Belagavi News In Kannada | News Belgaum

ನಾನು, ನನ್ನ ಪುತ್ರ ಇಬ್ಬರೂ ಲೋಕಸಭೆಗೆ ಸ್ಪರ್ಧಿಸಲ್ಲ: ಪ್ರಕಾಶ ಹುಕ್ಕೇರಿ

ಬೆಳಗಾವಿ: ಮುಂಬರುವ ಲೋಕಸಭೆ ಚುನಾವಣೆಗೆ ನಾನು, ನನ್ನ ಪುತ್ರ ಇಬ್ಬರೂ ಸ್ಪರ್ಧಿಸಲ್ಲ ಎಂದು ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಕಾಂಗ್ರೆಸ್ ಹೈಕಮಾಂಡ್‌ಗೆ ಗಟ್ಟಿಯಾದ ಸಂದೇಶ ರವಾನಿಸಿದ್ದಾರೆ.
2014 ರಲ್ಲಿ ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಮಂತ್ರಿ ಇದ್ದರೂ ಸ್ಪರ್ಧಿಸಿ ಗೆದ್ದಿದ್ದೆ. ಆಗ ಪುತ್ರ ಗಣೇಶ ಹುಕ್ಕೇರಿ ಶಾಸಕ ಮಾಡಿ ಮಂತ್ರಿ ಮಾಡ್ತೀವಿ ಅಂತಾ ವರಿಷ್ಠರು ಭರವಸೆ ಕೊಟ್ಡಿದ್ದರು. ಆದ್ರೆ ಪುತ್ರ ಗಣೇಶ ಶಾಸಕನಾಗಿ ಆಯ್ಕೆ ಆದರೂ ಮಂತ್ರಿ ಮಾಡಲಿಲ್ಲ. 2023 ರಲ್ಲಿ ಶಾಸಕ ಗಣೇಶ 78 ಸಾವಿರ ಅಂತರದಿಂದ ಗೆದ್ದರೂ ಮಂತ್ರಿ ಮಾಡಿಲ್ಲ. ನಾನಾಗಲಿ, ನನ್ನ ಮಗನಾಗಲಿ ಮಂತ್ರಿ ಸ್ಥಾನವನ್ನ ಕೇಳಿಲ್ಲ, ಮಂತ್ರಿ ಸ್ಥಾನ ಕೇಳೋದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕಾಶ ಹುಕ್ಕೇರಿ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ.
ನನಗೆ ಮತಕೊಟ್ಟ ಶಿಕ್ಷಕರಿಗೆ ಮೋಸ ಮಾಡುವುದಿಲ್ಲ: ಈಗ ಮತ್ತೆ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಒತ್ತಡಗಳು ಬರ್ತಾಯಿದೆ. ನಾನು‌ ಸ್ಪರ್ಧೆ ಮಾಡಿದ್ರೆ ಚಿಕ್ಕೋಡಿ ಲೋಕಸಭೆಯಲ್ಲಿ ಗೆಲ್ಲುತ್ತೇವೆ ಅಂತಾ ಲೆಕ್ಕಾಚಾರವಿದೆ. ಆದ್ರೆ ನಾನು ಯಾವುದೇ ಕಾರಣಕ್ಕೂ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ನನ್ನ ವಯಸ್ಸು ಈಗ 78, ಮೇಲಾಗಿ ನನ್ನ ಎಂಎಲ್ಸಿ ಅಧಿಕಾರ ಅವಧಿ ಇನ್ನೂ 4 ವರ್ಷವಿದೆ. ನನ್ನನ್ನ ನಂಬಿ ಬೆಳಗಾವಿ, ವಿಜಯಪುರ, ಬಾಗಲಕೋಟೆ ಶಿಕ್ಷಕರು ಮತ ಹಾಕಿ ಗೆಲ್ಲಿಸಿದ್ದಾರೆ. ನನಗೆ ಮತಕೊಟ್ಟ ಶಿಕ್ಷಕರಿಗೆ ಮೋಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಕುರುಬ ಸಮಾಜಕ್ಕೆ ಟಿಕೆಟ್ ಕೊಡಿ:
 ಈಗಾಗಲೇ ಬೆಳಗಾವಿಗೆ ಲಿಂಗಾಯತ, ಚಿಕ್ಕೋಡಿಗೆ ಕುರುಬ ಸಮುದಾಯ ಅಂತಾ ಚರ್ಚೆ ಆಗಿದೆ. ಚಿಕ್ಕೋಡಿ ಲೋಕಸಭೆ ಟಿಕೆಟ್ ಕುರುಬ ಸಮಾಜಕ್ಕೆ ಕೊಡಿ, ಗೆಲ್ಲಿಸಿಕೊಂಡು ಬರ್ತಿವಿ. ಚಿಕ್ಕೋಡಿ ಲೋಕಸಭೆಯಲ್ಲಿ 3 ಲಕ್ಷ ಕುರುಬ ಸಮುದಾಯದರು ಇದ್ದಾರೆ. ಕುರುಬ ಸಮುದಾಯದ ಮುಖಂಡ ಲಕ್ಷ್ಮಣರಾವ್ ಚಿಂಗಳೆಗೆ ಟಿಕೆಟ್ ಕೊಡಿ ಎಂದು ಹೇಳುವ ಮೂಲಕ ಪ್ರಕಾಶ ಹುಕ್ಕೇರಿ ಜಾತಿ ಸಮೀಕರಣವನ್ನ ಬಿಚ್ಚಿಟ್ಟಿದ್ದಾರೆ.