Belagavi News In Kannada | News Belgaum

ರಾಯಬಾಗದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ- ಕಾಂಗ್ರೆಸನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲವೆಂದ ಸಾಹುಕಾರ್

ಬೆಳಗಾವಿ: ಚಿಕ್ಕೋಡಿಯಲ್ಲಿ ಪ್ರಿಯಂಕಾ, ಬೆಳಗಾವಿಯಿಂದ ಮೃಣಾಲ್ ಗೆಲುವಿಗೆ ಜಿಲ್ಲೆಯ ನಾಯಕರೆಲ್ಲರೂ ಸೇರಿ ಪಣ ತೊಟ್ಟಿದೇವೆ. ಅಲ್ಲದೇ  ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅದಕ್ಕಾಗಿಯೇ ಸಚಿವೆ ಲಕ್ಷ್ಮೀ, ಶಾಸಕರಾದ ಸವದಿ, ರಾಜು ಕಾಗೆ, ಮಹೇಂದ್ರ ತಮ್ಮನ್ನವರ್ ಸೇರಿದಂತೆ ಎಲ್ಲಾ ಮುಖಂಡರು ಸೇರಿದ್ದೇವೆಂದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ರಾಯಬಾಗ ಪಟ್ಟಣದ ಮಹಾವೀರ ಭವನದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರ ಪರ ಹಮ್ಮಿಕೊಂಡಿದ್ದ ರಾಯಬಾಗ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿ, ಕೇಂದ್ರದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದೆ.  ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ. ರಾಯಬಾಗದಲ್ಲಿ ನೀರಾವರಿ ಯೋಜನೆಗಳನ್ನು ಮಾಡಲು ಮತದಾರರು ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಶಾಹು ಮಾಹಾರಾಜ ಏತ ನೀರಾವರಿ ಯೋಜನೆಗೆ ಈಗಾಗಲೇ ಯೋಜನೆ ರೂಪಿಸಿದ್ದೇವೆ.  ನಾವು ಯಾರ ಬಗ್ಗೆ ಆರೋಪ, ಅಥವಾ ಮಾತನಾಡು ಕೆಲಸವನ್ನು ರಾಜಕಾರಣದಲ್ಲಿ ಯಾವತ್ತೂ ಮಾಡಿಲ್ಲ. ಮುಂದೆಯೂ ಮಾಡಲ್ಲ. ನಮ್ಮದೇನಿದ್ದರೂ ಅಭಿವೃದ್ಧಿ ಪರ ರಾಜಕಾರಣಕ್ಕೆ ಹೆಚ್ಚುಆದ್ಯತೆ ನೀಡುತ್ತೇವೆ ಎಂದು ಹೇಳಿದರು.

ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಜಿಲ್ಲೆಯ ಎಲ್ಲಾ ಮುಖಂಡರು ಸೇರಿ ಸರ್ವಾನುಮತದಿಂದ ಪ್ರಿಯಂಕಾ ಜಾರಕಿಹೊಳಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು, ಅವರನ್ನು ಗೆಲ್ಲಿಸಿ, ಲೋಕಸಭೆಗೆ ಕಳುಹಿಸಿದರೆ ಎಲ್ಲರಿಗೂ ಶ್ರೇಯಸ್ಸು ಸಿಗಲಿದೆ ಎಂದ ಅವರು, ರಾಯಬಾಗ ವಿಧಾನಸಭೆ ಕ್ಷೇತ್ರದಲ್ಲಿ ಇನ್ನುವರೆಗೆ ಬೂತ್ ಗಳನ್ನು ರಚನೆ ಮಾಡಿಲ್ಲ. ಕಾರಣ ಬೂತ್ ಗಳನ್ನು ರಚಿಸಿ ಚುನಾವಣೆ ಎದುರಿಸಲು ಸಿದ್ದತೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ರಾಜ್ಯ ಸರ್ಕಾರದ ಯೋಜನೆಗಳನ್ನು ಜನತೆಗೆ ತಿಳಿಸುವ ಕೆಲಸ ಬೂತ್ ಮಟ್ಟದ ಕಾರ್ಯಕರ್ತರು ಮಾಡಬೇಕು. ಪ್ರಿಯಂಕಾ ಜಾರಕಿಹೊಳಿ ಅವರ ಗೆಲುವಿಗೆ ಕಾಗವಾಡ, ಅಥಣಿಯಲ್ಲಿ ಹೆಚ್ಚಿನ ಮತಗಳನ್ನು ನಾವು ನೀಡುತ್ತೇವೆ. ರಾಯಬಾಗ, ಕುಡುಚಿಯಲ್ಲಿ ಮತ ಪಡೆಯಲು ನೀವು ಪ್ರಯತ್ನಿಸಿ, ಚಿಕ್ಕೋಡಿ ಕ್ಷೇತ್ರದಿಂದ ಪ್ರಿಯಂಕಾ ಗೆದ್ದು ಲೋಕಸಭೆಗೆ ಕಳುಹಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬೆರಿಸುವಂತೆ ನೋಡಬೇಕು ಎಂದರು.
ಶಾಸಕ ಮಹೇಂದ್ರ ತಮ್ಮನ್ನವರ್ ಮಾತನಾಡಿ, ಕುಡಚಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಹೆಚ್ಚಿನ ಮತಗಳನ್ನು ನೀಡಲು ನಾನು ಶ್ರಮಿಸುತ್ತೇನೆ. ಬಿಜೆಪಿಯ ಸುಳ್ಳು ಪ್ರಚಾರಕ್ಕೆ ಮರುಳಾಗದೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಮತದಾರರು ಮುಂದಾಗಬೇಕು. ಶಾಸಕ ರಾಜು ಕಾಗೆ, 2014 ರಲ್ಲಿ ಜನ ಬದಲಾವಣೆ ತರಬೇಕೆಂದು ಪ್ರಧಾನಿ ಮೋದಿ ಮಾತಿಗೆ ಮರುಳಾಗಿ ದೇಶದಲ್ಲಿ ಬಿಜೆಪಿಗೆ ಅಧಿಕಾರ ನೀಡಿದರು. ಆದರೆ 10 ವರ್ಷ ಆಡಳಿತ ನಡೆಸಿದ ಕೇಂದ್ರ ಬಿಜೆಪಿ ಸರ್ಕಾರ ರೈತರ, ಬಡವರ, ದೀನ ದಲಿತರಿಗೆ ಯಾವುದೇ ರೀತಿಯ ಸ್ಪಂದನೆ ನೀಡಲಿಲ್ಲ ಎಂದು ಬಿಜೆಪಿ ವಿರುದ್ಧ ಆರೋಪಿಸಿದ ಅವರು,  ಈ ಬಾರಿ ಪ್ರಿಯಂಕಾ ಜಾರಕಿಹೊಳಿ 2 ಲಕ್ಷ ಮತಗಳಿಂದ ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ. ನಿಮ್ಮ ನಿಮ್ಮ ಬೂತ್ ಮಟ್ಟದಲ್ಲಿ ಸರಿಯಾಗಿ ಕೆಲಸ ಮಾಡಿದರೆ ಖಂಡಿತವಾಗಿ ನಮ್ಮ ಅಭ್ಯರ್ಥಿ ಜಯ ಸಾಧಿಸುತ್ತದೆ ಎಂದು ಹೇಳಿದರು.ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಬೆಳಗಾವಿ ಬೂಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ  ಹಾಗೂ  ಮಾಜಿ ಸಚಿವ ಎ.ಬಿ. ಪಾಟೀಲ್ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ನೀಡಿ 136 ಸೀಟು ಗೆಲ್ಲಿಸಿದಿರಿ, ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕೆಂದು  ಮತದಾರರಲ್ಲಿ ಮನವಿ ಮಾಡಿದರು.


ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಮಾತನಾಡಿ, ನನ್ನನ್ನು ಪ್ರೀತಿಯಿಂದ ರಾಯಬಾಗ ಪಟ್ಟಣಕ್ಕೆ ಸ್ವಾಗತಿಸಿದ ಎಲ್ಲರಿಗೂ ಧನ್ಯವಾದಗಳು. ರಾಜ್ಯ ಸರ್ಕಾರ ಸರ್ವರಿಗೂ ಗ್ಯಾರಂಟಿ ಯೋಜಗೆಳನ್ನು ನೀಡಿದ್ದು, ನಿಮ್ಮ ಪ್ರಗತಿಗೆ ಕಾಂಗ್ರೆಸ್ ಪಕ್ಷ ಶ್ರಮಿಸುತ್ತದೆ. ಕಾರಣ ಲೋಕಸಭೆ ಚುನಾವಣೆಯಲ್ಲಿ
ನನಗೆ ಹೆಚ್ಚಿನ ಸಂಖ್ಯೆಯ ಮತಗಳನ್ನು ನೀಡಿ ಆರ್ಶೀವದಿಸಿ ಎಂದು ಮನವಿ ಮಾಡಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ರಾಯಬಾಗ ಪಟ್ಟಣದಲ್ಲಿ ಇಂದು ವಿಜಯೋತ್ಸವದ ವಾತಾವರಣ ನೋಡಿದ್ದೇನೆ. ಕಾರಣ ನಿವೇಲ್ಲ ಸೇರಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದ ಅವರು, ರಾಜ್ಯ ಸರ್ಕಾರವು ನಿಮ್ಮ ಸರ್ವ ರೀತಿಯ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಈಡೇರಿಸುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ ಎಂದರು.
ಬಿಜೆಪಿಯವರಿಗೆ ಬಡವರ, ರೈತರ ಕಾಳಜಿ ಇಲ್ಲಾ. ಅವರಿಗೆ ಏನೇ ಇದ್ದರೂ ಅದಾನಿ, ಅಂಬಾನಿಗಳ ಮೇಲೆ ಅಷ್ಟೇ ಕಾಳಜಿ ಇದೆ. ಅದಕ್ಕಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಪ್ರಿಯಂಕಾಗೆ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.
ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಎರಡು ಮಕ್ಕಳನ್ನು ಸಮಾಜ ಸೇವೆಯಲ್ಲಿ ತೊಡಗಿಸಿದ್ದಾರೆ. ಅವರನ್ನು ರಾಜಕಾರಣದಲ್ಲಿ, ಸಮಾಜ ಸೇವೆಯಲ್ಲಿ ನೋಡಿದ್ದೇನೆ. ಆದರೆ ಇಂದು ತಂದೆಯ ಪಾತ್ರದಲ್ಲಿ ನೋಡಿದ್ದು ನನಗೆ ಬಹಳಷ್ಟು ಖುಷಿಯಾಗಿತು ಎಂದರು.


ಈ ಸಂದರ್ಭದಲ್ಲಿ ಮಾಜಿ ಸಚಿವ ವೀರಕುಮಾರ್ ಪಾಟೀಲ್, ಯುವ ನಾಯಕ ರಾಹುಲ್ ಜಾರಕಿಹೊಳಿ,  ಮಾಜಿ ಶಾಸಕ ಶ್ಯಾಮ್ ಘಾಟಗೆ, ಕಾಂಗ್ರೆಸ್ ಮುಖಂಡರಾದ ಮಹಾವೀರ ಮೋಹಿತೆ, ಅಪ್ತಾರ್ ಮುಲ್ಲಾ,  ನಾಯಕವಾಡಿ, ಸಂಜು ಬಾನೆ, ಶಂಕರಗೌಡ ಪಾಟೀಲ್, ಅಪ್ಪಸಾಬ್ ಪಾಟೀಲ್, ರಾಜುಗೌಡ ಪಾಟೀಲ್ ಸೇರಿದಂತೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ಮಹಿಳೆಯರು ಇದ್ದರು.