Belagavi News In Kannada | News Belgaum

ಆರ್.ಓ ಮತ್ತು ಪಿ.ಆರ್.ಓ ಮಧ್ಯ ಸೆಕ್ಟರ್ ಅಧಿಕಾರಿಗಳು ಸೇತುವೆಯಂತೆ ಕಾರ್ಯನಿರ್ವಹಿಸಬೇಕು: ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ್ ಶಿಂಧೆ

ಚುನಾವಣಾ ಸೆಕ್ಟರ್ ಆಫೀಸರ್ ತರಬೇತಿ

ಚಿಕ್ಕೋಡಿ, ಏ.5: ಚುನಾವಣಾ ಕಾರ್ಯಗಳು ನಿಯಮಾನುಸಾರ ನಡೆಯುವಲ್ಲಿ ಸೆಕ್ಟರ್ ಅಧಿಕಾರಿಗಳ ಪಾತ್ರ ಬಹು ಮುಖ್ಯವಾಗಿದೆ. ಅವರು ಚುನಾವಣಾಧಿಕಾರಿಗೂ (ಆರ್.ಓ) ಮತ್ತು ಮತಗಟ್ಟೆಯಲ್ಲಿನ ಪಿ.ಆರ್.ಓ ಅಧಿಕಾರಿಗೂ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ಜಿ.ಪಂ. ಸಿ.ಇ.ಓ. ಹಾಗೂ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿಯು ಆದ ರಾಹುಲ ಶಿಂಧೆ ಅವರು ಹೇಳಿದರು.
ಅವರು ಶುಕ್ರವಾರ (ಎ.5) ರಂದು ಚಿಕ್ಕೋಡಿಯ ಸಿ.ಬಿ.ಕೋರೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಲೋಕಸಭಾ ಚುನಾವಣೆ-2024ರ ಸೆಕ್ಟರ್ ಅಧಿಕಾರಿಗಳಿಗೆ, ತಾಲೂಕ ಮಟ್ಟದ ಚುನಾವಣಾ ಸಂಪನ್ಮೂಲ ವ್ಯಕ್ತಿಗಳಿಗೆ ಮತ್ತು ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಗಳ ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚುನಾವಣೆಯಲ್ಲಿ ತಮ್ಮ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಚುನಾವಣೆಯನ್ನು ಯಶಸ್ವಿಗೊಳಿಸಬೇಕು. ಭಾರತ ಚುನಾವಣಾ ಆಯೋಗದ ಅಧೀನದಲ್ಲಿ ನಾವೆಲ್ಲ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ತರಬೇತಿಯಲ್ಲಿ ನೀಡುವ ಮಾಹಿತಿಯನ್ನು ಸರಿಯಾಗಿ ತಿಳಿದು, ತಮ್ಮ ಕರ್ತವ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವಂತೆ ತಿಳಿಸಿದರು.
ಪ್ರತಿ ಮತಗಟ್ಟೆಯ ಪಿ.ಆರ್.ಓ ಮತ್ತು ಎಪಿ.ಆರ್.ಓ.ಗಳು ಮತಗಟ್ಟೆಯಲ್ಲಿ ತಾವು ನಿರ್ವಹಿಸಬೇಕಾದ ಪ್ರತಿ ಕರ್ತವ್ಯದ ಬಗ್ಗೆ ಅರಿವು ಹೊಂದಿರಬೇಕು. ಅವರಿಗೆ ಅಗತ್ಯವಿರುವ ಮಾಹಿತಿ, ತರಬೇತಿಯನ್ನು ಸೆಕ್ಟರ್ ಅಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು ನೀಡಬೇಕೆಂದು ಅವರು ಹೇಳಿದರು.
ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಪ್ರತಿ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾರತ ಚುನಾವಣಾ ಆಯೋಗ ನೀಡಿರುವ ನೀರ್ದೇಶನಗಳಂತೆ ತಮ್ಮ ಕರ್ತವ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ಸೆಕ್ಟೆರ ಅಧಿಕಾರಿಗಳ ಪಾತ್ರ ಪ್ರಮುಖವಾಗಿದ್ದು ಯಾವುದೇ ಕಾರಣಕ್ಕೂ ಚುನಾವಣಾ ಕಾರ್ಯಗಳ ಕುರಿತು ಉದಾಸೀನ ತೋರದಂತೆ ತಿಳಿಸಿದರು. ಇಂದಿನ ತರಬೇತಿ ಕಾರ್ಯಾಗಾರದಲ್ಲಿ ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡು ಕರ್ತವ್ಯದಲ್ಲಿ ಯಾವುದೇ ಲೋಪಗಳಿಗೆ ಆಸ್ಪದ ನೀಡದಂತೆ ಕಾರ್ಯನಿರ್ವಹಿಸಲು ಸೂಚನೆ ನೀಡಿದರು.
ಎಲ್.ಎ.ಸಿ ಜಂಟಿ ನಿರ್ದೇಶಕ ಶಂಕರಾನಂದ ಬನಶಂಕರಿ ಹಾಗೂ ಸಿ.ಬಿ.ಕೋರೆ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಧ್ಯಾಪಕರಾದ ಎನ್.ವಿ.ಶಿವರಾಮ ಅವರುಗಳು ಸೆಕ್ಟರ್ ಅಧಿಕಾರಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು.
ಕಾರ್ಯಾಗಾರದಲ್ಲಿ ತರಬೇತಿ ನೋಡೆಲ್ ಅಧಿಕಾರಿಯಾದ ಶ್ರೀಮತಿ ಗೀತಾ ಕೌಲಗಿ, ಸಹಾಯಕ ಚುನಾವಣಾಧಿಕಾರಿ ಬಸವರಾಜ ಅಡವಿಮಠ, ಚಿಕ್ಕೋಡಿ ಉಪವಿಭಾಗಾಧಿಕಾರಿ ಶ್ರೀಮತಿ ಮೆಹಬೂಬಿ, ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರರು, ಸೆಕ್ಟೆರ ಅಧಿಕಾರಿಗಳು ಹಾಜರಿದ್ದರು.