Belagavi News In Kannada | News Belgaum

ಬಿಜೆಪಿಯವರು ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತಿದ್ದಾರೆ

ಭರವಸೆಗಳನ್ನು ಈಡೇರಿಸುವ ಕೆಲಸ ಮಾಡಿದ್ದೇವೆ: ದರ್ಶನಾಪುರ

ಕೆಂಭಾವಿ:ವಿರೋಧ ಪಕ್ಷದವರು ಭಾವನಾತ್ಮಕ ವಿಷ ಬೀಜ ಬಿತ್ತುವ ಕೆಲಸದ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಯಾವುದೇ ಯೋಜನೆಗಳು ಸ್ಥಗಿತಗೊಳಿಸುವ ಮಾತೆ ಇಲ್ಲ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಯಾದಗಿರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ ವಿವಿಧ ಇಲಾಖೆಗಳ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ಹೋಬಳಿ ಮಟ್ಟದ ಸಾರ್ವಜನಿಕ ಅಹವಾಲು ಸ್ವೀಕಾರ ಹಾಗೂ ಇತ್ಯಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟು ಅಧಿಕಾರ ಕೊಟ್ಟಿದ್ದೀರಿ ನಮ್ಮ ಸರ್ಕಾರ ಯಾವತ್ತು ಜನಪರ ನಿಲುವನ್ನೇ ಹೊಂದಿದೆ. ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡಿದ್ದೇವೆ, ಅಭಿವೃದ್ಧಿ ವಿಷಯಕ್ಕೆ ಬಂದರೆ ಪಟ್ಟಣದಲ್ಲಿ ನಮ್ಮ ಕ್ಲಿನಿಕ್, ರೈತ ಸಂಪರ್ಕ ಕೇಂದ್ರ, ನಾಡ ಕಛೇರಿ, ಶತಮಾನ ಪೂರೈಸಿದ ಪೊಲೀಸ್ ಠಾಣೆಯ ನೂತನ ಕಟ್ಟಡ, ಯಾತ್ರಿ ನಿವಾಸ ಇಂದು ಉದ್ಘಾಟನೆ ಗೊಂಡಿವೆ. ಕೆಕೆಆರ್ ಡಿಬಿ ಯೋಜನೆ ಅಡಿಯಲ್ಲಿ ಈ ಭಾಗದ ಶಾಲಾ ಕೋಣೆಗಳ ರಿಪೇರಿ ಮತ್ತು ನಿರ್ಮಾಣ ಹಾಗೂ ಶೈಕ್ಷಣಿಕ ಸೌಲಭ್ಯಕ್ಕಾಗಿ 3 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ. ಅಲ್ಲದೆ ಮಲ್ಲಾ ಕೆಂಭಾವಿ, ಮಾಲಹಳ್ಳಿ, ಕರಡಕಲ್ ರಸ್ತೆ ನಿರ್ಮಾಣ, ವಲಯದಲ್ಲಿ ಬರುವ ಹಳ್ಳಿಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಅನುದಾನ ಕಲ್ಪಿಸಲಾಗಿದೆ. ವ್ಯವಸಾಯ ಸೇವಾ ಸಹಕಾರಿ ಸಂಘಗಳ ರೈತರ ಸಾಲ ಮನ್ನಾ ಯೋಜನೆ, ಆಲ್ಹಾಳ ಗ್ರಾಮದಲ್ಲಿ 220 ಕೆವಿ ವಿದ್ಯುತ್ ವಿತರಣಾ ಕೇಂದ್ರ ಮಂಜೂರು ಮಾಡಲಾಗಿದೆ ಎಂದ ಅವರು ಪಟ್ಟಣದ ರೇವಣಸಿದ್ಧೇಶ್ವರ ದೇವಸ್ಥಾನದ ಸೇರಿದಂತೆ ವಿವಿಧ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 30 ಲಕ್ಷ ರೂಪಾಯಿ ಅನುದಾನ ಕಲ್ಪಿಸಲಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕೆಂಭಾವಿ ವಲಯದಾದ್ಯಾಂತ ಸಾರ್ವಜನಿಕರಿಂದ ಸುಮಾರು 200 ಕ್ಕೂ ಅಧಿಕ ಅಹವಾಲು ಸ್ವೀಕರಿಸಿ, ತಕ್ಷಣ ಪರಿಹಾರಕ್ಕೆ ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ ಸಂಗೀತಾ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೊಟ್ಟೆಪ್ಪಗೋಳ್, ಡಿ ಹಚ್ ಓ  ಡಾ. ಪ್ರಭುಲಿಂಗ ಮಾನಕರ್,  ಎಸಿ ಹಂಪಣ್ಣ ಸಜ್ಜನ್, ಕೃಷಿ ಜಂಟಿ ನಿರ್ದೆಶಕ ಕೆ. ಹೆಚ್ ರವಿ, ಸಹಾಯಕ ಕೃಷಿ ನಿರ್ದೇಶಕಿ ಮಂಜುಳಾ, ಮಹಿಳಾ ಮಕ್ಕಳ ಕಲ್ಯಾಣಾಧಿಕಾರಿ ಈರಣ್ಣಗೌಡ,  ತಾಲೂಕು ದಂಡಾಧಿಕಾರಿ ಕೆ ವಿಜಯಕುಮಾರ, ಟಿ. ಹೆಚ್. ಓ.  ಡಾ. ಆರ್.ವಿ ನಾಯಕ್, ತಾಲೂಕು ಇಓ ಬಸವರಾಜ ಸಜ್ಜನ್, ಉಪ ತಹಸೀಲ್ದಾರ ಮಲ್ಲಿಕಾರ್ಜುನ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪಕ್ಷದ ಹಿರಿಯ ಮುಖಂಡರು , ಸಾರ್ವಜನಿಕರು ಭಾಗವಹಿಸಿದ್ದರು.
ನಮ್ಮ ಕ್ಲಿನಿಕ್, ರೈತ ಸಂಪರ್ಕ ಕೇಂದ್ರ, ನಾಡ ಕಛೇರಿ, ಶತಮಾನ ಪೂರೈಸಿದ ಪೋಲೀಸ್ ಠಾಣೆಯ ನೂತನ ಕಟ್ಟಡ, ಯಾತ್ರಿ ನಿವಾಸ ಉದ್ಘಾಟನೆ.
ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 30 ಲಕ್ಷ ಅನುಧಾನ.
ಕೆ ಕೆ ಆರ್ ಡಿಬಿ ಯೋಜನೆ ಅಡಿಯಲ್ಲಿ ಶಾಲಾ ಕೋಣೆಗಳ ರಿಪೇರಿ ಮತ್ತು ನಿರ್ಮಾಣ.
ಸುಮಾರು ಎರಡು ನೂರಕ್ಕೂ ಅಧಿಕ ಅಹವಾಲು ಸ್ವೀಕಾರ.