Belagavi News In Kannada | News Belgaum

ಆನಗೋಳ, ವಡಗಾವಿ ಪ್ರದೇಶದಲ್ಲಿ ಮೃಣಾಲ ಹೆಬ್ಬಾಳಕರ್ ಮತಯಾಚನೆ: ಜನರಿಂದ ಭಾರೀ ಬೆಂಬಲ

ಬೆಳಗಾವಿ: ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಅನಗೋಳ ಹಾಗೂ ವಡಗಾಂವಿಯ ವಿವಿಧ ಸ್ಥಳಗಳಲ್ಲಿ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಗುರುವಾರ ಸಂಜೆ ಚುನಾವಣೆಯ ಪ್ರಚಾರ ನಡೆಸಿ, ಮತ ಯಾಚಿಸಿದರು.
ಭಾರೀ ಸಂಖ್ಯೆಯಲ್ಲಿ ಮನೆಯಿಂದ ಹೊರಗೆ ಬಂದ ಜನರು ಬೆಂಬಲ ಸೂಚಿಸಿ, ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ ಎಂದು ಭರವಸೆ ನೀಡಿದರು. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಂದಾಗಿ ನಾವು ಎರಡು ಹೊತ್ತು ಚೆನ್ನಾಗಿ ಊಟ ಮಾಡುತ್ತಿದ್ದೇವೆ, ನಮಗೆ ನೆಮ್ಮದಿ ಸಿಕ್ಕಿದೆ. ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣಿಸಿ, ಮಾರ್ಕೆಟ್ ಮಾಡುತ್ತಿದ್ದೇವೆ, ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದೇವೆ. ಗೃಹಲಕ್ಷ್ಮೀ, ಶಕ್ತಿ ಮತ್ತು ಅನ್ನಭಾಗ್ಯ ಯೋಜನೆಯಿಂದ ನಮ್ಮ ಮನೆ ನಡೆಯುತ್ತಿದೆ. ನೇಕಾರರಿಗೆ ಕಾಂಗ್ರೆಸ್ ಮಾಡಿದಷ್ಟು ಸಹಕಾರವನ್ನು ಯಾರೂ ಮಾಡಿಲ್ಲ. ಹಾಗಾಗಿ ಖಂಡಿತವಾಗಿಯೂ ನಾವು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದರು.
ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಕನಸುಗಳನ್ನು ಹೊತ್ತು ಚುನಾವಣೆಗೆ ನಿಂತಿದ್ದೇನೆ. ನಿಮ್ಮ ಆಶಿರ್ವಾದವಿರಲಿ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಮೃಣಾಲ ಹೆಬ್ಬಾಳಕರ್ ಭರವಸೆ ನೀಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಯುವರಾಜ ಕದಂ ಸೇರಿದಂತೆ ಹಲವಾರು ಸ್ಥಳೀಯ ಮುಖಂಡರು, ಕಾರ್ಯಕರ್ತರು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉಪಸ್ಥಿತರಿದ್ದರು.
ಇದೇ ವೇಳೆ ಬೆಳಗಾವಿ ನೇಕಾರರ ಸಂಘದ ಮುಖಂಡ ಪಿ.ಡಿ.ದೋತ್ರೆಯವರ ಮನೆಗೆ ಮೃಣಾಲ ಹೆಬ್ಬಾಳಕರ್ ಸೌಜನ್ಯಯುತ ಭೇಟಿ ನೀಡಿದರು.