Belagavi News In Kannada | News Belgaum

ಲೋಕಸಭೆ ಚುನಾವಣೆ: ಬೆಳಗಾವಿಗೆ ಶೆಟ್ಟರ್-ಚಿಕ್ಕೋಡಿಗೆ ಕತ್ತಿ ಬಹುತೇಕ ಟಿಕೆಟ್ ಫಿಕ್ಸ್‌..?

ಬೆಂಗಳೂರು: ಯಾವುದೇ ಕ್ಷಣದಲ್ಲಿಯೂ ಲೋಕಸಭೆ ಚುನಾವಣೆಗೆ ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಕರ್ನಾಟಕದ ಅಭ್ಯರ್ಥಿಗಳ ಹೆಸರು ಕೂಡ ಘೋಷಣೆ ಆಗುವ ನಿರೀಕ್ಷೆ ಇದೆ. ಈ ಮಧ್ಯೆ ಕಮಲಪಡೆಯದಲ್ಲಿ ಒಂದು ರೀತಿ ಧರ್ಮ ಸಂಕಟ ಶುರುವಾಗಿದೆ.

ಕರ್ನಾಟಕದ ಅಭ್ಯರ್ಥಿಗಳ ಹೆಸರು ಬಿಡುಗಡೆಯಾಗುವ ನಿರೀಕ್ಷೆ ಇರುವ ಕಾರಣ ಇಡೀ ರಾಜ್ಯದ ಕಮಲಪಡೆಯ ಚಿತ್ತ ಈಗ ದೆಹಲಿಯತ್ತ ನೆಟ್ಟಿದೆ. ಮೂಲಗಳ ಪ್ರಕಾರ ಇಂದು ಸಂಜೆ ವೇಳೆಗೆ ಪಟ್ಟಿ ಬಿಡುಗಡೆ ಆಗಲಿದೆ. ಅದರಲ್ಲೂ ಕರ್ನಾಟಕದ 15 ರಿಂದ 18 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಫೈನಲ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸಂಭಾವ್ಯ ಅಭ್ಯರ್ಥಿಗಳ ಹೆಸರಿನ ಮಾಹಿತಿ ಸಿಕ್ಕಿದೆ.
ಯಾವ ಕ್ಷೇತ್ರದಿಂದ ಯಾರಿಗೆ ಟಿಕೆಟ್? ಸಂಭಾವ್ಯರ ಪಟ್ಟಿ ಪ್ರಕಾರ, ಬೆಳಗಾವಿಯಿಂದ ಜಗದೀಶ್ ಶೆಟ್ಟರ್, ಚಿಕ್ಕೋಡಿಯಿಂದ ರಮೇಶ್ ಕತ್ತಿ ಅವರಿಗೆ ಟಿಕೆಟ್ ಸಿಗಬಹುದು ಎನ್ನಲಾಗಿದೆ. ಹಾವೇರಿಯಿಂದ ಬಸರಾಜ ಬೊಮ್ಮಾಯಿ,  ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಾಕ್ಟರ್ ಮಂಜುನಾಥ್​ಗೆ ಟಿಕೆಟ್ ಕೊಡಬಹುದು ಎನ್ನಲಾಗಿದೆ. ಇನ್ನು ಮೈಸೂರು ಕೊಡಗು ಕ್ಷೇತ್ರದಿಂದ ಯದುವೀರ್ ಕೃಷ್ಣದತ್ ಚಾಮರಾಜ್ ಒಡೆಯರ್, ವಿಜಯಪುರದಿಂದ ಗೋವಿಂದ್ ಕಾರಜೋಳ, ಚಿಕ್ಕೋಡಿಯಿಂದ ರಮೇಶ್ ಕತ್ತಿ ಅವರಿಗೆ ಟಿಕೆಟ್ ಸಿಗಬಹುದು ಎನ್ನಲಾಗಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಚ್ಚರಿ ಅಭ್ಯರ್ಥಿ ಆಯ್ಕೆ ನಿರೀಕ್ಷೆ ಇದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಾ.ಮಂಜುನಾಥ್ ಸ್ಪರ್ಧೆ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಹಿಂದೆ ಹೆಚ್​​ಡಿ ದೇವೇಗೌಡರ ವಿರುದ್ಧವೇ ಗೆದ್ದಿದ್ದೇವೆ, ಹೆಚ್​ಡಿ ಕುಮಾರಸ್ವಾಮಿ ವಿರುದ್ಧವೂ ಗೆದ್ದಿದ್ದೇವೆ. ಹೀಗಾಗಿ ಮಂಜುನಾಥ್​ ಸ್ಪರ್ಧೆ ಮಾಡಿದರೂ ನಮಗೇನು ಬೇಸರವಿಲ್ಲ ಎಂದಿದ್ದಾರೆ.
ಬೆಳಗಾವಿಯಿಂದ ಸ್ಪರ್ಧಿಸಲು ಜಗದೀಶ್ ಶೆಟ್ಟರ್ ಹಿಂದೇಟು! ಅಷ್ಟಕ್ಕೂ ಬೆಳಗಾವಿಯಿಂದ ಈ ಬಾರಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಕೊಡಲಾಗ್ತಿದೆ ಎನ್ನಲಾಗಿದೆ. ಹೀಗಾಗೇ ಚಿಕ್ಕಮಗಳೂರಿನಲ್ಲಿ ಶೋಭಾರ ಕರಂದ್ಲಾಜೆ ವಿರುದ್ಧ ನಡೀತಿರುವಂತೆ, ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ವಿರುದ್ಧ ಗೋಬ್ಯಾಕ್ ಅಭಿಯಾನ ಶುರುವಾಗಿದೆ. ಮಹಾಂತೇಶ್ ಕವಟಗಿಮಠ ಅವರನ್ನ ಬೆಂಬಲಿಸಿ ಶೆಟ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಆದರೆ, ಬೆಳಗಾವಿಯಿಂದ ಸ್ಪರ್ಧೆ ಮಾಡಲು ಖುದ್ದು ಜಗದೀಶ್ ಶೆಟ್ಟರ್ ಹಿಂದೇಟು ಹಾಕ್ತಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಬೆಳಗಾವಿಯಿಂದ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ಹಿರಿಯ ಮುಖಂಡರಿಗೆ ಶೆಟ್ಟರ್ ಇಂದು ಮಾಹಿತಿ ನೀಡಿದ್ದಾರೆ. ಬೆಳಗಾವಿ ಬದಲಾಗಿ ಧಾರವಾಡ ಲೋಕಸಭಾ ಕ್ಷೇತ್ರದ ಬಗ್ಗೆ ಶೆಟ್ಟರ್ ಒಲವು ಹೊಂದಿದ್ದು, ಅಮಿತ್ ಶಾ ಮೇಲೆ ಒತ್ತಡ ತರುವ ಯತ್ನ ನಡೆಸಿದ್ದಾರೆ. ಹೀಗಾಗಿ ಬಿಜೆಪಿಗೆ ಜಗದೀಶ್ ಶೆಟ್ಟರ್ ವಾಪಸಾತಿ ಒಂದು ರೀತಿ ಸವಾಲಾಗಿದೆ. ಶೆಟ್ಟರ್ ಕ್ಷೇತ್ರ ನಿರ್ಧಾರದ ಬಳಿಕವೇ ಧಾರವಾಡ ಮತ್ತು ಹಾವೇರಿ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಅನಿವಾರ್ಯತೆ ಎದುರಾಗಿದೆ.