Belagavi News In Kannada | News Belgaum

ಸ್ಟ್ರಾಂಗ್ ರೂಮ್ ಗಳಿಗೆ ಇವಿಎಂ ರವಾನೆ: ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ

ಲೋಕಸಭಾ ಚುನಾವಣೆ: ಮತಕ್ಷೇತ್ರಗಳಿಗೆ ಇವಿಎಂ

ಬೆಳಗಾವಿ, ಮಾ.26: ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಮೊದಲ ಹಂತದ ಯಾರ್ಂಡಮೈಜೇಷನ್ ಪ್ರಕ್ರಿಯೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ವಿಧಾನಸಭಾ ಕ್ಷೇತ್ರವಾರು ರವಾನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ನಗರದ ಹಿಂಡಲಗಾ ಗ್ರಾಮದಲ್ಲಿರುವ ಭಾರತ ಚುನಾವಣಾ ಆಯೋಗದ ಉಗ್ರಾಣ(ಗೊಡೌನ್) ದಲ್ಲಿರುವ ಎಲೆಕ್ಟ್ರಾನಿಕ ಮತಯಂತ್ರಗಳನ್ನು ಮಂಗಳವಾರ(ಮಾ.26) ಬಿಗಿಭದ್ರತೆಯೊಂದಿಗೆ ಆಯಾ ವಿಧಾನಸಭಾ ಮತಕ್ಷೇತ್ರಗಳಿಗೆ ಕಳುಹಿಸಲಾಯಿತು.
ಯಾರ್ಂಡಮೈಜೇಷನ್ ಪ್ರಕ್ರಿಯೆಯಲ್ಲಿ ಹಂಚಿಕೆಗೊಂಡಿರುವ ಮತಯಂತ್ರಗಳನ್ನು ಜಿಪಿಎಸ್ ಆಧಾರಿತ ವಾಹನಗಳ ಮೂಲಕ ಪೆÇಲೀಸ್ ಭದ್ರತೆಯೊಂದಿಗೆ ಮಂಗಳವಾರ ಮಧ್ಯರಾತ್ರಿಯವರೆಗೆ ರವಾನೆ ಮಾಡಲಾಯಿತು.

ಆಯಾ ತಾಲ್ಲೂಕುಗಳಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್ ರೂಮ್ ಗಳಲ್ಲಿ ಇವಿಎಂ ಇರಿಸಲಾಗುತ್ತದೆ. ಎರಡನೇ ಚುನಾವಣಾ ವೀಕ್ಷಕರು ಆಗಮಿಸಿದ ಬಳಿಕ ಅವರ ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಎರಡನೇ ಹಂತದ ಯಾರ್ಂಡಮೈಜೇಷನ್ ಮಾಡಲಾಗುವುದು.
ಎರಡನೇ ಹಂತದ ಯಾರ್ಂಡಮೈಜೇಷನ್ ಆದ ಬಳಿಕವೇ ಯಾವ ಮತಗಟ್ಟೆಗೆ ಯಾವ ಇವಿಎಂ ಹೋಗಲಿದೆ ಎಂಬುದು ಗೊತ್ತಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಎಲೆಕ್ಟ್ರಾನಿಕ್ ಮತಯಂತ್ರಗಳ ಪ್ರಾಥಮಿಕ ಹಂತದ ಪರಿಶೀಲನೆ(ಎಫ್.ಎಲ್.ಸಿ) ನಡೆಸಿ ಉಗ್ರಾಣದಲ್ಲಿ ಇಡಲಾಗುತ್ತದೆ. ಹೀಗೆ ಎಫ್.ಎಲ್.ಸಿ ಮಾಡಲಾಗಿರುವ ಮತಯಂತ್ರಗಳನ್ನು ಪ್ರಥಮ ಹಂತದ ಯಾರ್ಂಡಮೈಜೇಷನ್ ಪ್ರಕ್ರಿಯೆ ಮೂಲಕ ಆಯಾ ಮತಕ್ಷೇತ್ರಗಳಿಗೆ ಅಗತ್ಯಾನುಸಾರ ಶೇ.130 ರಷ್ಟು ಇವಿಎಂ ಹಂಚಿಕೆ ಮಾಡಲಾಗಿರುತ್ತದೆ ಎಂದು ವಿವರಿಸಿದರು.
ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರ ನೇತೃತ್ಚದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಸೇರಿದಂತೆ ಜಿಲ್ಲೆಯ ಎಲ್ಲ ಹದಿನೆಂಟು ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ಇವಿಎಂ ರವಾನೆ ಕಾರ್ಯದ ಉಸ್ತುವಾರಿ ವಹಿಸಿದ್ದರು.