Belagavi News In Kannada | News Belgaum

ಬೆಳಗಾವಿ ಲೋಕಸಭೆ ಕದನದಲ್ಲಿ ಅಭ್ಯರ್ಥಿಗಳ ರಣಾರ್ಭಟ ಶುರು

ಬೆಳಗಾವಿ: ಕುಂದಾನಗರಿಯಲ್ಲಿ ಈ ಬಾರಿ ಕಾಂಗ್ರೆಸ್‌ನ ಹೊಸ ಮುಖ- ಬಿಜೆಪಿಯ ಹಳೇ ಹುಲಿ ಮುಖಾಮುಖಿಯಾಗುತ್ತಿವೆ. ಹೀಗಾಗಿ ಬೆಳಗಾವಿಯಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಲು ಬಿಜೆಪಿ ಸಜ್ಜಾಗಿದೆ. ಜಗದೀಶ್ ಶೆಟ್ಟರ್‌ನ ಗೆಲುವಿನ ದಡ ಮುಟ್ಟಿಸಲು ಕೇಸರಿ ನಾಯಕರೆಲ್ಲಾ ಅಖಾಡಕ್ಕೆ ಇಳಿಯಲು ಮುಂದಾಗಿದ್ದಾರೆ. ಕೇಸರಿ ಕಲಿಗಳೆಲ್ಲಾ ಒಗ್ಗಟ್ಟಾಗಿ ಲಿಂಗಾಯತ ನಾಯಕನನ್ನ ಈ ಬಾರಿ ಲೋಕದಲ್ಲಿ ಗೆಲ್ಲಿಸಲೇ ಬೇಕು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ರಾಜ್ಯದಲ್ಲಿ ಭಾರೀ ಹೈವೋಲ್ಟೇಜ್ ಕ್ಷೇತ್ರ ಅಂದ್ರೆ ಅದು ಬೆಳಗಾವಿ. ಇಲ್ಲಿ ಲಿಂಗಾಯತ ಸಮುದಾಯದ ಅಭ್ಯರ್ಥಿಗಳ ಮಧ್ಯೆಯೇ ಪೈಪೋಟಿ ಶುರುವಾಗಿದೆ. ಹೀಗಾಗಿ ಲಿಂಗಾಯತ ಮತಗಳನ್ನ ಒಗ್ಗೂಡಿಸಲು ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಅಖಾಡಕ್ಕೆ ಧುಮುಕಲಿದ್ದಾರೆ. ಕುಂದಾನಗರಿಯಲ್ಲಿ ಕೇಸರಿ ಕಹಳೆಯನ್ನ ಮೊಳಗಿಸಲು ಏಪ್ರಿಲ್ ಮೊದಲ ವಾರದಲ್ಲಿ ಬೆಳಗಾವಿಗೆ ಬಿಜೆಪಿ ನಾಯಕು ಎಂಟ್ರಿಕೊಡಲಿದ್ದಾರೆ. ಬಿಎಸ್‌ವೈಗೆ ಬಿಜೆಪಿ ಉಸ್ತುವಾರಿ ರಾಧಾಮೋಹನ್ ಅಗರ್‌ವಾಲ್ ಸಾಥ್ ಕೊಡಲಿದ್ದಾರೆ. ಜೊತೆಗೆ ಜಾರಕಿಹೊಳಿ ಬ್ರದರ್ಸ್‌ ಒಗ್ಗೂಡಿಸಿ ಶೆಟ್ಟರ್ ಗೆಲುವಿಗೆ ಸೋಪಾನ ಕಟ್ಟಲು ಶತ ಪ್ರಯತ್ನ ನಡೆಸಲಿದ್ದಾರೆ.
ಮೊದಲಿಗೆ ಜಾರಕಿಹೊಳಿ ಬ್ರದರ್ಸ್ ಕ್ಷೇತ್ರಗಳ ಮತಗಳನ್ನ ಒಗ್ಗೂಡಿಸುವುದು ಗೆಲುವಿನ ಮೊದಲ ರಣತಂತ್ರವಾಗಿದೆ. ಗೋಕಾಕ್, ಅರಭಾವಿ ಮತಗಳು ಚದುರದಂತೆ ಎಚ್ಚರವಹಿಸುವುದು ಕೇಸರಿ ನಾಯಕರ ಮತ್ತೊಂದು ಸ್ಟ್ರಾಟಜಿಯಾಗಿದೆ. ಯಡಿಯೂರಪ್ಪ ಬೆಳಗಾವಿಗೆ ಎಂಟ್ರಿಯಾದ್ರೆ ವೀರಶೈವ-ಲಿಂಗಾಯತ ಮತಗಳು ಒಗ್ಗೂಡೋದು ಪಕ್ಕಾ. ಹೀಗಾಗಿ ವೀರಶೈವ-ಲಿಂಗಾಯತ ಮತಗಳನ್ನು ಒಂದೆಡೆ ಕ್ರೋಢೀಕರಣ ಮಾಡೋದೆ ಬಿಜೆಪಿಗರ ಅಸಲಿ ಪ್ಲಾನ್ ಆಗಿದೆ. ಜೊತೆಗೆ ಲಿಂಗಾಯತ ಮತಗಳು ಕಾಂಗ್ರೆಸ್‌ಗೆ ಹೋಗದಂತೆ ಒಂದೆಡೆ ಕ್ರೋಢೀಕರಿಸಿ ಶೆಟ್ಟರ್ ಗೆಲುವಿಗೆ ಬುನಾದಿಯನ್ನ ಹಾಕಿಸುವುದು ಬಿಜೆಪಿ ಪಡೆಯ ರಣತಂತ್ರ ಅಂತ ತಿಳಿದುಬಂದಿದೆ.
ಜಾರಕಿಹೊಳಿ ಬ್ರದರ್ಸ್ ಕೋಟೆಯಲ್ಲಿ ‘ಕೈ’ ರಣಕಹಳೆ: ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ರಣತಂತ್ರವನ್ನ ಮಾಡ್ತಿದ್ರೆ. ಕಾಂಗ್ರೆಸ್ ನಾಯಕರು ಈಗಾಗಲೇ ಅಖಾಡಕ್ಕೆ ಧುಮುಕಿದ್ದಾರೆ. ಜಾರಕಿಹೊಳಿ ಬ್ರದರ್ಸ್ ಕ್ಷೇತ್ರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ತಮ್ಮ ಪುತ್ರ ಬೆಳಗಾವಿ ಲೋಕಸಬಾ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಪರ ಪ್ರಚಾರ ನಡೆಸ್ತಿದ್ದಾರೆ. ಜೊತೆಗೆ ಜಾರಕಿಹೊಳಿಗೆ ಪೆಟ್ಟು ಕೊಡಲು ಭಾರೀ ಸ್ಟ್ರಾಟಜಿ ಮಾಡಿದ್ದಾರೆ. ಮಗ ಮೃಣಾಲ್‌ನ ಗೆಲ್ಲಿಸಲು ಜಾರಕಿಹೊಳಿ ಬ್ರದರ್ಸ್ ಆಪ್ತರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗಾಳ ಹಾಕಿದ್ದಾರೆ. ಅರಭಾವಿ-ಗೋಕಾಕ್ ಕ್ಷೇತ್ರಗಳ ಲಿಂಗಾಯತ ನಾಯಕರನ್ನ ಭೇಟಿ ಮಾಡಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಆಪ್ತರನ್ನ ಭೇಟಿ ಮಾಡಿ ಪುತ್ರನ ಗೆಲುವಿನ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ ಬಾಲಚಂದ್ರ ಜಾರಕಿಹೊಳಿ ಆಪ್ತ ಬಸನಗೌಡ ಪಾಟೀಲ್ ಭೇಟಿ ಮಾಡಿ ಹೆಬ್ಬಾಳ್ಕರ್ ಮಾತುಕತೆ ನಡೆಸಿದ್ದು, ಬಿಜೆಪಿಗರ ಕ್ಷೇತ್ರದಲ್ಲಿ ಅವರನ್ನೇ ಕಟ್ಟಿಹಾಕಲು ಲಕ್ಷ್ಮೀ ಹೆಬ್ಬಾಳ್ಕರ್ ಪ್ಲಾನ್ ಮಾಡಿದ್ದಾರೆ.
ಒಟ್ಟಾರೆ, ಕುಂದಾನಗರಿಯ ಸಿಹಿಗಾಗಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಇದೀಗ ಲೋಕ ಕದನದಲ್ಲಿ ಬಿಜೆಪಿಯ ಹಳೇ ಹುಲಿ ಗೆಲ್ಲುತ್ತಾ? ಇಲ್ಲಾ ಕಾಂಗ್ರೆಸ್‌ನ ಹೊಸ ಮುಖಕ್ಕೆ ಮತದಾರ ಮಣೆ ಹಾಕ್ತಾನಾ? ಅನ್ನೋದು ಫಲಿತಾಂಶದ ಬಳಿಕ ಗೊತ್ತಾಗಲಿದೆ.