Belagavi News In Kannada | News Belgaum

ರೈತರ ಬಹುದಿನಗಳ ಕನಸು ಇಂದು ನನಸು: ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ:  ರೈತರ ಬಹುದಿನಗಳ ಕನಸಾಗಿದ್ದ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಇಂದು ಕೊನೆಗೂ ನನಸಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಜಿಲ್ಲೆ ಅಥಣಿ ತಾಲ್ಲೂಕಿನ ಕೊಟ್ಟಲಗಿಯ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಶಂಕುಸ್ಥಾಪನಾ ಸಮಾರಂಭಲ್ಲಿ  ಅವರು ಮಾತನಾಡಿ,  ತಾಳ್ಮೆ ಹಾಗೂ ಛಲ ಇದ್ದರೆ ಎಂತಹ ಕೆಲಸ ಸಹ ಸಾಧ್ಯವಾಗಲಿದೆ ಎಂಬುದಕ್ಕೆ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ  ಅನುಷ್ಠಾನಗೊಂಡಿರುವುದು ನಿದರ್ಶನವಾಗಿದೆ.  ಮುಖ್ಯವಾಗಿ ಸ್ಥಳಿಯ ಶಾಸಕ  ಲಕ್ಷ್ಮಣ ಸವದಿ ಅವರ ಪರಿಶ್ರಮದಿಂದ ಇಂದಿನ ಕೆಲಸ ನೆರವೇರಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಅಥಣಿ ತಾಲೂಕು ಬರಪೀಡಿತ ಪ್ರದೇಶವಾಗಿತ್ತು, ಕಳೆದ 10 ವರ್ಷಗಳಲ್ಲಿ ಸಾಕಷ್ಟು ನೀರಾವರಿ  ಯೋಜನೆಗಳಿಂದ ಅಥಣಿ  ತಾಲೂಕು ಹಂತ-ಹಂತವಾಗಿ ಅಭಿವೃದ್ಧಿ ಹೊಂದುತ್ತಿದೆ. ಈ ಯೋಜನೆಗಳಿಂದ  ಈ ಭಾಗದ ಅನ್ನದಾತರು   ಅಭಿವೃದ್ಧಿಹೊಂದಲು  ಸಹಕಾರಿಯಾಗಿದೆ.  ಕೃಷಿ  ಉತ್ಪಗಳಿಂದ ರೈತರು  ಆರ್ಥಿಕವಾಗಿ ಬದಲಾವಣೆಯಾಗಿದ್ದಾರೆ.  ಬಹಳಷ್ಟು ನೀರಾವರಿ ಯೋಜನೆಗಳಿಂದ ರೈತರಿಗೆ ಇದೊಂದು ಸಂಜೀವಿನಿಯಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಥಣಿ ತಾಲೂಕಿಗೆ ಕರಿ ಮಸೂತಿ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ರೈತರ ಹಿತಾಸಕ್ತಿ ಅನುಗುಣವಾಗಿ ನಮ್ಮ‌ ಸರ್ಕಾರ ಕೆಲಸ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳು ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ಚಾಲನೆ ನೀಡುವ ಮೂಲಕ ನಮ್ಮ ಸರ್ಕಾರ ಜನರ ಪರವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು.

ಶಾಸಕ ಲಕ್ಷ್ಮಣ್ ಎಂ‌ ಸವದಿ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ,  ಡಿಸಿಎಂ ಹಾಗೂ ಬೃಹತ್ ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಬ ಹಟ್ಟಿಹೊಳಿ, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್, ಶಾಸಕರಾದ ಮಹೇಂದ್ರ ತಮ್ಮಣ್ಣವರ, ಅಶೋಕ ಎಂ ಪಟ್ಟಣ ಸೇರಿ ಹಲವು ನಾಯಕರು ವೇದಿಕೆಯಲ್ಲಿದ್ದರು.//////