Belagavi News In Kannada | News Belgaum

ನುಡಿದಂತೆ ನಡೆಯುವ ಪಕ್ಷ ಕಾಂಗ್ರೆಸ್‌ ಮಾತ್ರ: ಸಚಿವ ಸತೀಶ್‌ ಜಾರಕಿಹೊಳಿ

ಚಿಕ್ಕೋಡಿ- ಬೆಳಗಾವಿ ಲೋಕಸಭೆ ಅಭ್ಯರ್ಥಿಗಳನ್ನ ಗೆಲ್ಲಿಸೋಣ- 9 ತಿಂಗಳಲ್ಲಿ ಕುಡಚಿ ಮತಕ್ಷೇತ್ರಕ್ಕೆ PWD ಯಿಂದ 46 ಕೋಟಿ ರೂ. ಅನುದಾನ ನೀಡಿದ್ದೇನೆಂದ ಸಚಿವ ಸತೀಶ್‌

ರಾಯಬಾಗ: ನುಡಿದಂತೆ ನಡೆಯುವ ಪಕ್ಷ ಎಂದರೆ ಅದು ಕಾಂಗ್ರೆಸ್‌ ಪಕ್ಷ ಮಾತ್ರ. ಹೀಗಾಗಿ ಅಧಿಕಾರಕ್ಕೇರಿ ಆರು ತಿಂಗಳಲ್ಲೇ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದು, ಕುಡಚಿ ಮತಕ್ಷೇತ್ರಕ್ಕೂ ನಮ್ಮ ಇಲಾಖೆಯಿಂದಲೇ 46 ಕೋಟಿ ರೂ. ಅನುದಾನ ನೀಡಿದ್ದೇನೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

 

ಕುಡಚಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯನ್ನು  ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮುನ್ನಡೆಸುವ ಮೂಲಕ ಗ್ಯಾರಂಟಿ ಯೋಜನೆಗಳಿಗಾಗಿ 58 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ. ಹೀಗಾಗಿ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ಸರ್ಕಾರದ ಕಾರ್ಯಕ್ರಮಗಳನ್ನು ಮುಟ್ಟಿಸಬೇಕೆಂದು ಕರೆ ನೀಡಿದರು.

 

ಬಿ. ಶಂಕರನಾಂದ ಅವರ ನಂತರ ಚಿಕ್ಕೋಡಿ ಲೋಕಸಭೆಯಿಂದ ಪ್ರಕಾಶ ಹುಕ್ಕೇರಿ ಅವರನ್ನು ಬಿಟ್ಟರೇ ಕಳೆದ 25ರಿಂದ 30 ವರ್ಷ ಅವಧಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಗೆಲ್ಲಲು ಎಲ್ಲಾ ರೀತಿಯ ಅವಕಾಶಗಳಿದ್ದು, ಹೈಕಮಾಂಡ್ ಯಾರನ್ನೂ ಅಭ್ಯರ್ಥಿಯಾಗಿ ಘೋಷಿಸಿದರೂ ಅವರ ಗೆಲುವಿಗೆ ಶ್ರಮಿಸಬೇಕೆಂದು ತಿಳಿಸಿದರು.

ಗ್ಯಾರಂಟಿಗಳಿಂದ ಅಭಿವೃದ್ಧಿ ಕೆಲಸಗಳನ್ನು ಆಗುತ್ತಿಲ್ಲ ಎಂದು ಬಿಜೆಪಿಯವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಮ್ಮ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳು ಸದಾ ಮುನ್ನಡೆಯುತ್ತಿವೆ. ಬಿಜೆಪಿಯವರು ನೀಡಿದ್ದ ಭರವಸೆಗಳಲ್ಲಿ ಎಷ್ಟು ಈಡೇರಿಸಿದ್ದಾರೆ ಎಂಬುವುದನ್ನು ನೀವು ಗಮನಿಸಬೇಕು. ಆದ್ದರಿಂದ ಒಟ್ಟಾರೆಯಾಗಿ ಹಿರಿಯರಾದ ಪ್ರಕಾಶ್‌ ಹುಕ್ಕೇರಿ, ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ, ಗಣೇಶ ಹುಕ್ಕೇರಿ, ಮಹೇಂದ್ರ ತಮ್ಮಣ್ಣವರ್‌, ಮಾಜಿ ಶಾಸಕರಾದ ಶ್ಯಾಮ್‌ ಘಾಟಗೆ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಮುಖಂಡರು, ಕಾರ್ಯಕರ್ಯರು ಒಟ್ಟಾಗಿ ಚಿಕ್ಕೋಡಿ, ಬೆಳಗಾವಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದರು.

ಶಾಸಕ ಮಹೇಂದ್ರ ತಮ್ಮಣ್ಣವರ್‌ ಮಾತನಾಡಿ, ಚಿಕ್ಕೋಡಿ ಲೋಕಸಭೆಯ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಹಗಲಿರಳು ಶ್ರಮಿಸುತ್ತೇವೆ ಎಂದ ಅವರು, ಕಾರ್ಯಕರ್ತರು ಸರ್ಕಾರದ ಗ್ಯಾರಂಟಿಗಳನ್ನು ಪ್ರತಿ ಮನೆಗಳಿಗೂ ತಲುಪಿಸಬೇಕೆಂದು ಮನವಿ ಮಾಡಿದರು. 

ಮಾಜಿ ಶಾಸಕ ಶ್ಯಾಮ ಘಾಟಗೆ ಮಾತನಾಡಿ, ಕುಡಚಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಅಧಿಕ ಮತಗಳನ್ನು ಇಲ್ಲಿನ ಜನತೆ ನೀಡುತ್ತಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ, ಚಿಕ್ಕೋಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಬೂಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಗಜಾನನ ಮಂಗಸೂಳಿ  ಸೇರಿದಂತೆ ಕಾಂಗ್ರೆಸ್‌ ಪಕ್ಷದ ಮೂಂಚೂಣಿ ಘಟಕದ ಪದಾಧಿಕಾರಿಗಳು ಇದ್ದರು.