Belagavi News In Kannada | News Belgaum

ನೀತಿ ಸಂಹಿತೆ, ಬರ ಪರಿಸ್ಥಿತಿ : ಹಳ್ಳಿಗರ ಗೋಳು ಕೇಳೋರಿಲ್ಲ-ಕೂಲಿಕಾರರಿಗೆ ಖಾತರಿಯಾಗದ ಉದ್ಯೋಗ, ವಲಸೆ ಹೋಗುವ ಸಂಭವ

ಹುಕ್ಕೇರಿ: ಒಂದೆಡೆ ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಎದುರಾಗಿದ್ದರೆ, ಇನ್ನೊಂದೆಡೆ ಗ್ರಾಮದ ಆಡಳಿತ ನಿರ್ವಹಣೆ ಹೊಣೆ ಹೊತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳಿಗೆ ಹಲವು ಜವಾಬ್ದಾರಿಗಳು ಹೆಗಲೇರಿಕೊಂಡಿವೆ. ಇದರಿಂದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಧಿಕಾರ ಇದ್ದೂ ಇಲ್ಲದಂತಾಗಿದೆ. ಜೊತೆಗೆ ಸದ್ಯ ಎದುರಾಗಿರುವ ಭೀಕರ ಬರದ ಸ್ಥಿತಿಯೂ ಸೇರಿದಂತೆ ಹಳ್ಳಿಗಳಲ್ಲಿ ಆಡಳಿತ ನಿರ್ವಹಣೆಗೆ ತೊಡಕು ಎದುರಾಗುತ್ತಿರುವ ದೂರು ಕೇಳಿ ಬರುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲಿ 14 ತಾಲೂಕುಗಳಿದ್ದು 500 ಗ್ರಾಮ ಪಂಚಾಯಿತಿಗಳಿವೆ. ಈ ಪೈಕಿ 453 ಕಡೆಗಳಲ್ಲಿ ಪಿಡಿಒಗಳು ಕಾರ್ಯನಿರ್ವಹಿಸುತ್ತಿದ್ದು ಇನ್ನುಳಿದ ಸ್ಥಾನಗಳು ಖಾಲಿ ಇವೆ. 6 ಜನ ಪಿಡಿಒಗಳು ಸಚಿವರು, ಶಾಸಕರ ಆಪ್ತ ಸಹಾಯಕರಾಗಿ ನಿಯೋಜನೆಗೊಂಡಿದ್ದರೆ, ಕೆಲ ಪಿಡಿಒಗಳನ್ನು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಯ ವಿವಿಧ ವಿಭಾಗಕ್ಕೆ ನೇಮಿಸಲಾಗಿದೆ. ಈ ನಡುವೆ ಅಂತರ್ ಜಿಲ್ಲೆ ನಿಯೋಜನೆ ಮೂಲಕ ಬೇರೆ ಜಿಲ್ಲೆಗಳಿಗೆ ತೆರಳಿದವರೂ ಇದ್ದಾರೆ.
ಕೆಲ ಪಂಚಾಯಿತಿಗಳಲ್ಲಿ ಕಾಯಂ ಪಿಡಿಒಗಳ ಕೊರತೆ ಇರುವುದು ನಿಜ. ಅದನ್ನು ನಿಭಾಯಿಸಲು ಒಬ್ಬೊಬ್ಬ ಪಿಡಿಒಗೆ ಎರಡು ಅಥವಾ ಮೂರು ಗ್ರಾಮ ಪಂಚಾಯಿತಿಗಳ ಆಡಳಿತದ ಜವಾಬ್ದಾರಿ ವಹಿಸಲಾಗಿದೆ. ಇದೇ ವೇಳೆ ಲೋಕಸಭೆ ಚುನಾವಣೆಯ ವಿವಿಧ ವಿಭಾಗಗಳಲ್ಲಿ ಸುದೀರ್ಘ ಎರಡೂವರೆ ತಿಂಗಳ ಕಾಲ ಕರ್ತವ್ಯಕ್ಕೆ ಬಹುತೇಕ ಪಿಡಿಒಗಳ ನಿಯೋಜಿಸಿದ್ದು ಗ್ರಾಮಾಡಳಿತದ ಮೇಲೆ ನೇರ ಪರಿಣಾಮ ಬೀರಿ ಅಭಿವೃದ್ಧಿಗೆ ಹೊಡೆತ ಬಿದ್ದಂತಾಗಿದೆ.
ಚುನಾವಣೆಯ ಎಸ್‌ಎಸ್‌ಟಿ, ಎಫ್‌ಎಸ್‌ಟಿ, ವಿಎಸ್‌ಟಿ, ವಿವಿಟಿ ತಂಡಗಳಲ್ಲಿ ಪಿಡಿಒಗಳು ತೊಡಗಿಸಿಕೊಂಡಿದ್ದರಿAದ ಹಳ್ಳಿಗಳಲ್ಲಿ ಬರಗಾಲ ಎದುರಿಸುವ ಕಾರ್ಯಕ್ಕೆ ಹಿನ್ನಡೆಯಾಗಿದೆ. ಜನ-ಜಾನುವಾರುಗಳಿಗೆ ನೀರು ಪೂರೈಕೆಗೆ ತೊಂದರೆಯಾಗುತ್ತಿದೆ. ಅಷ್ಟೇ ಅಲ್ಲದೇ ಉದ್ಯೋಗ ಖಾತರಿ ಅಕುಶಲ ಕೂಲಿಕಾರರಿಗೆ ಉದ್ಯೋಗ ನೀಡುವ ಕಾರ್ಯಕ್ಕೂ ಹಿನ್ನಡೆಯಾಗಿದೆ. ಇದರಿಂದ ದುಡಿಯುವ ಕೂಲಿಕಾರ ವರ್ಗ ವಲಸೆ ಹೋಗುವ ಸಂದರ್ಭ ಬಂದೊದಗಿ ಮತ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಹಾಗಾಗಿ ಮತದಾನ ಮತ್ತು ಮತ ಎಣಿಕೆಗೆ ಮಾತ್ರ ಪಿಡಿಒಗಳನ್ನು ಬಳಸಿಕೊಳ್ಳಬೇಕೆನ್ನುವ ಅಭಿಪ್ರಾಯಗಳಿವೆ. ಹಾವೇರಿ ಸೇರಿದಂತೆ ರಾಜ್ಯದ ಕೆಲ ಬೇರೆ ಜಿಲ್ಲೆಗಳಂತೆ ಇಲ್ಲಿನ ಪಿಡಿಒಗಳ ನಿಯೋಜನೆಯನ್ನು ಹಿಂತೆಗೆದುಕೊAಡು ಇತರೆ ಇಲಾಖೆ ಸಿಬ್ಬಂದಿಗಳನ್ನು ಆ ಜಾಗಕ್ಕೆ ನೇಮಿಸಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿವೆ. ಈ ಮೂಲಕ ಭೀಕರ ಬರ ಎದುರಿಸಲು ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳುವ ಹೊಣೆ ಜಿಲ್ಲಾ ಆಡಳಿತದ ಮೇಲಿದೆ.
ಗ್ರಾಮ ಪಂಚಾಯಿತಿಯ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು, ನಿರ್ಣಯಿಸಲು ಪಿಡಿಒ ಅಗತ್ಯ. ಒಬ್ಬೊಬ್ಬರಿಗೆ ಎರಡು, ಮೂರು ಕಡೆ ಜವಾಬ್ದಾರಿ ನೀಡಿದ್ದರಿಂದ ವಾರದಲ್ಲಿ ಒಂದು ಅಥವಾ ಎರಡು ದಿನ ಮಾತ್ರ ಕಚೇರಿಯಲ್ಲಿ ಲಭ್ಯರಿದ್ದು ಜನರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಇದರಿಂದ ಆಡಳಿತ ವ್ಯವಸ್ಥೆ ಬಲಗೊಳಿಸಲು ಸಾಧ್ಯವಾಗುತ್ತಿಲ್ಲ. ಇದು ಹಲವು ಗ್ರಾಮ ಪಂಚಾಯಿತಿಗಳು ಎದುರಿಸುತ್ತಿರುವ ಸಮಸ್ಯೆಯಾಗಿದೆ.
ಬರಗಾಲದ ಸಮಸ್ಯೆ ಎದುರಾಗಿರುವುದರಿಂದ ಗ್ರಾಮದಲ್ಲಿ ಜಲಮೂಲಗಳು ಬತ್ತಿ ಹೋಗುತ್ತಿವೆ. ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ಜನರು ಸದಸ್ಯರನ್ನು ಕೇಳುತ್ತಾರೆ. ನೀತಿ ಸಂಹಿತೆ ಎದುರಾಗಿರುವ ಕಾರಣ ಯಾವ ನಿರ್ಧಾರವನ್ನೂ ಕೈಗೊಳ್ಳುವಂತಿಲ್ಲ. ಪಿಡಿಒಗಳಿಗೆ ವಿಚಾರಿಸಬೇಕೆಂದರೆ ಅವರನ್ನು ಚುನಾವಣೆಗೆ ನಿಯೋಜಿಸಿದ್ದರಿಂದ ಸಂಪರ್ಕಕ್ಕೆ ಲಭಿಸುವುದು ಅಪರೂಪಎಂದು ಸಾರ್ವಜನಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.


ಪ್ರಸಕ್ತ ಸಾರ್ವತ್ರಿಕ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳ ಸುಗಮ ಚುನಾವಣೆಗೆ ಎಲ್ಲ ಕ್ರಮಕೈಗೊಳ್ಳಲಾಗಿದೆ. ಕಂದಾಯ, ಆರ್‌ಡಿಪಿಆರ್ ಸೇರಿದಂತೆ ಬಹುತೇಕ ಇಲಾಖೆಗಳ ಪಾತ್ರ ಪ್ರಮುಖವಿದೆ. ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.
 ನಿತೇಶ ಪಾಟೀಲ , ಜಿಲ್ಲಾಧಿಕಾರಿ



ಚುನಾವಣಾ ಕರ್ತವ್ಯದೊಂದಿಗೆ ಬರಗಾಲ ಪರಿಸ್ಥಿತಿಯನ್ನೂ ಯಶಸ್ವಿಯಾಗಿ ನಿಭಾಯಿಸಲು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಸದ್ಯ ಎದುರಾಗಿರುವ ಬರ ಪರಿಸ್ಥಿತಿಯಲ್ಲಿ ನಿಗದಿತ ಅವಧಿಯೊಳಗೆ ಎಲ್ಲ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು
 ರಾಹುಲ ಶಿಂಧೆ, ಜಿಪಂ ಸಿಇಒ