Belagavi News In Kannada | News Belgaum

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಹಿರಿಯ ಪತ್ರಕರ್ತ

ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಹಿರಿಯ ಪತ್ರಕರ್ತ ದೀಪಕ್ ತಿಮ್ಮಯ್ಯ ಅವರನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಅವರು ಪಕ್ಷವನ್ನು ಯಾಕೆ ಸೇರಿದರು ಎಂಬ ಬಗ್ಗೆ ಡಿಕೆಶಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಗುರುವಾರ ದೀಪಕ್ ತಿ ಮ್ಮಯ್ಯಅವರಿಗೆ ಕಾಂಗ್ರೆಸ್ ಪಕ್ಷದ ಶಾಲು ಹೊದೆಸಿ, ಹೂಗುಚ್ಛ ನೀಡಿ ಪಕ್ಷಕ್ಕೆ ಬರಮಾಡಿಕೊಂಡ ಶಿವಕುಮಾರ್ ನಂತರ ಮಾಧ್ಯಮಗಳ ಜತೆ ಮಾತನಾಡಿ, ಹಿರಿಯ ಪತ್ರಕರ್ತರಾದ ದೀಪಕ್ ತಿಮ್ಮಯ್ಯ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಹಾಗೂ ಸಂವಹನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದ್ದು, ಅವರಿಗೆ ಕಾಂಗ್ರೆಸ್ ಕಚೇರಿಯಲ್ಲಿ ಕಚೇರಿ ನೀಡಲಾಗುವುದು. ಪಕ್ಷದ ವಿಚಾರವಾಗಿ ಯಾರೇ ನನ್ನನ್ನು ಸಂಪರ್ಕ ಮಾಡಲು ಅವರು ಸಹಕಾರ ನೀಡಲಿದ್ದಾರೆ ಎಂದು ಹೇಳಿದರು.
ಮಾಧ್ಯಮ ಕ್ಷೇತ್ರದಲ್ಲಿ ಸುಮಾರು 30-40 ವರ್ಷಗಳ ಅನುಭವವಿರುವ ದೀಪಕ್ ತಿಮ್ಮಯ್ಯ ಅವರು ತಮ್ಮದೇ ಆದ ಸಂಸ್ಥೆ ಮೂಲಕ ಮಕ್ಕಳನ್ನು ನಾಯಕರನ್ನಾಗಿ ರೂಪಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ನಾಯಕರನ್ನು ಸೃಷ್ಟಿಸುವವನು ನಾಯಕನೇ ಹೊರತು ಹಿಂಬಾಲಕರನ್ನು ಸೃಷ್ಟಿಸುವವನು ಅಲ್ಲ ಎಂಬಂತೆ ಕೆಲಸ ಮಾಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ, ವಿಚಾರವಾಗಿ ಅವರು ನನಗೆ ಅನೇಕ ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಹೀಗಾಗಿ ಅವರಿಗೆ ಕಾಂಗ್ರೆಸ್ ಪಕ್ಷದ ಭಾಗವಾಗುವಂತೆ ಮನವಿ ಮಾಡಿದ್ದೆ. ಅದನ್ನು ಒಪ್ಪಿ ಅವರು ಇಂದು ಪಕ್ಷಕ್ಕೆ ಸೇರ್ಪಡೆ ಆಗಿದ್ದು, ಈ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.
ಜನರು ದಡ್ಡರಲ್ಲ, ತಮ್ಮ ಬದುಕು ಯಾರು ಕಟ್ಟಿಕೊಡುತ್ತಾರೋ ಅವರಿಗೆ ಬೆಂಬಲ ನೀಡುತ್ತಾರೆ. ಕಾಂಗ್ರೆಸ್ ಪಕ್ಷ ಜನರ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತಿದ್ದು, ಒಕ್ಕಲಿಗರೂ ಸೇರಿದಂತೆ ಎಲ್ಲ ವರ್ಗದ ಜನ ಕಾಂಗ್ರೆಸ್‌ಗೆ ಬೆಂಬಲ ನೀಡಲಿದ್ದಾರೆ. ಇನ್ನು ಆದಿ ಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ  ಹೆಸರನ್ನು ನಾನು ರಾಜಕೀಯಕ್ಕೆ ಎಳೆದು ತರುತ್ತಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್  ಸ್ಪಷ್ಟನೆ ನೀಡಿದರು.//////