Belagavi News In Kannada | News Belgaum

ಶಿಕ್ಷಕರಿಂದ ಸಮಾಜ ಕಟ್ಟುವ ಕಾರ್ಯವಾಗಲಿ: ಸಚಿವ್ ಸತೀಶ್‌ ಜಾರಕಿಹೊಳಿ.

ಯಮಕನಮರಡಿ: ಮಕ್ಕಳಿಗೆ ವಿದ್ಯಾದಾನ ಮಾಡಿ ಉತ್ತಮ ನಾಗರಿಕರನ್ನಾಗಿ ರೂಪಿಸಿರುವ ಶಿಕ್ಷಕರ ಶೈಕ್ಷಣಿಕ ಸೇವೆ ಅನನ್ಯವಾದದ್ದು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು. 

ಶನಿವಾರ ಬಸ್ಸಾಪೂರ ಗ್ರಾಮದ ಶ್ರೀ ಮಹಾಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ನಡೆದ ಬಗರನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಧಾನ ಗುರುಗಳಾದ ಈರಣ್ಣಾ ಮಹಾದೇವ ಜಗಜಂಪಿಯವರ ಸೇವಾ ನಿವೃತ್ತಿ ಹಾಗೂ ಷಟ್ಟಬ್ಧಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಈರಣ್ಣಾ ಜಗಜಂಪಿಯವರು ತಮ್ಮ ಶೈಕ್ಷಣಿಕ ಸೇವಾವಧಿಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸಿದ್ದು, ಅವರೊಬ್ಬ ಒಳ್ಳೆಯ ಶಿಕ್ಷಕರೆಂದು ಈ ಭಾಗದಲ್ಲಿ ಎನಿಸಿಕೊಂಡಿದ್ದಾರೆ. ಈರಣ್ಣಾ ಜಗಜಂಪಿಯವರು ನಿವೃತ್ತಿಯಾದರೂ ತಮ್ಮ ಸಮಾಜ ಸೇವೆ ಮುಂದುವರೆಸಿಕೊಂಡು ಹೋಗಬೇಕು. ಸಮಾಜದಲ್ಲಿ ಬೇರು ಬಿಟ್ಟಿರುವ ಜಾತಿ ಪದ್ಧತಿ, ಸಂಘರ್ಷ, ಮೂಢನಂಬಿಕೆ, ಅಂದಶ್ರದ್ದೆಗಳನ್ನು ಹೋಗಲಾಡಿಸಬೇಕೆಂದರು.

ಯಮಕನಮರಡಿ ಮತಕ್ಷೇತ್ರದಲ್ಲಿ ಕಳೆದ 18 ವರ್ಷಗಳಿಂದ ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ರಸ್ತೆ, ಕುಡಿಯುವ ನೀರು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಯಮಕನಮರಡಿ ಮತಕ್ಷೇತ್ರದಲ್ಲಿ ಒಟ್ಟು 50 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಇನ್ನೂ 48 ಶಾಲಾ ಕೊಠಡಿಗಳನ್ನು ನಿರ್ಮಿಸುವ ಯೋಜನೆ ಹೊಂದಿದ್ದು, ಇದರಿಂದ ಕ್ಷೇತ್ರದಲ್ಲಿ ಶೇ.100% ಶಾಲಾ ಕೊಠಡಿಗಳನ್ನು ನಿರ್ಮಿಸುವ ಹೆಗ್ಗಳಿಕೆಯಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಗುಟಗುದ್ದಿಯ ಬ್ರಹ್ಮಶ್ರೀ ಶಿವಾನಂದ ಮಹಾಸ್ವಾಮಿಗಳು, ಶ್ರೀ ಕೃಪಾನಂದ ಮಹಾಸ್ವಾಮಿಗಳು, ಬಸ್ಸಾಪೂರ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಶಿಕ್ಷಕ, ಸಾಹಿತಿ ಆರ್.ಎಸ್. ಪಂಗನ್ನವರ ಮಾತನಾಡಿ, ಈರಣ್ಣಾ ಜಗಜಂಪಿಯವರು ಮಕ್ಕಳಿಗೆ ಶಿಕ್ಷಣ ಕಲಿಸುವುದರ ಜೊತೆಗೆ ಸಮಾಜಮುಖಿಯಾಗಿ ತಮ್ಮ ಸೇವೆಯನ್ನು ಸಮಾಜಕ್ಕೆ ಮಾಡಿದ್ದಾರೆ. ಉತ್ತಮ ಯೋಜನೆಗಳನ್ನು ಹಾಕಿಕೊಂಡು ಮುಂಬರುವ ದಿನಗಳಲ್ಲಿ ಅವರೊಬ್ಬರು ಪ್ರಭುದ್ದತೆವುಳ್ಳ ರಾಜಕಾರಣಿಯಾಗುವ ಲಕ್ಷಣಗಳಿವೆ. ತಮ್ಮ ಶಿಕ್ಷಣ ಸೇವಾವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಸೇವೆಯನ್ನು ಮಾಡಿದ್ದಾರೆ. ಅವರೊಬ್ಬರು ಬಹುಮುಖ ಪ್ರತಿಭೆಯೆಂದು ಬಣ್ಣಿಸಿದರು.

ನಿವೃತ್ತ ಶಿಕ್ಷಕ ಜಿ.ವ್ಹಿ. ಮಾಳಗಿ, ಜಿ.ಪಂ ಮಾಜಿ ಸದಸ್ಯ ಸುರೇಖಾ ಈರಣ್ಣಾ ಜಗಜಂಪಿ ಮಾತನಾಡಿದರು. ಬಿ.ಇ.ಓ ಪ್ರಭಾವತಿ ಪಾಟೀಲ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸವಿತಾ ಹಲಕಿ, ಬಸ್ಸಾಪೂರ ಗ್ರಾ.ಪಂ ಅಧ್ಯಕ್ಷ ಭೀಮಸಿ ಕಳ್ಳಿಮನಿ, ಚಿಕ್ಕೋಡಿ ಅಕ್ಷರದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ಆರ್.ಡಿ. ತೇರದಾಳ, ವಿಶ್ವನಾಥ ಕಮತೆ, ರಾಕೇಶ ಚಿಂಚಣಿ, ಮಲ್ಲಿಕಾರ್ಜುನ ಜಗಜಂಪಿ, ರಾಜುಗೌಡ ಪಾಟೀಲ, ರವಿ ಕರಾಳೆ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗಣ್ಯರು, ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕ ಗಿರೀಶ ಜಗಜಂಪಿ, ಭಜಂತ್ರಿ ಇವರು ಕಾರ್ಯಕ್ರಮ ನಡೆಸಿಕೊಟ್ಟರು.