Belagavi News In Kannada | News Belgaum

ಬರಗಾಲ-ರೈತರ ಸಾಲ ವಸೂಲಾತಿಗೆ ಬಲವಂತದ ಕ್ರಮ ಬೇಡ: ಜಿಲ್ಲಾ ಉಸ್ತುವಾರಿ ಸಚಿವ ಸತೀಶ್

ಬೆಳಗಾವಿ, ಮಾ.7 : ರಾಜ್ಯದಾದ್ಯಂತ ಬರಗಾಲ ಇರುವ ಕಾರಣ ರೈತರಿಂದ ಯಾವುದೇ ಸಾಲ ವಸೂಲಾತಿಗೆ ಬಲವಂತದ ಕ್ರಮವಹಿಸಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಬ್ಯಾಂಕು ಹಾಗೂ ಸಹಕಾರಿ ಪತ್ತಿನ ಸಂಘಗಳಿಗೆ ನಿರ್ದೇಶನ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗುರುವಾರ(ಮಾ.7) ನಡೆದ ಪ್ರಮುಖ ಸಹಕಾರಿ ಪತ್ತಿನ ಸಂಘಗಳು ಮತ್ತು ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಸಾಲ ವಸೂಲಾತಿಗೆ ಯಾವುದೇ ರೀತಿಯ ಒತ್ತಡ ಹೇರಬಾರದು. ಇದಲ್ಲದೇ ರೈತರ ಖಾತೆಗೆ‌ ಜಮೆಯಾಗುವ ವೃದ್ಧಾಪ್ಯ ವೇತನ ಅಥವಾ ಯಾವುದೇ ಸರಕಾರಿ ಸೌಲಭ್ಯಗಳ ಹಣವನ್ನು ಸಾಲದ ಕಂತುಗಳಿಗೆ ಹೊಂದಾಣಿಕೆ‌ ಮಾಡಬಾರದು ಎಂದು ತಿಳಿಸಿದರು.

ಸರಕಾರದಿಂದ ರೈತರಿಗೆ ನೀಡಲಾಗುವ ಶೂನ್ಯ ಬಡ್ಡಿ ಸಾಲಸೌಲಭ್ಯಗಳನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ತಿಳಿಸಿದರು.

3 ತಿಂಗಳು ಸಾಲ ವಸೂಲಾತಿಗೆ ಕ್ರಮ ಬೇಡ:

ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಮುಂದಿನ 3 ತಿಂಗಳವರೆಗೆ ಬಲವಂತದ ಸಾಲ ವಸೂಲಾತಿ ಮಾಡಬಾರದು ಮತ್ತು ರೈತರಿಗೆ ನೋಟೀಸು ಜಾರಿಗೊಳಿಸಿ ತೊಂದರೆ ನೀಡಬಾರದು ಎಂದು ಬ್ಯಾಂಕಿನ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬ್ಯಾಂಕುಗಳು ಮಾತ್ರವಲ್ಲದೇ ಖಾಸಗಿ ಲೇವಾದೇವಿದಾರರಿಂದ ಕೂಡ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವಂತೆ ಅವರು ತಿಳಿಸಿದರು.

ಬೆಳಗಾವಿ(ಉತ್ತರ) ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಆಸಿಫ್(ರಾಜು) ಸೇಠ್, ಸಹಕಾರಿ ಸಂಘಗಳ ಜಂಟಿ ನಿಬಂಧಕರಾದ ಸುರೇಶ್ ಗೌಡ, ಸಹಕಾರಿ‌ ಸಂಘಗಳ ಉಪ ನಿಬಂಧಕರಾದ ಮಣಿ ಎಂ.ಎನ್. ಹಾಗೂ ಜಿಲ್ಲಾ ಲೀಡ್ ಬ್ಯಾಂಕಿನ ವ್ಯವಸ್ಥಾಪಕರಾದ ಪ್ರಶಾಂತ ಕುಲಕರ್ಣಿ ಹಾಗೂ ವಿವಿಧ ರೈತ ಸಂಘಗಳ ಸದಸ್ಯರು, ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
***