Belagavi News In Kannada | News Belgaum

ಅಭ್ಯರ್ಥಿಗಳಿಗೆ ನಮ್ಮ ಬೆಂಬಲವಿಲ್ಲ: ಬಿಎಸ್ ವೈ ಮುಂದೆ ಬೆಳಗಾವಿ ಬಿಜೆಪಿ ನಾಯಕರ ಒಕ್ಕೋರಲಿನ ವಿರೋಧ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದ ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸಭೆ ನಡೆಸಿ, ಬಿಕ್ಕಟ್ಟು ಶಮನಗೊಳಿಸಲು ಪ್ರಯತ್ನಿಸಿದರು.

ಮಂಗಳವಾರ ರಾತ್ರಿ ನಗರಕ್ಕೆ ಆಗಮಿಸಿದ ಅವರು ಸ್ಥಳೀಯ ಖಾಸಗಿ ಹೊಟೇಲ್ ನಲ್ಲಿ ತಡರಾತ್ರಿವರೆಗೂ ಬಿಜೆಪಿ ನಾಯಕರ ಸಭೆ ನಡೆಸಿ, ಅಸಮಾಧಾನಿತರ ಅಹವಾಲು ಆಲಿಸಿದರು. ಬೆಳಗಾವಿ ಲೋಕಸಭೆ ಟಿಕೆಟ್ ಸ್ಥಳೀಯರಲ್ಲಿ ಯಾರಿಗೇ ನೀಡಿದರೂ ಗೆಲುವಿಗೆ ಶ್ರಮಿಸುತ್ತೇವೆ. ಆದರೆ, ಹೊರಗಿನ ಅಭ್ಯರ್ಥಿಗಳಿಗೆ ನಮ್ಮ‌ ಬೆಂಬಲ ನೀಡುವುದಿಲ್ಲ ಎಂದು ವರಿಷ್ಠರ ಮುಂದೆ ಆಕಾಂಕ್ಷಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು.

ಆದರೂ, ಹೈಕಮಾಂಡ್ ಜಗದೀಶ್ ಶೆಟ್ಟರ್ ಅವರಿಗೆ ಮಣೆಹಾಕಿದ್ದು, ಇಂದಿನಿಂದ ಶೆಟ್ಟರ್ ವಿದ್ಯುಕ್ತವಾಗಿ ಪ್ರಚಾರ ಆರಂಭಿಸುತ್ತಿರುವುದರ ಹಿನ್ನೆಲೆಯಲ್ಲಿ‌ ಮಂಗಳವಾರ ಯಡಿಯೂರಪ್ಪ ಅವರು ಜಿಲ್ಲೆಯ ಬಿಜೆಪಿ ನಾಯಕರ ಸಭೆ ನಡೆಸಿ, ಜಗದೀಶ್ ಶೆಟ್ಟರ್ ಅವರ ಆಯ್ಕೆಗೆ ಒಗ್ಗಟ್ಟಿನಿಂದ ಶ್ರಮಿಸುವಂತೆ ಸೂಚನೆ ನೀಡಿದರೂ, ಬೆಳಗಾವಿ ಬಿಜೆಪಿ ನಾಯಕರು ಶೆಟ್ಟರ್ ಬೆಂಬಲಕ್ಕೆ ವಿರೋಧ ವ್ಯಕ್ತಪಡಿಸಿದರು ಎನ್ನಲಾಗಿದೆ.

ಸಭೆಯಲ್ಲಿ ಸಂಸದೆ ಮಂಗಲಾ ಅಂಗಡಿ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ್ ಪಾಟೀಲ, ಮಹಾಂತೇಶ ಕವಟಗಿಮಠ, ಎಂ.ಬಿ.ಜಿರಲಿ, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಸಂಜಯ ಪಾಟೀಲ ಪಾಲ್ಗೊಂಡಿದ್ದು, ಶಾಸಕರಾದ ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರು ಸಭೆಗೆ ಗೈರಾಗಿದ್ದಾರೆ.