Belagavi News In Kannada | News Belgaum

ಶಾಸಕ ಸವದಿಗೆ ಸದ್ಯದಲ್ಲೇ ಒಳ್ಳೆಯ ಭವಿಷ್ಯ ಇದೆ: ಸಿಎಂ ಸಿದ್ದರಾಮಯ್ಯ ಭರವಸೆ

ಬೆಳಗಾವಿ:  1500 ಕೋಟಿ ವೆಚ್ಚದ ಬೃಹತ್ ಏತ ನೀರಾವರಿ ಯೋಜನೆಯನ್ನು ಬೆಳಗಾವಿ ಜಿಲ್ಲೆಗೆ ಕೊಡುವ ಮೂಲಕ ಲಕ್ಷ್ಮಣ ಸವದಿ ಅವರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ. ನಮ್ಮ ಕಾಂಗ್ರೆಸ್ ಸರ್ಕಾರ ಈ ಬೃಹತ್ ಯೋಜನೆಯನ್ನು ಬೆಳಗಾವಿ ಜಿಲ್ಲೆಗೆ ನೀಡಿದ್ದನ್ನು ಮರೆಯಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಜಿಲ್ಲೆ ಅಥಣಿ ತಾಲ್ಲೂಕಿನ ಕೊಟ್ಟಲಗಿಯ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಈ ಯೋಜನೆಯಿಂದ ಅಥಣಿ ತಾಲ್ಲೂಕಿನ ಶೇ95 ರಷ್ಟು ಭೂಮಿ, ಅಂದರೆ 50 ಸಾವಿರ ಎಕರೆ ಜಮೀನು ನೀರಾವರಿ ಸೌಲಭ್ಯ ಪಡೆಯಲಿವೆ. ಅಲ್ಲದೇ ಈ ಯೋಜನೆಯಿಂದ ಎರಡು ರೀತಿಯ ಲಾಭ ಆಗಲಿದೆ. ಮೊದಲಿಗೆ ಒಣ ಭೂಮಿ ಇರುವ ಜಮೀನುಗಳಿಗೆ ನೀರು ಒದಗುತ್ತದೆ. ಎರಡನೆಯದಾಗಿ ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲ ಅಭಿವೃದ್ಧಿ ಕೂಡ ಆಗುತ್ತದೆ ಎಂದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಉದಾಹರಣೆಗಳನ್ನು ನೀಡಿ  ವಿವರಿಸಿದರು.


ಕೇಂದ್ರದ ಹಾಲಿ ಸರ್ಕಾರ ಮತ್ತು ರಾಜ್ಯದಲ್ಲಿ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ರಾಜ್ಯದ ಯಾವ ನೀರಾವರಿ ಯೋಜನೆಗಳಿಗೂ ಬೆಂಬಲ ನೀಡಲಿಲ್ಲ. ಕೃಷ್ಣ ಮೇಲ್ದಂಡೆ, ಮಹದಾಯಿ, ಭದ್ರಾ ಮೇಲ್ದಂಡೆ, ಮೇಕೆದಾಟು ಯೋಜನೆಗಳಿಗೆ ಕೇಂದ್ರ ಒಂಚೂರು ಸಹಕಾರ ನೀಡುತ್ತಿಲ್ಲ. ಬೆಳಗಾವಿಯಲ್ಲಿ ಗೆದ್ದಿರುವ ಇಬ್ಬರು ಸಂಸದರು ಸೇರಿ ಬಿಜೆಪಿಯ ಒಬ್ಬೇ ಒಬ್ಬ ಸಂಸದ ಪಾರ್ಲಿಮೆಂಟಲ್ಲಿ ದ್ವನಿ ಎತ್ತಲಿಲ್ಲ. ಇದು ಬೆಳಗಾವಿ ಜನತೆಗೆ, ರಾಜ್ಯದ ಜನತೆಗೆ ಬಿಜೆಪಿ ಸಂಸದರು ಬಗೆದ ದ್ರೋಹ ಅಲ್ಲವೇ ಎಂದು ಸಿಎಂ ಖಾರವಾಗಿ ಪ್ರಶ್ನಿಸಿದರು.
ನೀರಾವರಿ ಯೋಜನೆಗಳ ಬಗ್ಗೆಯೂ ಈ ಸಂಸದರು ಬಾಯಿಯನ್ನೇ ಬಿಡಲಿಲ್ಲ, ರಾಜ್ಯಕ್ಕೆ ಆರ್ಥಿಕವಾಗಿ ವಂಚಿಸುತ್ತಿರುವ ಬಗ್ಗೆಯೂ ತುಟಿ ಬಿಡದ ಈ ಸಂಸದರಿಗೆ ನೀವು ಕೊಟ್ಟ ಓಟಿಗೆ ಏನು ಗೌರವ ಬಂತು ಹೇಳಿ. ಬಿಜೆಪಿ ಇವತ್ತಿನವರೆಗೂ ನುಡಿದಂತೆ ನಡೆದ ಒಂದೇ ಒಂದು ಉದಾಹರಣೆ ಇದೆಯಾ ನೀವೇ ವಿಚಾರ ಮಾಡಿ. ಕಾಂಗ್ರೆಸ್ ಸರ್ಕಾರ, ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡು ನೀವು ಕೊಟ್ಟ ಓಟಿಗೆ ಗೌರವ ಕೊಟ್ಟಿದ್ದೇವೆ. ಹೌದೋ ಇಲ್ಲವೋ ಎದೆ ಮುಟ್ಟಿಕೊಂಡು ಕೇಳಿಕೊಳ್ಳಿ ಎಂದು ಸಿಎಂ ಕರೆ ನೀಡಿದರು.

ನಿಮ್ಮ ಬದುಕಿಗೆ ಆಸರೆ ಆಗುತ್ತಿರುವ, ಕುಟುಂಬದ ಕಷ್ಟಗಳಿಗೆ ಸ್ಪಂದಿಸುವ ಕಾರ್ಯಕ್ರಮ ಕೊಡುತ್ತಿರುವ ನಾವು ಬೇಕೋ-ದೇವರ ಹೆಸರಲ್ಲಿ ನಿಮ್ಮ ಭಾವನೆ ಕೆರಳಿಸಿ ನಿಮ್ಮ ಬದುಕಿಗೆ ವಂಚಿಸುತ್ತಿರುವ ಬಿಜೆಪಿ ಬೇಕಾ? ನಿಮ್ಮ ಹೃದಯವನ್ನು ಕೇಳಿಕೊಳ್ಳಿ. ನಿಮ್ಮ ಹೃದಯ ಹೇಳಿದವರಿಗೆ ಮತ ಹಾಕಿ ಎಂದು ಅವರು, ನರೇಂದ್ರ ಮೋದಿಯವರ ಸುಳ್ಳುಗಳಿಗೆ, ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯಗಳಿಗೆ ಕೋಲೆ ಬಸವನಂತೆ ತಲೆ ಆಡಿಸುವ ಬಿಜೆಪಿಯನ್ನು ತಿರಸ್ಕರಿಸಿ. ನಾವು ಕೆಲಸ ಮಾಡಿ ಕೂಲಿ ಕೇಳುತ್ತಿದ್ದೇವೆ. ಕೆಲಸ ಮಾಡಿದವರಿಗೆ ನೀವು ಕೂಲಿ ಕೊಡಿ ಎಂದು ಮನವಿ ಮಾಡಿದರು.

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಮಾತನಾಡಿ, ರೈತರ  ಬಹುದಿನಗಳ  ಕನಸಾಗಿರುವ   ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಇಂದು ನನಸಾಗುತ್ತಿರುವುದು ಹೆಮ್ಮೆಯ ಸಂಗತಿ.    ಈ ಭಾಗಕ್ಕೆ ನೀರಾವರಿ ಯೋಜನೆ ಅನುಷ್ಠಾನಗೊಳ್ಳಿಸಲು ಶಾಸಕ ಲಕ್ಷ್ಮಣ ಸವದಿ ಅವರು ಬಹಳಷ್ಟು ಪ್ರಯತ್ನ ಮಾಡಿದ್ದಾರೆ.   ಜಿಲ್ಲೆಯಲ್ಲಿ ಅಥಣಿ ತಾಲೂಕು ಬರಪೀಡಿತ ಪ್ರದೇಶವಾಗಿತ್ತು, ಕಳೆದ 10 ವರ್ಷಗಳಲ್ಲಿ ಸಾಕಷ್ಟು ನೀರಾವರಿ  ಯೋಜನೆಗಳಿಂದ ಅಥಣಿ  ತಾಲೂಕು ಹಂತ-ಹಂತವಾಗಿ ಅಭಿವೃದ್ಧಿ ಹೊಂದುತ್ತಿದೆ. ಈ ಯೋಜನೆಗಳಿಂದ  ಈ ಭಾಗದ ಅನ್ನದಾತರು   ಅಭಿವೃದ್ಧಿಹೊಂದಲು  ಸಹಕಾರಿಯಾಗಿದೆ.  ಕೃಷಿ  ಉತ್ಪಗಳಿಂದ ರೈತರು  ಆರ್ಥಿಕವಾಗಿ ಬದಲಾವಣೆಯಾಗಿದ್ದಾರೆ.  ಬಹಳಷ್ಟು ನೀರಾವರಿ ಯೋಜನೆಗಳಿಂದ ರೈತರಿಗೆ ಇದೊಂದು ಸಂಜೀವಿನಿಯಾಗಿದೆ ಎಂದು ಹೇಳಿದರು.

 

ಶೀಘ್ರದಲ್ಲೇ ಈ ಕಾಮಗಾರಿಯನ್ನು ಪೂರ್ಣಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಲು ಪ್ರಯತ್ನಿಸಲಾಗುವುದು.ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಥಣಿ ತಾಲೂಕಿಗೆ ಕರಿ ಮಸೂತಿ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ರೈತರ ಹಿತಾಸಕ್ತಿ ಅನುಗುಣವಾಗಿ ನಮ್ಮ‌ ಸರ್ಕಾರ ಕೆಲಸ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳು ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ಚಾಲನೆ ನೀಡುವ ಮೂಲಕ ನಮ್ಮ ಸರ್ಕಾರ ಜನರ ಪರವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಸಲು ಹೆಮ್ಮೆ ಅನ್ನಿಸುತ್ತದೆ ಎಂದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ  ಮಾತನಾಡಿ,  ಕಾಂಗ್ರೆಸ್ ಎಂದರೆ ಬದ್ದತೆ, ಬಸವಣ್ಣನವರು ಕಂಡ ಸಮಾನತೆಯ ಕನಸನ್ನು ನನಸು ಮಾಡುವ ಪಕ್ಷ. ಆದರೆ ಬಿಜೆಪಿಯವರು ನಮ್ಮ ಗ್ಯಾರಂಟಿಗಳ ಬಗ್ಗೆ ಬಹಳಷ್ಟು ಕೀಳಾಗಿ ಮಾತನಾಡಿದರು. ಗ್ಯಾರಂಟಿ ಸುಳ್ಳು ಎಂದರು, ಗ್ಯಾರಂಟಿಯಿಂದ ಮಹಿಳೆಯರು ದೇವಸ್ಥಾನಗಳಿಗೆ ತಿರುಗುತ್ತಿದ್ದಾರೆ, ಗಂಡಸರು ಕುಡಿದು ಹಾಳಾಗುತ್ತಿದ್ದಾರೆ ಎಂದು ಅವಮಾನ ಮಾಡಿದರು. ಆದರೆ ಮಹಿಳಾ ಸ್ವಾವಲಂಬನೆ ಕಾಂಗ್ರೆಸ್ ಬದ್ದತೆ. ಅದನ್ನು ಅತ್ಯಂತ ಸಮರ್ಥವಾಗಿ ಈಡೇರಿಸಿದ್ದೇವೆ ಎಂದು ಹೇಳಿದರು.

ಲಕ್ಷ್ಮಣ ಸವದಿಯವರು ತಮ್ಮ ಕ್ಷೇತ್ರದ ಜನರಿಗೆ ನೀರಾವರಿ ಯೋಜನೆ ಬೇಕೆನ್ನುವ ಬೇಡಿಕೆಯನ್ನು ಮಾತ್ರ ಕಾಂಗ್ರೆಸ್ ಸೇರುವಾಗ ಇಟ್ಟಿದ್ದರು. ಅದರಂತೆ ಈಗ 1486 ಕೋಟಿ ರೂ.ಗಳ ಈ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಮಂಜೂರಾಗಿದೆ. ನನ್ನ ಕ್ಷೇತ್ರಕ್ಕೆ ಕೂಡ 800 ಕೋಟಿ ರೂ.ಗಳ ಯೋಜನೆ ಮಂಜೂರು ಮಾಡಲಾಗಿದೆ. 2018ರಲ್ಲೇ ಯೋಜನೆ ಮಂಜೂರಾಗಿತ್ತು. ಆದರೆ ನಂತರ ಬಂದ ಸರಕಾರ ನನಗೆ ಹೆಸರು ಬರುತ್ತದೆ ಎಂದು ಹೇಳಿ ನನ್ನ ಕ್ಷೇತ್ರದ ಯೋಜನೆ ತಡೆದಿದ್ದರು. ಈಗ ಮತ್ತೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರು ಯೋಜನೆಗೆ ಮಂಜೂರಾತಿ ನೀಡಿದ್ದಾರೆ. ಅವರಿಗೆ ನಾನು ಕೋಟಿ ಕೋಟಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದ ಅವರು, ಬರುವ ಲೋಕಸಭಾ ಚುನಾವಣೆಯಲ್ಲಿ ನಮಗೆ ಆಶಿರ್ವಾದ ಮಾಡಿ ಎಂದು ಕೋರಿದರು.

 


ಈ ವೇಳೆ ಶಾಸಕರಾದ ಲಕ್ಷ್ಮಣ್ ಎಂ‌. ಸವದಿ, ಉಪ ಮುಖ್ಯಮಂತ್ರಿಗಳು ಹಾಗೂ ಬೃಹತ್ ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್, ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್, ಶಾಸಕರಾದ ಮಹೇಂದ್ರ ತಮ್ಮಣ್ಣವರ, ಅಶೋಕ ಪಟ್ಟಣ, ಮಹಾರಾಷ್ಟ್ರದ ಮಾಜಿ ಸಚಿವ ವಿಶ್ವಜಿತ್ ಕದಂ ಸೇರಿ ಹಲವು ನಾಯಕರು ವೇದಿಕೆಯಲ್ಲಿದ್ದರು.//////