Belagavi News In Kannada | News Belgaum

ಬೆಳಗಾವಿ ಜಿಲ್ಲೆಯ ಜನರನ್ನು ಬಕ್ರಾ ಮಾಡೋಕೆ ಬಂದಿದ್ದಾರಾ ಶೆಟ್ಟರ್?: ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನೆ

ಬೆಳಗಾವಿ: ಕೋವಿಡ್ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಗೆ ಅಲೋಟ್ ಆಗಿದ್ದ ಆಕ್ಸಿ ಜನ್ ನ್ನು ಹುಬ್ಬಳ್ಳಿ – ಧಾರವಾಡಕ್ಕೆ ತೆಗೆದುಕೊಂಡು ಹೋಗಿ ಇಲ್ಲಿಯ ಜನರಿಗೆ ಅನ್ಯಾಯ ಮಾಡಿರುವ ಜಗದೀಶ್ ಶೆಟ್ಟರ್ ಕೊಡುಗೆ ಏನಿದೆ ಬೆಳಗಾವಿ ಜಿಲ್ಲೆಗೆ? ಈಗ ಇಲ್ಲಿಗೆ ಬಂದು ಕರ್ಮ ಭೂಮಿ ಕರ್ಮ ಭೂಮಿ ಎನ್ನುತ್ತಿದ್ದಾರೆ. ನಾವೇನು ಹುಚ್ಚರಾ? ಬೆಳಗಾವಿ ಜಿಲ್ಲೆಯ ಜನರನ್ನು ಬಕ್ರಾ ಮಾಡಲು ಬಂದಿದ್ದೀರಾ? ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಖಾರವಾಗಿ ಪ್ರಶ್ನಿಸಿದ್ದಾರೆ.

ಗೋಕಾಕದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಶೆಟ್ಟರ್ ಏನ್ ಮಾಡಿದ್ದಾರೆ ಬೆಳಗಾವಿಗೆ? ಬೆಳಗಾವಿ ದೊಡ್ಡ ಜಿಲ್ಲೆ, ಜನಸಂಖ್ಯೆ ಹೆಚ್ಚಿದೆ. ಕೊರೋನಾ ಸಂದರ್ಭದಲ್ಲಿ ಜಿಲ್ಲೆಗೆ ಆಕ್ಸಿಜನ್ ಅಲೋಟ್ ಮಾಡಿದ್ದನ್ನು ಹುಬ್ಬಳ್ಳಿ -ಧಾರವಾಡಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇದೇ ಕರ್ಮ ಭೂಮಿಯಾ? ಜಿಲ್ಲಾ ಉಸ್ತುವಾರಿ ಸಚಿವರಿದ್ದರಲ್ಲ, ಕರ್ಮ ಭೂಮಿ ಎನ್ನಲು ಏನ್ ಮಾಡಿದ್ದಾರೆ ಬೆಳಗಾವಿಗೆ? ಎಂದು ಪ್ರಶ್ನಿಸಿದರು.

6 ಬಾರಿ ಹುಬ್ಬಳ್ಳಿ ಜನರು ಅವರನ್ನು ಆಯ್ಕೆ ಮಾಡಿ ಕಳುಹಿಸಿದ್ದರು. ವಿರೋಧ ಪಕ್ಷದ ನಾಯಕರಾದರು, ಮಂತ್ರಿಯಾದರು, ಮುಖ್ಯಮಂತ್ರಿಯಾದರು, ಬಿಜೆಪಿ ಅಧ್ಯಕ್ಷರಾದರು. ಎಲ್ಲವನ್ನೂ ಅನುಭವಿಸಿದ್ದಂತವರನ್ನು ಹುಬ್ಬಳ್ಳಿ- ಧಾರವಾಡ ಜನರು ಹೊರಗೆಹಾಕಿದ್ದಾರೆ. ಈಗ ಇಲ್ಲಿಗೆ ಬಂದು ಕರ್ಮ ಭೂಮಿ ಕರ್ಮ ಭೂಮಿ ಎನ್ನಲು ಏನಿದೆ ಬೆಳಗಾವಿಗೆ ನಿಮ್ಮ ಕೊಡುಗೆ? ಏನಾದರೂ ಕೊಡುಗೆ ಇದೆಯಾ ನಾಚಿಕೆಯಾಗಬೇಕು ನಿಮಗೆ ಎಂದು ಹೆಬ್ಬಾಳಕರ್ ಕಿಡಿಕಾರಿದರು.

ಗೋ ಬ್ಯಾಕ್ ಶೆಟ್ಟರ್ ಎನ್ನುವುದು ಅವರ ಪಕ್ಷದ ಕಾರ್ಯಕರ್ತರೇ ಮಾಡುತ್ತಿರುವ ಅಭಿಯಾನ, ಅವರ ಪಕ್ಷದ ಕಾರ್ಯಕರ್ತರ ಸ್ವಾಭಿಮಾನಕ್ಕೂ ಧಕ್ಕೆಯಾಗಿದೆ. ಮೋದಿಯವರು ಎಲ್ಲೋ ಹೋಗಿ ಚುನಾವಣೆಗೆ ನಿಂತಿದ್ದಾರೆ ಎಂದು ತಮ್ಮ ಬೆಳಗಾವಿ ಸ್ಪರ್ಧೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇವರೇನು ಮೋದಿಯಷ್ಟು ದೊಡ್ಡವರಾ? ನಾಚಿಕೆಯಾಗಬೇಕು ಇವರಿಗೆ ಎಂದು ಜರಿದರು.//////