Belagavi News In Kannada | News Belgaum

ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಲ್ಲಾ ವರ್ಗದವರಿಗೆ ಅಧಿಕಾರ*   *ಹಿರೇಕುಂಬಿ ಗ್ರಾಮದಲ್ಲಿ ಮಗನ ಪರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ ಬೇಟೆ* 

 *ಬೆಳಗಾವಿ* : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಎಲ್ಲಾ ವರ್ಗದ ಜನರಿಗೆ ಅಧಿಕಾರ ನೀಡಿದೆ. ಅಲ್ಪಸಂಖ್ಯಾತರು ಉನ್ನತ ಸ್ಥಾನಕ್ಕೇರಿದ್ದಾರೆ. ಜನರ ಭಾವನೆಗಳಿಗೆ ಕಾಂಗ್ರೆಸ್ ಪಕ್ಷ ಬೆಲೆ ನೀಡುತ್ತಾ ಬಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಸವದತ್ತಿ ತಾಲೂಕಿನ ಹಿರೇಕುಂಬಿ ಗ್ರಾಮದಲ್ಲಿ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಪರ ಪ್ರಚಾರ ನಡೆಸಿದರು. ಇದೇ ವೇಳೆ ಮಾತನಾಡಿದ ಸಚಿವರು,  10 ವರ್ಷಗಳ ಹಿಂದೆ ನಾನು ಲೋಕಸಭೆಗೆ ‌ಸ್ಪರ್ಧಿಸಿದ್ದ ವೇಳೆ ನನಗೆ ಸವದತ್ತಿ ಕ್ಷೇತ್ರದಲ್ಲಿ ಮೋದಿ ಅಲೆ ನಡುವೆಯೂ 10 ಸಾವಿರ ಮತಗಳ ಲೀಡ್ ಸಿಕ್ಕಿತ್ತು. ಇದೀಗ ನನ್ನ ಮಗ ನಿಮ್ಮ ಮುಂದೆ ಬಂದಿದ್ದಾನೆ. ಅವನಿಗೆ ಆಶೀರ್ವಾದ ಮಾಡಿ ಎಂದು ಹೇಳಿದರು.
 ಸವದತ್ತಿ ತಾಯಿ ಯಲ್ಲಮ್ಮ ದೇವಿಯ ಕೃಪೆ, ಈ ಭಾಗದ ಜನರ ಆಶೀರ್ವಾದ  ನನ್ನ ಮಗನ ಮೇಲಿರಲಿ. ಅವನನ್ನು ಬೆಂಬಲಿಸಿ ಎಂದು ವಿನಂತಿಸಿದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆಗಳಿಂದ ಮಹಿಳೆಯರು ರಾಜ್ಯದ ತೀರ್ಥ ಕ್ಷೇತ್ರಗಳ ದರ್ಶನ ಮಾಡುವಂತಾಗಿದೆ. ಇದರಿಂದ ಧಾರ್ಮಿಕ ಕ್ಷೇತ್ರಗಳ ಆದಾಯವೂ ದ್ವಿಗುಣಗೊಂಡಿದೆ ಎಂದು ಸಚಿವರು ಹೇಳಿದರು.
ಶಕ್ತಿ ಯೋಜನೆಯಿಂದ ನಮ್ಮ ಮಹಿಳೆಯರು ರಾಜ್ಯದ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಸ್ವತಃ ವೀರೇಂದ್ರ ಹೆಗ್ಗಡೆ ಅವರೇ ಶಕ್ತಿ ಯೋಜನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಮ್ಮ ಉತ್ತರ ಕರ್ನಾಟಕದ ಹೆಣ್ಣು ಮಕ್ಕಳ ಧರ್ಮಸ್ಥಳದ ಭೇಟಿ ಜಾಸ್ತಿಯಾಗಿದೆ. ಇದಕ್ಕೆ ಶಕ್ತಿ ಯೋಜನೆ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸವದತ್ತಿ ಶಾಸಕ  ವಿಶ್ವಾಸ್ ವೈದ್ಯ, ಮೃಣಾಲ್ ಹೆಬ್ಬಾಳಕರ್, ಇರ್ಫಾನ್ ಪಠಾಣ, ನಾಗೇಶ್ ಬೆಳವಡಿ, ಮಲ್ಲಿಕಾರ್ಜುನ ಅಬಟಿ, ಗಣಯ್ಯ ಅಮೋಗಿಮಠ್, ರುದ್ರಗೌಡ ಪಾಟೀಲ, ರಮೇಶ್ ಸಾಳೂಂಕೆ, ಮಹದೇವಪ್ಪ ಹೆಬ್ಬಳ್ಳಿ, ರಾಮನಗೌಡ ತಿಪ್ಪರಾಶಿ, ನಿಂಗಪ್ಪ ಉಳ್ಳಿಗೇರಿ, ಡಿ.ಡಿ.ಟೋಪೋಜಿ ಹಾಗೂ ಪಕ್ಷದ‌ ಕಾರ್ಯಕರ್ತರು ಇದ್ದರು.