Belagavi News In Kannada | News Belgaum

ರಾಷ್ಟ್ರದ ಪ್ರಧಾನಿಯಾಗಿ ಮತ್ತೊಮ್ಮೆ ಆಡಳಿತ ನಡೆಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್

ಮೂಡಲಗಿ : ವಿಶ್ವನಾಯಕನಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿ ಆಡಳಿತದಿಂದ ಭಾರತವು ಪ್ರಪಂಚದಲ್ಲಿಯೇ ಬಲಾಢ್ಯ ರಾಷ್ಟ್ರವಾಗುತ್ತಿದ್ದು, ಕ್ಷಿಪ್ರಗತಿಯಲ್ಲಿ ಸಾಗುತ್ತಿರುವ ಭಾರತ ದೇಶದ ಜನಪ್ರೀಯತೆಯನ್ನು ಕುಗ್ಗಿಸಲು ಕೆಲ ವಿರೋಧಿ ರಾಷ್ಟ್ರಗಳು ಕುತಂತ್ರ ನಡೆಸುತ್ತಿದ್ದು, ನರೇಂದ್ರ ಮೋದಿಯವರನ್ನು ಸೋಲಿಸಲು ಚೀನಾ ಸೇರಿದಂತೆ ಕೆಲ ವಿರೋಧಿ ರಾಷ್ಟ್ರಗಳು ಪಿತೂರಿ ನಡೆಸುತ್ತಿವೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಜಗದೀಶ ಶೆಟ್ಟರ್ ಆರೋಪಿಸಿದರು.

ತಾಲೂಕಿನ ನಾಗನೂರ ಪಟ್ಟಣದಲ್ಲಿ ಅರಭಾವಿ ವಿಧಾನಸಭಾ ಮತಕ್ಷೇತ್ರದ ಬೂತ್‍ಮಟ್ಟದ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು. ನಮ್ಮ ನೆರೆ-ಹೊರೆಯ ಶತ್ರು ರಾಷ್ಟ್ರಗಳು ಮೋದಿಯವರ ವಿರುದ್ಧ ಎಷ್ಟೇ ತಂತ್ರ, ಪಿತೂರಿ ನಡೆಸಿದರೂ ಸತತ 3ನೇ ಬಾರಿಗೆ ಈ ರಾಷ್ಟ್ರದ ಪ್ರಧಾನಿಯಾಗಿ ಮತ್ತೊಮ್ಮೆ ಆಡಳಿತ ನಡೆಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾರತವು ಆರ್ಥಿಕ ಪ್ರಗತಿಯಲ್ಲಿ 4ನೇ ಸ್ಥಾನವನ್ನು ಅಲಂಕರಿಸಿದ್ದು, ಮುಂದಿನ ಕೆಲವೇ ವರ್ಷಗಳಲ್ಲಿ ಆರ್ಥಿಕ ಪ್ರಗತಿಯಲ್ಲಿ ನಂ 1 ಸ್ಥಾನ ಗಳಿಸಲಿದೆ. ಪ್ರಧಾನಿಯವರ ಜನಪ್ರಿಯತೆಯನ್ನು ಕುಗ್ಗಿಸಲು ವಿರೋಧಿ ದೇಶಗಳು ಇನ್ನಿಲ್ಲದ ಕಸರತ್ತು ಮಾಡುತ್ತಿವೆ. ಆದರೆ ನಮ್ಮ ದೇಶದ ಜನ ಪ್ರಜ್ಞಾವಂತರಾಗಿದ್ದು, ಇಡೀ ದೇಶವೇ ಮೋದಿಯವರ ಬೆನ್ನಿಗಿದೆ. ಹೀಗಾಗಿ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಒಟ್ಟಾರೆ 400ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಲಿವೆ ಎಂದು ಹೇಳಿದರು.

ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಜಗದೀಶ ಶೆಟ್ಟರ್ ಅವರು ಸರಳ-ಸಜ್ಜನಿಕೆಯ ರಾಜಕಾರಣಿಯಾಗಿದ್ದು, ಅಭಿವೃದ್ದಿ ಮಾಡುವ ಸಂಕಲ್ಪವನ್ನು ಹೊಂದಿದ್ದಾರೆ. ಶೆಟ್ಟರ್ ನಮ್ಮವರು. ಅವರ ಬೆಳಗಾವಿ ಬೀಗರು. ಕೆಲವರು ಇವರ ವಿಳಾಸವನ್ನು ಕೇಳುತ್ತಿದ್ದಾರೆ. ಬೀಗರಾಗಿರುವ ಅಂಗಡಿಯವರ ಮನೆಯೇ ಇವರ ವಿಳಾಸವಾಗಿದೆ. ಶೆಟ್ಟರ್ ಅವರು ಹೊರಗಿನವರು. ಬೆಳಗಾವಿಯಲ್ಲಿ ಏಕೆ ಸ್ಪರ್ಧೆ ಮಾಡುತ್ತಿದ್ದಾರೆಂದು ಪ್ರಶ್ನಿಸುತ್ತಿದ್ದಾರೆ. ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿಯವರು ಕೇರಳದಲ್ಲಿ ಸ್ಪರ್ಧೆ ಮಾಡುತ್ತಿಲ್ಲವೇ? ಎಂದು ಪ್ರಶ್ನಿಸಿದ ಅವರು, ಕಾಂಗ್ರೇಸ್‍ನ ಸುಳ್ಳು ಅಪಪ್ರಚಾರಗಳಿಗೆ ಕಿವಿಗೊಡಬೇಡಿ ಎಂದು ಮತದಾರರಿಗೆ ಮನವರಿಕೆ ಮಾಡಿದರು.

ಶೆಟ್ಟರ್ ಅವರನ್ನು ವಿರೋಧಿಗಳು ಟೀಕಿಸಿದರೇ ತಕ್ಷಣವೇ ಅಂತವರಿಗೆ ಪ್ರತ್ಯುತ್ತರ ನೀಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದ ಅವರು ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅರಭಾವಿಯಿಂದ 55ಸಾವಿರ ಮತ್ತು ಗೋಕಾಕದಿಂದ 58ಸಾವಿರ ಮತಗಳ ಮುನ್ನಡೆ ನೀಡಲಾಗಿದ್ದು, ಮೇ-7ರಂದು ಜರುಗುವ ಚುನಾವಣೆಯಲ್ಲಿ ಇವುಗಳನ್ನೇ ದ್ವೀಗುಣ ಮತಗಳ ಲೀಡ್ ನೀಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತದಾರರಲ್ಲಿ ಕೋರಿಕೊಂಡರು.

ಈ ಸಂದರ್ಭದಲ್ಲಿ ಸಂಸದೆ ಮಂಗಲ ಅಂಗಡಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ, ಹಿರಿಯ ಸಹಕಾರಿಗಳಾದ ಬಿ.ಆರ್.ಪಾಟೀಲ(ನಾಗನೂರ), ಬಸಗೌಡ ಪಾಟೀಲ, ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಶ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ನ್ಯಾಯವಾದಿ ಎಮ್.ಬಿ.ಜಿರಲಿ, ಲಕ್ಷ್ಮಣ ತಪಸಿ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಫೋಟೋ 08 ಎಮ್‍ಡಿಎಲ್‍ಜಿ-1 & 2
ಮೂಡಲಗಿ: ತಾಲೂಕಿನ ನಾಗನೂರ ಪಟ್ಟಣದ ಹೊರವಲಯದಲ್ಲಿರುವ ಮಹಾಲಿಂಗೇಶ್ವರ ಬಸವತೀರ್ಥ ಮಠದ ಆವರಣದಲ್ಲಿ ಜರುಗಿದ ಅರಭಾವಿ ವಿಧಾನಸಭಾ ಮತಕ್ಷೇತ್ರದ ಬೂತ್‍ಮಟ್ಟದ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಬೆಳಗಾವಿ ಲೋಕಸಭಾ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರು ಮಾತನಾಡುತ್ತಿರುವುದು.