Belagavi News In Kannada | News Belgaum

ತೀರದಾಸೆಯ ಬೆನ್ನೇರಿ ಶಾಂತಿಯ ಹುಡಕಾಟ

ತೀರದಾಸೆಯ ಬೆನ್ನೇರಿ ಶಾಂತಿಯ ಹುಡಕಾಟ

ಮನುಷ್ಯನ ಬದುಕಿನಲ್ಲಿ ಈ ಶಾಂತಿ ನೆಮ್ಮದಿಗಾಗಿ ಇನ್ನಿಲ್ಲದ ಹುಡುಕಾಟ ನಡೆದೇ ಇದೆ. ಆದರೆ ಶಾಂತಿ ಸಿಗುವ ನಿಶ್ಚಿತ ಸ್ಥಳವಾದರೂ ಯಾವುದು? ದಟ್ಟ ಅರಣ್ಯವೋ, ಗುಂಡಾರವೋ. ಅಥವಾ ಯೋಗ, ಧ್ಯಾನ, ಸಮಾಧಾನ ಕೊಡಬಹುದೇ? ಇಲ್ಲವೆ ಮಹಾತ್ಮರ ವಿಚಾರಧಾರೆಗಳನ್ನು ಕೇಳುವುದು, ಒಳ್ಳೆಯ ಓದು ಇವೆಲ್ಲವೂ ಶಾಂತಿಗೆ ಮೂಲಗಳು ನಿಜ ಹೌದು! ಇಂದಿನ ದಾವಂತದ ಬದುಕಿನಲ್ಲಿ ನಿಮಿಷ ನಿಮಿಷಕ್ಕು ಗೊಂದಲ, ಗಡಿಬಿಡಿ,ಪರದಾಟ ಇಂತಹ ಸ್ಥಿತಿಯಲ್ಲಿ ನಮ್ಮ ಮನಸ್ಸಿನ ಹೊರತು ಇವೆಲ್ಲವೂ ಶಾಶ್ವತ ಪರಿಹಾರ ಅಲ್ಲ ಎಂದೆನಿಸದೆ ಇರದು. ಏಕೆಂದರೆ ಮನಸ್ಸಿನ ಅಸ್ಥಿರತೆಯಲ್ಲಿ ಹೇಳಿದ್ದು ಕೇಳಿದ್ದು ಓದಿದ್ದು ಎಷ್ಟು ಹೊತ್ತು ಅಳವಡಿಸಿಕೊಂಡು ಅದರಂತೆ ಜೀವಿಸಲಿಕ್ಕೆ ಸಾಧ್ಯ,ಆಗುತ್ತಾ?… ಆಗುವುದಿಲ್ಲ, ಹೇಳುವುದು ಒಂದು ರೀತಿ ಜೀವಿಸುವುದು ಒಂದು ರೀತಿ ಹೀಗಾಗ ಬಾರದು, ತೀರದಾಸೆಯ ಬೆನ್ನೇರಿ ಆಯಾಸ ಪಡವುದು ಬೇಕೆ? ಸುಖ ದುಃಖಕೆ ಎಣೆ ಇಲ್ಲ, ಸುಖ‌ ಶಾಂತಿ ಹೊರಗಿಲ್ಲ ತನ್ನಲ್ಲೆ ಅರಿವು ಆನಂದವೆಲ್ಲ ಅಲ್ಲವೇ?.

ನಮ್ಮ ಮನಸಿಗೆ ಯಾವುದು ಸಮಾಧಾನ ಕೊಡುವುದೋ, ನಮಗೆ ಯಾವುದು ಮಾಡಲು ಸಾಧ್ಯವೋ ಆ ಕೆಲಸವನ್ನು ಮಾಡುವುದರಿಂದ ಮನಸಿಗೆ ಸಮಾಧಾನ ಸಿಗುವುದು ಖಂಡಿತ.
ಬಸವಾದಿ ಶರಣರ ಕಾಲದಲ್ಲಿ ತಮ್ಮ ತಮ್ಮ ಕಾಯಕದಲ್ಲಿ ಶಾಂತಿ ನೆಮ್ಮದಿಯನ್ನು ಕಂಡು ಆ ಮೂಲಕ ಸಾಕ್ಷಾತ್ಕಾರ ಕಂಡುಕೊಂಡವರು ನಮ್ಮ ಶರಣರು. ಅವರವರ ಕಾಯಕ ಯಾವುದಾದರೇನು, ಕೀಳೆನ್ನೆದೆ, ಮೇಲೆನ್ನದೆ ಬದುಕಿದ ಉದಾಹರಣೆ ಸಾಕಷ್ಟಿದೆ.ಕಾಯಕಕ್ಕೆ ಕೀಳು ಮೇಲುಗಳಿಲ್ಲ ಅವರವರ
ಕಾಯಕ ಅವರಿಗೆ ಮೇಲು..

ಗೃಹಿಣಿ ಗೃಹವನ್ನು ಅಚ್ಚುಕಟ್ಟಾಗಿ
ಇಡುವುದರ ಮೂಲಕ, ಗುರು ತನ್ನ ಶಿಷ್ಯರಲ್ಲಿ ಶೈಕ್ಷಣಿಕ ಏಳ್ಗೆ ಕಾಣುವುದರಲ್ಲಿ, ಸಮಾಜ ಸುಧಾರಕರು ಸೇವಕರಾಗಿ, ಸಮಾಜ ನನ್ನ ಮನೆ ಎನ್ನುವಷ್ಟು ಸಕ್ರೀಯವಾಗಿ ಸೇವೆ ಮಾಡುವುದರ ಮೂಲಕ, ಸಾಹಿತಿಯಾಗಿ ಸಾಹಿತ್ಯವನ್ನು ಪೂಜ್ಯ ಭಾವದೊಂದಿಗೆ ಶೃದ್ಧೆಯಿಂದ ತಾಳ್ಮೆಯಿಂದ ಬರವಣಿಗೆಯಲ್ಲಿ ತೊಡಗುವುದರ ಮೂಲಕ, ಯಾವುದೇ ಕೆಲಸ ಮಾಡಿದರೂ, ನಿಷ್ಕಾಮ ಪ್ರೀಯರಾಗಿದ್ದಾಗ ಆಯಾ ಕ್ಷೇತ್ರದಲ್ಲಿನ ವೃತ್ತಿಗೌರವ ವೃದ್ಧಿಯಾಗಿ ತನ್ಮೂಲಕ ಶಾಂತಿ ನೆಮ್ಮದಿಯನ್ನು ಪಡೆಯಲು ಸಾಧ್ಯ.

ಶಾಂತಿಗಾಗಿ ಈ ಜಗದಲ್ಲಿ ಬಹಳ ತೆಲಿಕೆಡಿಸಿಕೊಂಡು ತಿರುಗಿದವರಿದ್ದಾರೆ, ಮನಶಾಂತಿಗಾಗಿ ಪೂಜೆ ಪುನಸ್ಕಾರ ಹೋಮ ಹವನಾದಿಗಳನ್ನು ಇನ್ನೂ ಏನೇಲ್ಲ ಮಾಡಿ ಆ ಭ್ರಮೆಯಲ್ಲಿಯೆ ಭ್ರಮಿತರಾದವರೂ ಇದ್ದಾರೆ, ಶಾಂತಿ, ನೆಮ್ಮದಿ ಸಮಾಧಾನಕ್ಕೆಂದು ಹುಡುಕುತ್ತಾ ಹೋಗಿ ಮರಳಿ ಮನಗೆ ಬಾರದವರೂ ಇದ್ದಾರೆ.

ಮನೆ ಮಠ ಬಿಟ್ಟು ಜವಾಬ್ದಾರಿ ನಿಭಾಯಿಸದೆ ಹೋದರೆ, ಜನ ಆಡಿ ಕೊಳ್ಳುವುದನ್ನು ಕೇಳಿ ಇನ್ನಷ್ಟು ನಮ್ಮ ಮನ ಶಾಂತಿ ಕೆಡುತ್ತದೆ, ನಮ್ಮ ಮನಸ್ಸನ್ನು ಶಾಂತಿ ಗೊಳಿಸುವ ಕೆಲಸ ಯಾವುದು ಎಂದು ಅದನ್ನು ನಾವು ನಮ್ಮಲ್ಲಿಯೇ ನಾವೇ ಹುಡುಕಬೇಕು, ಸಣ್ಣ ಸಣ್ಣ ವಿಷಯಕ್ಕೆ ಮನಸ್ಸು ಗಲಿಬಿಲಿ ಮಾಡಿಕೊಳ್ಳವುದು ಬಿಡಬೇಕು, ಒಂದೇ ತೆರನಾಗಿ ಮನಸ್ಸನ್ನು ತರಬೇತಿ ಗೊಳಿಸಬೇಕು. ನಮ್ಮೊಳಗೆ ನಿರಾಳತೆ ಅಳವಡಿಸಿಕೊಳ್ಳಬೇಕು, ಆಗ ನಾವು ಎಲ್ಲಿಯೇ ಇರಲಿ ಎಂತಹ ಸಂದರ್ಭದಲ್ಲೂ ಕೂಡ
ಶಾಂತಿಯಿಂದ ಇರಬಹುದೆನ್ನುವುದು ನನ್ನ ಅನಿಸಿಕೆ. ಮೊದಲು ನಮ್ಮ ಮನಸ್ಸು ಶಾಂತವಾಗಿದ್ದರೆ ಶಾಂತಿಯನ್ನು ಎಲ್ಲಿಯೂ ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ, ಹೊರಗಿನ ಪ್ರಶಾಂತತೆ ಎಷ್ಟೇ ಇದ್ದರೂ ಅಂತರಂಗದ ಶಾಂತತೆಯೇ ಬಹಳ ಮುಖ್ಯ ಅಲ್ಲವೇ?

ಕಸ್ತೂರಿ. ಡಿ. ಪತ್ತಾರ ಬೆಂಗಳೂರು