Belagavi News In Kannada | News Belgaum

ಮಾಜಿ ಸಿಎಂ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ

ಬೆಳಗಾವಿಗೆ ಜಗದೀಶ್ ಶೆಟ್ಟರ್ ಕೊಡುಗೆ ಶೂನ್ಯ

 *ಬೆಳಗಾವಿ* : ಬೆಳಗಾವಿ ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಕೂಡುಗೆ ಶೂನ್ಯ. ಹೊರ ಜಿಲ್ಲೆಯ ಅಭ್ಯರ್ಥಿ ಬದಲಿಗೆ ಮನೆ ಮಗ ಮೃಣಾಲ್‌ ಹೆಬ್ಬಾಳ್ಕರ್ ಅವರನ್ನು ಬೆಂಬಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿ ಹಾಗೂ ಯದ್ದಲಭಾವಿಹಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಪರ ಪ್ರಚಾರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಮೃಣಾಲ್ ಹೆಬ್ಬಾಳ್ಕರ್, ನನ್ನಂತೆ, ನನ್ನ ಸಹೋದರ ನಂತೆ ಸಾಮಾಜಿಕ ಬದ್ಧತೆ ಹೊಂದಿದ್ದಾನೆ ಎಂದರು.
ಕೋವಿಡ್ ಸಂದರ್ಭದಲ್ಲಿ ಬೆಳಗಾವಿಗೆ ಬರಬೇಕಿದ್ದ ಆಕ್ಸಿಜನ್ ಸಿಲಿಂಡರ್ ಗಳನ್ನು ಧಾರವಾಡಕ್ಕೆ ಸ್ಥಳಾಂತರಿಸಲಾಯಿತು. ಇದಕ್ಕೆ ಶೆಟ್ಟರ್ ಅವರ ಕುಮ್ಮಕ್ಕೆ ಕಾರಣ. ಸ್ಥಳೀಯರ ಸಮಸ್ಯೆಗಳನ್ನು ಅರಿಯದ ಶೆಟ್ಟರ್ ಓರ್ವ ಸ್ವಾರ್ಥ ರಾಜಕಾರಣಿ ಎಂದರು. ಹೊರಗಡೆಯ ವ್ಯಕ್ತಿ ಯಾವತ್ತಿಗೂ ಹೊರಗಡೆಯವರೇ, ಮನೆ ಮಗ ಎಂದಿಗೂ ಮನೆ ಮಗನೇ ಎಂದು ಹೇಳಿದರು.
ನಾನು 24 ವರ್ಷಗಳ ಹಿಂದೆ ಖಾನಾಪುರದಲ್ಲಿ ಸಾಮಾನ್ಯ ಕಾರ್ಯಕರ್ತೆಯಾಗಿ ರಾಜಕೀಯ ಜೀವನ ಆರಂಭಿಸಿದೆ. ಇಂದು ಏಳು ಕೋಟಿ ಜನಸಂಖ್ಯೆಯ ಕರ್ನಾಟಕ ರಾಜ್ಯದಲ್ಲಿ ಏಕೈಕ ಮಹಿಳಾ ಮಂತ್ರಿಯಾಗಿರುವೆ. ಇದಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಾಗೂ ಆ ದೇವರ ಆಶೀರ್ವಾದವೇ ಕಾರಣ. ಇದೇ ರೀತಿ ನನ್ನ ಮಗನಿಗೂ ನಿಮ್ಮ ಆಶೀರ್ವಾದ ಇರಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೋಳಿ, ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್, ಶಂಕರಗೌಡ ಪಾಟೀಲ, ಮಹೇಶ ಸುಗಣೆನ್ನವರ, ನಾಗೇಶ್ ದೇಸಾಯಿ, ದತ್ತಾ ಬಂಡಿಗೆನಿ, ಫಕೀರವ್ವ ಅಮ್ಮಪೂರ್, ಲಕ್ಷ್ಮೀ ನಾರಾಯಣ, ರುದ್ರಪ್ಪ, ಉದಯ ಕೆಸರೂರ್, ಮಂಜು ಪೂಜೇರಿ, ಬಸವರಾಜ ನೇಸರಗಿ, ಅಡಿವೆಪ್ಪ ಮಿಸಿನಾಯಕ್, ಪ್ರಕಾಶ್ ಉದ್ದನ್ನವರ, ಯಲ್ಲಪ್ಪ ಹೊಳೆಪ್ಪಗೋಳ, ಯಲ್ಲ ಬೋರಾಮರದ್ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.

ಹೆಣದ ಮೇಲೆ ರಾಜಕೀಯ ಮಾಡುವ ಬಿಜೆಪಿ ನಾಯಕರು

ಕಾಂಗ್ರೆಸ್ ಪಕ್ಷದಿಂದ ಅಭಿವೃದ್ಧಿ ಸಾಧ್ಯ* 

ಪ್ರಚಾರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಪ್ರತಿ ಜನರ ಅಕೌಂಟ್ ಗೆ  ಹತ್ತು ಲಕ್ಷ ಹಣ ಹಾಕುವುದಾಗಿ ಹೇಳಿದ್ದ ಪ್ರಧಾನಿ ಮೋದಿ ಮಾತು ತಪ್ಪಿದ್ದಾರೆ. ಜನರ ಒಳಿತಿಗಾಗಿ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮಹಿಳೆಯರ, ಬಡ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಸವದತ್ತಿ ವಿಧಾನಸಭಾ ಕ್ಷೇತ್ರದ ಹಂಚಿನಾಳ ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರದ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಮಾತ್ರ ಅಭಿವೃದ್ಧಿ. ಬಿಜೆಪಿಯವರಂತೆ ಮಾತು ತಪ್ಪುವ ಪಕ್ಷ ನಮದಲ್ಲ ಎಂದರು. 10 ಲಕ್ಷ ನೀಡುವುದಾಗಿ ಹೇಳಿದ್ದ ಮೋದಿ, ಒಂದು ಬಿಡಿಗಾಸು ಕೊಟ್ಟಿಲ್ಲ ಎಂದು ಟೀಕಿಸಿದರು.
ಕರೋನಾ ಸಂಕಷ್ಟ, ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ಒಳ್ಳೆಯದು ಮಾಡುವ ಉದ್ದೇಶದಿಂದಲೇ ಕಾಂಗ್ರೆಸ್, ಚುನಾವಣೆಗೂ ಮುನ್ನ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಅಧಿಕಾರಕ್ಕೆ ಕೇವಲ 100 ದಿನಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿತು. ನಮ್ಮದು ನಿಜವಾದ ಜನಪರ ಸರ್ಕಾರ ಎಂದು ಹೇಳಿದರು. 400 ರೂಪಾಯಿ ಇದ್ದ ಸಿಲಿಂಡರ್ ಬೆಲೆ 1200 ಏರಿಕೆ ಮಾಡಲಾಯಿತು. ಇಂಥ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳು ಜನರ ಕೈಹಿಡಿದಿವೆ. ಸುಮಾರು 1.18 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡಲಾಗುತ್ತಿದೆ. ಗೃಹಲಕ್ಷ್ಮಿ, ಶಕ್ತಿ‌ ಯೋಜನೆಯಿಂದ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಣೆ ಯಾಗಿದೆ ಎಂದರು.
ಪುತ್ರ ರಾಜಕೀಯದಲ್ಲಿ ಸಾಕಷ್ಟು ಕಲಿತಿದ್ದಾನೆ. ಕಳೆದ ಹಲವು ವರ್ಷಗಳಿಂದ ಜನಸೇವೆಯಲ್ಲಿ ಗುರುತಿಸಿಕೊಂಡು, ಲೋಕಸಭೆಯಲ್ಲಿ ಸ್ಪರ್ಧಿಸುತ್ತಿದ್ದಾನೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ಪುತ್ರನ ಮೇಲಿರಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕ  ವಿಶ್ವಾಸ ವೈದ್ಯ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್, ಶೆಟ್ಟೆಪ್ಪ ನಡಕಟ್ಟಿ, ಕೆ.ಎಸ್.ಗುವನ್ನವರ, ಅಲ್ಲಾಬಿ ಕೆರಿಮನಿ, ಮಲ್ಲು ಜಕಾತಿ, ಡಿ.ಡಿ.ಟೋಪೋಜಿ, ಮಹಾರಾಜಗೌಡ ಪಾಟೀಲ, ರಾಜು ವಕೀಲರು ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.

ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಲ್ಲಾ ವರ್ಗದವರಿಗೆ ಅಧಿಕಾರ* 

 *ಹಿರೇಕುಂಬಿ ಗ್ರಾಮದಲ್ಲಿ ಮಗನ ಪರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ ಬೇಟೆ* 

 ಬೆಳಗಾವಿ : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಎಲ್ಲಾ ವರ್ಗದ ಜನರಿಗೆ ಅಧಿಕಾರ ನೀಡಿದೆ. ಅಲ್ಪಸಂಖ್ಯಾತರು ಉನ್ನತ ಸ್ಥಾನಕ್ಕೇರಿದ್ದಾರೆ. ಜನರ ಭಾವನೆಗಳಿಗೆ ಕಾಂಗ್ರೆಸ್ ಪಕ್ಷ ಬೆಲೆ ನೀಡುತ್ತಾ ಬಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಸವದತ್ತಿ ತಾಲೂಕಿನ ಹಿರೇಕುಂಬಿ ಗ್ರಾಮದಲ್ಲಿ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಪರ ಪ್ರಚಾರ ನಡೆಸಿದರು. ಇದೇ ವೇಳೆ ಮಾತನಾಡಿದ ಸಚಿವರು,  10 ವರ್ಷಗಳ ಹಿಂದೆ ನಾನು ಲೋಕಸಭೆಗೆ ‌ಸ್ಪರ್ಧಿಸಿದ್ದ ವೇಳೆ ನನಗೆ ಸವದತ್ತಿ ಕ್ಷೇತ್ರದಲ್ಲಿ ಮೋದಿ ಅಲೆ ನಡುವೆಯೂ 10 ಸಾವಿರ ಮತಗಳ ಲೀಡ್ ಸಿಕ್ಕಿತ್ತು. ಇದೀಗ ನನ್ನ ಮಗ ನಿಮ್ಮ ಮುಂದೆ ಬಂದಿದ್ದಾನೆ. ಅವನಿಗೆ ಆಶೀರ್ವಾದ ಮಾಡಿ ಎಂದು ಹೇಳಿದರು.
 ಸವದತ್ತಿ ತಾಯಿ ಯಲ್ಲಮ್ಮ ದೇವಿಯ ಕೃಪೆ, ಈ ಭಾಗದ ಜನರ ಆಶೀರ್ವಾದ  ನನ್ನ ಮಗನ ಮೇಲಿರಲಿ. ಅವನನ್ನು ಬೆಂಬಲಿಸಿ ಎಂದು ವಿನಂತಿಸಿದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆಗಳಿಂದ ಮಹಿಳೆಯರು ರಾಜ್ಯದ ತೀರ್ಥ ಕ್ಷೇತ್ರಗಳ ದರ್ಶನ ಮಾಡುವಂತಾಗಿದೆ. ಇದರಿಂದ ಧಾರ್ಮಿಕ ಕ್ಷೇತ್ರಗಳ ಆದಾಯವೂ ದ್ವಿಗುಣಗೊಂಡಿದೆ ಎಂದು ಸಚಿವರು ಹೇಳಿದರು.
ಶಕ್ತಿ ಯೋಜನೆಯಿಂದ ನಮ್ಮ ಮಹಿಳೆಯರು ರಾಜ್ಯದ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಸ್ವತಃ ವೀರೇಂದ್ರ ಹೆಗ್ಗಡೆ ಅವರೇ ಶಕ್ತಿ ಯೋಜನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಮ್ಮ ಉತ್ತರ ಕರ್ನಾಟಕದ ಹೆಣ್ಣು ಮಕ್ಕಳ ಧರ್ಮಸ್ಥಳದ ಭೇಟಿ ಜಾಸ್ತಿಯಾಗಿದೆ. ಇದಕ್ಕೆ ಶಕ್ತಿ ಯೋಜನೆ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸವದತ್ತಿ ಶಾಸಕ  ವಿಶ್ವಾಸ್ ವೈದ್ಯ, ಮೃಣಾಲ್ ಹೆಬ್ಬಾಳಕರ್, ಇರ್ಫಾನ್ ಪಠಾಣ, ನಾಗೇಶ್ ಬೆಳವಡಿ, ಮಲ್ಲಿಕಾರ್ಜುನ ಅಬಟಿ, ಗಣಯ್ಯ ಅಮೋಗಿಮಠ್, ರುದ್ರಗೌಡ ಪಾಟೀಲ, ರಮೇಶ್ ಸಾಳೂಂಕೆ, ಮಹದೇವಪ್ಪ ಹೆಬ್ಬಳ್ಳಿ, ರಾಮನಗೌಡ ತಿಪ್ಪರಾಶಿ, ನಿಂಗಪ್ಪ ಉಳ್ಳಿಗೇರಿ, ಡಿ.ಡಿ.ಟೋಪೋಜಿ ಹಾಗೂ ಪಕ್ಷದ‌ ಕಾರ್ಯಕರ್ತರು ಇದ್ದರು.