Belagavi News In Kannada | News Belgaum

ಧಾನಿ ಮೋದಿ ಪ್ರಶಂಶಿಸಿದ ಮುಧೋಳ ಬೇಟೆನಾಯಿ

ಆಧಿಕಾರಿಗಳ ನಿರ್ಲಕ್ಷದಿಂದ ಸದ್ದುಗದ್ದಲವಿಲ್ಲದೇ ನಡೆದ ಶ್ವಾನ ಪ್ರದರ್ಶನ "ಗೋವಿಂದಾ ಗೋವಿಂದ"

ಮುಧೋಳ : ಮುಧೋಳ ನಗರದ ದೇಶ ವಿದೇಶಗಳಲ್ಲಿ ಹೆಸರು ಮಾಡಿರುವುದು ಬೇಟಿನಾಯಿಯಿಂದ ಹಾಗೂ ಕವಿಚಕ್ರವರ್ತಿ ರನ್ನನಿಂದ. ಇತಿಹಾಸವನ್ನು ಅವಲೋಕಿಸಿದಾಗ ಮುಧೋಳ ಸಂಸ್ಥಾನದ ಮಹಾರಾಜಾ ರಾಜಾ ಮಾಲೋಜಿರಾವ್ ಘೋರ್ಪಡೆಯವರು ಶ್ವಾನಪ್ರಿಯರಾಗಿದ್ದರು. ಏಕೆಂದರೆ ಮುಧೋಳದ ನಾಯಿಗಳು ಬೇಟೆಯಾಡುವುದರಲ್ಲಿ ಅತ್ಯಂತ ಚತುರತೆ ಹೊಂದಿದ್ದವು. ಹೀಗಾಗಿ ಮಹಾರಾಜರು ಬೇಟೆನಾಯಿಗಳ ದಂಡನ್ನೇ ಹೊಂದಿದ್ದರು. ಅಲ್ಲದೇ ಬೇಟೆನಾಯಿಗಳ ಅಭಿವೃದ್ಧಿಗೆ ಅತೀ ಆದ್ಯತೆ ನೀಡಿದ್ದರು. ಯಾರಾದರೂ ರಾಜರು ಮುಧೋಳಕ್ಕೆ ಭೇಟಿ ನೀಡಿದರೆ ಅವರಿಗೆ ಮುಧೋಳದ ಬೇಟೆನಾಯಿ ಉಡುಗೋರೆಯಾಗಿ ನೀಡುವ ಪದ್ಧತಿ ಅವರು ಹೊಂದಿದ್ದರು. ಅಲ್ಲಿಂದ ಇಲ್ಲಿಯವರೆಗೂ ದೇಶ ವಿದೇಶದ ಜನ ಮುಧೋಳದ ಬೇಟೆನಾಯಿಗಳ ಬಗ್ಗೆ ವಿಶೇಷ ಅಕ್ಕರತೆಯನ್ನು ಹೊಂದಿ, ಅವುಗಳನ್ನು ಸಾಕಿರುವುದು ಅವುಗಳ ಚತುರತೆಗೆ ಸಾಕ್ಷಿಯಾಗಿದೆ. ನಾವು ಮುಧೋಳದವರೆಂದರೆ ಸಾಕು ಜನ ನಮಗೊಂದು ಬೇಟೆನಾಯಿ ಕಳಿಸಿ ಎನ್ನವಷ್ಟರ ಮಟ್ಟಿಗೆ ಅವು ಪ್ರಸಿದ್ಧಿ ಹೊಂದಿವೆ.
ಆದರೆ ಇಂತಹ ಇತಿಹಾಸ ಹೊಂದಿರುವ ಮುಧೋಳ ಬೇಟೆನಾಯಿಗಳ ಅಭಿವೃದ್ಧಿಗಾಗಿ ತಿಮ್ಮಾಪೂರ ಬಳಿ ಶ್ವಾನಕೇಂದ್ರವೊಂದನ್ನು ಸ್ಥಾಪಿಸಿದ್ದನ್ನು ಬಿಟ್ಟರೆ ಅವುಗಳ ಅಭಿವೃದ್ಧಿಗೆ ಯಾವುದೇ ರೀತಿಯ ಕಾರ್ಯಗಳು ನಡೆಯದೇ ಇರುವುದು ದುರ್ದೈವದ ಸಂಗತಿಯಾಗಿದೆ. ಮುಧೋಳ ಬೇಟೆನಾಯಿಗಳನ್ನು ಸಾಕುವವರಿಗೆ ಹಾಗೂ ಇನ್ನುಳಿದ ಬಗೆಬಗೆಯ ಜಾತಿಯ ನಾಯಿಗಳನ್ನು ಸಾಕಿದವರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕಾಗಿದೆ. ಅದು ಸರಿಯಾಗಿ ನಡೆಯುತ್ತಿಲ್ಲವಾದರೂ ಮುಧೋಳದಲ್ಲಿ ಶನಿವಾರ ದಿ. 9 ರಂದು ನಗರದ ರನ್ನ ಕ್ರೀಡಾಂಗಣದಲ್ಲಿ ಶ್ವಾನ ಪ್ರದರ್ಶನವನ್ನು ಬಾಗಲಕೋಟೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಜಿಲ್ಲಾ ಪಂಚಾಯತು ಪಶು ಆಸ್ಪತ್ರೆ ಹಾಗೂ ಮುಧೋಳ ಅಸೋಶಿಯೇಶನ್ ಆಫ್ ಅಲೈನ್ಸಕ್ಲಬ್ ಇಂಟರ್‍ನ್ಯಾಶನಲ್ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಮಟ್ಟದ ಕಾರ್ಯಕ್ರಮವಾದರೂ ತಾಲೂಕಾ ಪಶು ಇಲಾಖೆಯ ಆಡಳಿತ ಅಧಿಕಾರಿಯ ನಿರ್ಲಕ್ಷದಿಂದ ಯಾವುದೇ ರೀತಿಯ ಪ್ರಚಾರವಿಲ್ಲದೇ, ಸದ್ದುಗದ್ದಲವಿಲ್ಲದೇ ಕೇವಲ ಬೆರಣಿಕೆಯಷ್ಟು ಅಂದರೆ ಸುಮಾರು 200-250 ಶ್ವಾನಗಳು ಹಾಗೂ ಎಲ್ಲ ಜಿಲ್ಲಾ, ತಾಲೂಕಾ ಅಧಿಕಾರಿಗಳು, ಪ್ರಾಯೋಜಕರು, ಜೌಷಧಿ ವ್ಯಾಪಾರಸ್ಥರು ಸೇರಿ 400 ರಿಂದ 500 ಜನ ಸೇರಿದ್ದು, ಇದು ಮುಧೋಳದ ಖ್ಯಾತ ಜಗತ್ಪ್ರಸಿದ್ಧ ಬೇಟೆನಾಯಿಗೆ ಮಾಡಿದ ಘೋರ ಅಪಮಾನವಾಗಿದೆ ಎಂದು ಮುಧೋಳದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಕ್ರಮಕ್ಕಾಗಿ ಸರ್ಕಾರ ರೂ. 1 ಲಕ್ಷ ಹಣ ನೀಡಿದ್ದು, ಬಹಮಾನಗಳನ್ನು ನಗರದ ವ್ಯಾಪಾರಸ್ಥರು ಹಾಗೂ ಗಣ್ಯರಿಂದ ಸಂಗ್ರಹಿಸಲಾಗಿದೆ. ಅಲ್ಲದೇ ಬಂದ ಜನರಿಗೆ ಊಟದ ವ್ಯವಸ್ಥೆಯನ್ನು ಪ್ರೇಮಾನಂದ ಮೆಡಿಕಲ್ಸ್ ಏಜೆನ್ಸಿಯವರು ವಹಿಸಿಕೊಂಡಿದ್ದು, ಸುಮಾರು 50-60 ಸಾವಿರ ರೂ. ಸಂಗ್ರಹಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಇದಲ್ಲದೇ ಕಾರ್ಯಕ್ರಮದ ನಿರ್ವಹಣೆಗಾಗಿ ಇನ್ನೂ ಅನೇಕ ವ್ಯಾಪಾರಸ್ಥರು ಹಾಗೂ ಪ್ರಮುಖರಿಂದ ಸಂಗ್ರಹಿಸಲಾಗಿದ್ದು, ಕೆಲ ಜನ ತಮ್ಮ ಹೆಸರು ಹೇಳಲಿಚ್ಛಿಸದೇ ತಾವು ದೇಣಿಗೆ ನೀಡಿರುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ. ಆದರೆ ಸಾಕಷ್ಟು ಜನ ಸೇರದೇ ಇದ್ದುದ್ದು ಬೇಸರವಾಗಿದೆ ಎಂಬುದು ದೇಣಿಗೆದಾರರ ಅಳಲಾಗಿದೆ.
ಕಾರ್ಯಕ್ರಮಕ್ಕಾಗಿ ಅಪಾರ ದೇಣಿಗೆ ಸಂಗ್ರಹವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು, ಪ್ರಚಾರದ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದಾಗಿ 500 ಕ್ಕೂ ಹೆಚ್ಚು ಶ್ವಾನಗಳು ಹಾಗೂ ಕನಿಷ್ಠ 1500-2000 ಜನ ಸೇರಬೇಕಾದ ಕಾರ್ಯಕ್ರಮಕ್ಕೆ ಸೇರಬೇಕಾಗಿತ್ತು. ಹಾಗೇ ನೋಡಿದರೆ ಮುಧೋಳದ ಅನೇಕ ಮನೆಗಳಲ್ಲಿ ವಿವಿಧ ತಳಿಗಳ ಶ್ವಾನಗಳನ್ನು ಸಾಕಲಾಗಿದೆ. 15-20 ದಿನಗಳಿಗಿಂತಲೂ ಮೊದಲೇ ಕಾರ್ಯಕ್ರಮ ಆಯೋಜನೆಯ ಬಗ್ಗೆ ನಿರ್ಧಾರವಾಗಿದ್ದರೂ ನಗರದ ಗಣ್ಯ ವ್ಯಕ್ತಿಗಳಿಗಾಗಲೀ, ರಾಜಕೀಯ ಧುರೀಣರಿಗಾಗಲೀ, ಸುತ್ತಮುತ್ತಲಿನ ಗ್ರಾಮಗಳ ಪ್ರಮುಖರಿಗೆ ತಿಳಿಸಿಲ್ಲವೆಂದು ಆಪಾದನೆಗಳು ಕೇಳಿಬಂದಿವೆ. ಕೊನೆ ಪಕ್ಷ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಪತ್ರಿಕೆಗಳ ಮುಖಾಂತರವಾಗಿಯಾದರೂ ಪ್ರಚಾರ ಮಾಡಬಹುದಾಗಿತ್ತು. ಆದರೆ ಕೊನೆಪಕ್ಷ ಕಾರ್ಯಕ್ರಮಕ್ಕಾದರೂ ಪತ್ರಕರ್ತರಿಗೆ ಆಹ್ವಾನ ಕೂಡಾ ನೀಡಿಲ್ಲ. ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕಳೆದ ಐದು ದಿನಗಳಿಂದ ಮುಧೋಳದಲ್ಲಿಯೇ ವಾಸ್ತವ್ಯವಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು, ಅವರ ಮುಖಾಂತರವಾದರೂ ಪತ್ರಕರ್ತರಿಗೆ ಸುದ್ಧಿ ನೀಡಬಹುದಾಗಿತ್ತು. ಆದರೆ ಇದಾವುದನ್ನು ಮಾಡದೇ ಸಾಕಷ್ಟು ಸಂಪನ್ಮೂಲ ಕ್ರೋಢಿಕರಿಸಿ ಯಾರಿಗೂ ಗೊತ್ತಾಗದಂತೆ ಜಿಲ್ಲಾಮಟ್ಟದ ಶ್ವಾನ ಪ್ರದರ್ಶನ ನಡೆಸಿರುವುದು, ನಾಯಿಗಳಿಗಿರುವ ನಿಯತ್ತು ಅಧಿಕಾರಿಗಳಿಗೆ ಇಲ್ಲವೆಂದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹೀಗಾಗಿ ಮುಧೋಳದಲ್ಲಿ ದಿ. 9 ರಂದು ನಡೆದ ಶ್ವಾನ ಪ್ರದರ್ಶನ ಗೋವಿಂದಾ ಗೋವಿಂದ ಎಂದು ಜನ ಅಪಹಾಸ್ಯ ಮಾಡುತ್ತಿದ್ದಾರೆ. ಸುಪ್ರಸಿದ್ಧ ಮುಧೋಳ ಬೇಟೆನಾಯಿಗೆ ಅಪಮಾನ ಮಾಡಿ, ಕಾಟಾಚಾರದ ಶ್ವಾನ ಪ್ರದರ್ಶನ ಮಾಡಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶ್ವಾನಪ್ರಿಯರು ಆಗ್ರಹಿಸಿದ್ದಾರೆ.

 

ದೇಶದ ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಂಸೆಗೊಳಗಾಗಿ ಅವರೇ ಮೆಚ್ಚಿ ದೇಶದ ಸೇನಾಪಡೆಗೆ ಸೇರ್ಪಡೆ ಮಾಡಿರುವುದು ಮುಧೋಳ ಬೇಟೆನಾಯಿಯ ಸಾಮಥ್ರ್ಯವನ್ನು ತೋರಿಸುತ್ತದೆ. ಆದರೆ ಮುಧೋಳದಲ್ಲಿ ನಡೆದ ಶ್ವಾನ ಪ್ರದರ್ಶನ ಕಾಟಾಚಾರಕ್ಕೆ ಮಾಡಿರುವುದು ದುರ್ದೈವದ ಸಂಗತಿ.