸಂಪಾದಕರು ಹಾಗೂ ನಾಡುನುಡಿ ದಿನ ಪತ್ರಿಕೆಯ ಸಂಪಾದಕರಾಗಿದ್ದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯರಾಗಿದ್ದರು. ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗೆ ಇವರು ಭಾಜನರಾಗಿದ್ದರು.
2002 ರಲ್ಲಿ ಬಾಗಲಕೋಟೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಬಾಗಲಕೋಟೆಯಲ್ಲಿ ಇವರ ನೇತೃತ್ವದಲ್ಲಿ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಯಶಸ್ವಿಯಾಗಿ ನಡೆಸಿಕೊಟ್ಟರು. ಬಾಗಲಕೋಟೆ ಜಿಲ್ಲೆಯಲ್ಲಿ ಪ್ರೆಸ್ ಕ್ಲಬ್ ವತಿಯಿಂದ ಅವರ ನೇತೃತ್ವದಲ್ಲಿ ಬೆಳಗಾವಿ ವಿಭಾಗ ಮಟ್ಟದ ಪತ್ರಕರ್ತರ ಕಾರ್ಯಾಗಾರ ನಡೆಸಿದ್ದು ವಿಶೇಷವಾಗಿತ್ತು. ನಾಡಿನ ಹಿರಿಯ ಪತ್ರಕರ್ತರಾಗಿದ್ದ ರಾಮ ಮನಗೂಳಿಯವರು ಪತ್ರಕರ್ತರಿಗೆ ಸದಾ ಮಾರ್ಗದರ್ಶನ ನೀಡುವ ಜೊತೆಗೆ, ಕಾರ್ಯನಿರತ ಪತ್ರಕರ್ತರ ಸಂಘಟನೆಗೂ ಹೆಚ್ಚು ಒತ್ತು ನೀಡುತ್ತಿದ್ದರು. ಸಂಘಟನೆಗೆ ಅಧ್ಯಕ್ಷರು, ಪದಾಧಿಕಾರಿಗಳ ಆಯ್ಕೆಯ ಸಂದರ್ಭದಲ್ಲಿ ಯಾವುದೇ ಚುನಾವಣೆ ನಡೆಸದಂತೆ ಎಲ್ಲರೊಂದಿಗೆ ಮಾತನಾಡಿ, ಅವಿರೋಧ ಆಯ್ಕೆಯಾಗುವಂತೆ ನೋಡಿಕೊಳ್ಳುತ್ತಿದ್ದ ಅವರ ಕೆಲಸ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ಇನ್ನು ಪತ್ರಕರ್ತರಿಗೆ ಯಾರಿಗೆ ಸಮಸ್ಯೆಯಾದರೂ ತಕ್ಷಣ ಸ್ಪಂದಿಸುವ ಜೊತೆಗೆ ಸಹಾಯ ಮಾಡುವ ಮನೋಭಾವ ಹೊಂದಿದ್ದರು.
ಪ್ರತಿಯೊಂದು ಪಕ್ಷದ ರಾಜಕಾರಣಿಗಳ ಜೊತೆಗೆ ಒಳ್ಳೆಯ ಆತ್ಮೀಯತೆ ಹೊಂದಿದ್ದರು. ರಾಮ ಮನಗೂಳಿ ಅವರು ನೇರವಾಗಿ ತಮ್ಮ ಲೇಖನಿ ಮೂಲಕ ಬರೆಯುತ್ತಿದ್ದರು. ಯಾವುದೇ ರಾಜೀ ಇಲ್ಲದೇ , ಮುಲಾಜಿಲ್ಲದೇ ಇದ್ದದ್ದನ್ನು ಇದ್ದ ಹಾಗೆ ಬರವಣಿಗೆಯ ಮೂಲಕ ಬೆಳಕು ಚೆಲ್ಲುತ್ತಿದ್ದರು. ಹಿರಿಯ ಪತ್ರಕರ್ತರಾದ ರಾಮ ಮನಗೂಳಿಯವರು ಇಂದು ಅಗಲಿದ್ದು, ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಎಲ್ಲರೂ ಪ್ರಾರ್ಥಿಸಿದ್ದಾರೆ.