Belagavi News In Kannada | News Belgaum

ಚಿಕ್ಕೋಡಿ ಲೋಕಸಭಾ ಅಖಾಡಕ್ಕೆ ಸಾಹುಕಾರ್ ಪುತ್ರಿ ಎಂಟ್ರಿ..!

ಬೆಳಗಾವಿ: ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಬೆಳಗಾವಿಯ ತಾಲೂಕು ಕೇಂದ್ರವು ಆಗಿರುವ ಲೋಕಸಭಾ ಕ್ಷೇತ್ರ ಚಿಕ್ಕೋಡಿಯಲ್ಲಿ ದಿನದಿಂದ ದಿನಕ್ಕೆ ಚುನಾವಣೆ ಕಾವು ಹೆಚ್ಚಾಗುತ್ತಿದ್ದು,  ಚಿಕ್ಕೋಡಿ ಕ್ಷೇತ್ರಕ್ಕೆ ಸಚಿವ ಸತೀಶ್‌ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನೇ ಕಣಕ್ಕೆ ಇಳಿಸಲು  ಫೈನಲ್‌ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಹೌದು….ಚಿಕ್ಕೋಡಿ ಲೋಕಸಭಾ ಚುನಾವಣೆಗೆ ಕಹಳೆ ಮೊಳಗಿದ್ದು, ಈಗಾಗಲೇ  ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ ಟಿಕೆಟ್​ ಘೋಷಣೆಗೂ ಮುನ್ನವೇ ಚುಟುವಟಿಕೆಗಳನ್ನ ಚುರುಕುಗೊಳಿಸಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಬಿರುಸಿನ ನಡೆಯ ಜೊತೆಗೆ  ಫುಲ್​ ಆ್ಯಕ್ಟೀವ್ ಆಗಿದ್ದಾರೆ.  ಸದ್ಯ ಕೈ ಪಕ್ಷ ಕಳೆದುಕೊಂಡ ಕ್ಷೇತ್ರದ ಅಧಿಕಾರವನ್ನು ಪಡೆಯಲು ಕಾಂಗ್ರೆಸ್ ಉತ್ಸಾಹ ತೋರಿದ್ದು, ಸದ್ಯ ನೂತನ ತಂತ್ರ ರೂಪಿಸಿದೆ. ಗೆಲುವಿನ ಭಾಗವಾಗಿಯೇ ಈ ಭಾಗದ ಪ್ರಭಾವಿ ರಾಜಕಾರಣಿ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಯನ್ನು ರಾಜ್ಯ ಕಾಂಗ್ರೆಸ್ ನಾಯಕರು ಅಂತಿಮಗೊಳಿಸಿ, ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ಚಿಕ್ಕೋಡಿಯಿಂದ ಪುತ್ರಿ ಕಣ್ಣಕ್ಕಿಳಿದರೆ ಸ್ವತಃ ಸತೀಶ್ ಜಾರಕಿಹೊಳಿಯವರೇ ಸ್ಪರ್ಧೆ ಮಾಡಿದಂತೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ನಲ್ಲಿದೆ. ಈ ಮೂಲಕ ಪ್ರಭಾವಿ ನಾಯಕರ ಕುಟುಂಬದ ಸದಸ್ಯರನ್ನೇ ಅಖಾಡಕ್ಕೆ ಇಳಿಸಿ ಕ್ಷೇತ್ರ ಮರಳಿ ಪಡೆಯಲು ಕಾಂಗ್ರೆಸ್ ಸಜ್ಜಾಗಿದೆ.

ತಂದೆಯಂತೆ ಸಂಕಷ್ಟಕ್ಕೆ ಸ್ಪಂದಿಸುವ ಪ್ರಿಯಾಂಕಾ:  ಪ್ರಿಯಾಂಕಾ ಜಾರಕಿಹೊಳಿ ಅವರು ವಿವಿಧ ಮಹಿಳಾ ಸಂಘ- ಸಂಸ್ಥೆಗಳೊಂದಿಗೆ ಒಟನಾಟ ಹೊಂದಿದ್ದು, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ. ಅಲ್ಲದೇ, ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದು, ಇವರು ಕೂಡ ಸಾಕಷ್ಟು ಜನಪ್ರಿಯತೆ ಹೊಂದಿದ್ದಾರೆ. ಇನ್ನು ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಪ್ರಿಯಾಂಕಾ ಅವರು ನಿರುದ್ಯೋಗಿ ಯುವಕರಿಗೆ ಘಟಪ್ರಭಾದ ಕಾಂಗ್ರೆಸ್ ಸೇವಾದಳದ ತರಬೇತಿ ಕೇಂದ್ರದಲ್ಲಿ ಪೊಲೀಸ್ ಹಾಗೂ ಸೇನಾ ತರಬೇತಿಯನ್ನು ಉಚಿತ ಶಿಬಿರ ನಡೆಸುವ ಮೂಲಕ ನಿರುದ್ಯೋಗಿಗಳ ಪಾಲಿಗೆ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ.


ತಂದೆ ಮಾರ್ಗದಲ್ಲಿಯೇ ಪ್ರಿಯಾಂಕಾ ನಡಿಗೆ: ಬೆಳಗಾವಿ ಸೇರಿದಂತೆ ರಾಜ್ಯದಲ್ಲಿಯೇ ಸತೀಶ ಜಾರಕಿಹೊಳಿ ಅವರು ಅತ್ಯಂತ ಪ್ರಭಾವಿ ರಾಜಕಾರಣಿಯಾಗಿದ್ದು, ಸಮಾಜ ಸೇವೆ ಮೂಲಕ ದೀನ ದಲಿತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ, ನೊಂದ ಜೀವಗಳಿಗೆ ಭರವಸೆ ಹೊಂಬೆಳಕಾಗಿದ್ದಾರೆ. 90ರ ದಶಕದಲ್ಲಿ ತಂದೆ ಸತೀಶ ಜಾರಕಿಹೊಳಿ ಅವರು ಸಮಾಜ ಸೇವೆಗೆ ಬಂದಿದ್ದು, ಶೋಷಿತರ ಪರ ದನಿಯಾಗಿದ್ದರು. ಸಾಮಾಜಿಕ ತಳಹದಿ ತತ್ವದಡಿ ಅಧಿಕಾರ ವೀಕೇಂದ್ರೀಕರಣ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಈ ಮೂಲಕ ಎಲ್ಲ ಸಮುದಾಯಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೆಲ್ಲರನ್ನೂ ಒಂದೇ ವೇದಿಕೆಗೆ ಕರೆದುಕೊಂಡು ಹೋಗುವುದು ಇತಿಹಾಸ. ಪ್ರತಿ ಜಿಲ್ಲೆಯಲ್ಲಿಯೂ ಸತೀಶ ಅಭಿಮಾನ ಬಳಗವು ಸತೀಶ ಸೂಚಿಸಿದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಈಗ ಸತೀಶ ಅವರ ಪುತ್ರಿ ಪ್ರಿಯಾಂಕಾ ಕೂಡ ತಂದೆಯಂತೆ ಬಡವರ ಕಷ್ಟಗಳಿಗೆ ಸ್ಪಂದಿಸುತ್ತ ಸಮಾಜಮುಖಿ ಕಾರ್ಯಗಳಿಗೆ ಮುಂಚೂಣಿಯಾಗಿ ನಿಂತಿದ್ದಾರೆ.


2014ರಲ್ಲಿ ಕಾಂಗ್ರೆಸ್‌ಗೆ ಜಯ:
 ಚಿಕ್ಕೋಡಿಯ 2019ರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಅಣ್ಣ ಸಾಹೇಬ್ ಜೊಲ್ಲೆ ಅವರು ಸಂಸತ್ತಿಗೆ ಆಯ್ಕೆ ಆದರು. ಅಣ್ಣಾಸಾಹೇಬ ಜೊಲ್ಲೆ ಅವರು 6,45,017 ಪಡೆದು ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಕಾಶ ಬಾಬಣ್ಣ ಹುಕ್ಕೇರಿ (5,26,140) ಅವರನ್ನು ಸೋಲಿಸಿದರು. 2014ರಲ್ಲಿ ಕಾಂಗ್ರೆಸ್‌ ‘ಕೈ’ಗೆ ಚಿಕ್ಕೋಡಿ: 2014ರಲ್ಲಿ ಇದೇ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಕಾಶ ಬಾಬಣ್ಣ ಹುಕ್ಕೇರಿ ಅವರು ಒಟ್ಟು 4,74,373 ಮತಗಳು ಪಡೆದು ಎದುರಾಳಿ ಬಿಜೆಪಿಯ ರಮೇಶ್ ವಿಶ್ವನಾಥ ಕತ್ತಿ (4,71,370) ಅವರನ್ನು ಸೋಲಿಸಿದ್ದರು. ಎನ್‌ಸಿಪಿಯಿಂದ ಸ್ಪರ್ಧಿಸಿದ್ದ ಪ್ರತಾಪರಾವ್ ಪಾಟೀಲ್ 42,738 ಮತ ಪಡೆದರು. ಜೆಡಿಎಸ್‌ನಿಂದ ಶ್ರೀಮಂತ ಬಾಳಾಸಾಹೇಬ್ ಪಾಟೀಲ್ ಅವರು ಕೇವಲ 39,992 ಮತಗಳಿಗೆ ತೃಪ್ತಿಪಟ್ಟುಕೊಂಡರು.

ಚಿಕ್ಕೋಡಿಯಲ್ಲಿವೆ 8 ವಿಧಾನಸಭಾ ಕ್ಷೇತ್ರ: ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿನ ಒಟ್ಟು 08 ವಿಧಾನಸಭಾ ಕ್ಷೇತ್ರದಲ್ಲಿ 05 ಕ್ಷೇತ್ರಗಳು ಕಾಂಗ್ರೆಸ್ ಪಾಲಾದರೆ, ಕೇವಲ 03 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ನಿಪ್ಪಾಣಿ ಕ್ಷೇತ್ರ- ಶಶಿಕಲಾ ಜೊಲ್ಲೆ (ಬಿಜೆಪಿ-73,348 ಮತಗಳು), ಚಿಕ್ಕೋಡಿ ಸದಲಗಾ- ಗಣೇಶ್ ಹುಕ್ಕೇರಿ (ಕಾಂಗ್ರೆಸ್- 1,28,349 ಮತಗಳು), ಅಥಣಿ- ಲಕ್ಷ್ಮಣ ಸವದಿ (ಕಾಂಗ್ರೆಸ್- 131,404 ಮತ), ಕಾಗವಾಡ- ರಾಜು ಕಾಗೆ (ಕಾಂಗ್ರೆಸ್- 83,387ಮತ) ಕುಡಚಿ (ಎಸ್‌ಸಿ)- ಮಹೇಂದ್ರ ತಮ್ಮಣ್ಣನವರ್ (ಕಾಂಗ್ರೆಸ್- 85,321 ಮತ), ರಾಯಭಾಗ್- ದುರ್ಯೋಧನ ಐಹೊಳೆ (ಬಿಜೆಪಿ- 67,502 ಮತ), ಹುಕ್ಕೇರಿ -ನಿಖಿಲ್ ಕತ್ತಿ (ಬಿಜೆಪಿ- 1,03,574 ಮತ) ಮತ್ತು ಯಮಕನಮರಡಿ (ಎಸ್‌ಟಿ) ಸತೀಶ್ ಜಾರಿಕಿಹೊಳಿ (ಕಾಂಗ್ರೆಸ್- 73,512ಮತ) ಅವರು ವಿಜಯ ಸಾಧಿಸಿದ್ದಾರೆ.‌


ಮತದಾರರ ವಿವರ: ಚಿಕ್ಕೋಡಿ‌ ಲೋಕ‌ಸಭಾ ಮತಕ್ಷೇತ್ರದ 1741758 ಮತದಾರರ ಪೈಕಿ 875953 ಪುರುಷ ಮತದಾರರು, 865731 ಮಹಿಳಾ ಮತದಾರರು, 74 ಲಿಂಗತ್ವ ಅಲ್ಪಸಂಖ್ಯಾತ ಮತದಾರರಿರುತ್ತಾರೆ. ಮಾರ್ಚ 16 ರ ವರೆಗಿನ ಅಂಕಿ ಅಂಶಗಳ ಪ್ರಕಾರ 50589 ಯುವ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದು ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಸದ್ಯ  ಚಿಕ್ಕೋಡಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಅಣ್ಣಾಸಾಹೇಬ್‌ ಜೊಲ್ಲೆ ಹೆಸರು ಘೋಷಣೆಯಾಗಿದ್ದು,  ಕೈ ಪಕ್ಷದಿಂದ  ಸಚಿವ ಸತೀಶ್‌ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನೇ ಚುನಾವಣಾ ಕಣಕ್ಕೆ ಇಳಿಸಲು ಸಕಲ ತಯಾರಿ ನಡೆಸಲಾಗುತ್ತಿದೆ. ಒಟ್ಟಾರೆಯಾಗಿ ಚಿಕ್ಕೋಡಿ ಕ್ಷೇತ್ರದಲ್ಲಿ ಸಚಿವರ ಪುತ್ರಿ ಫುಲ್‌ ಆ್ಯಕ್ಟೀವ್ ಆಗಿದ್ದು, ಹೈಕಮಾಂಡ್‌ ನಿಂದ  ಹೆಸರು ಘೋಷಣೆ ಮಾತ್ರ ಬಾಕಿಯಿದೆ.