Belagavi News In Kannada | News Belgaum

ಪಕ್ಷೇತರ ಅಭ್ಯರ್ಥಿಯಾಗಿ ದಿಂಗಾಲೇಶ್ವರ ಶ್ರೀ ಸ್ಪರ್ಧೆ ಖಚಿತ

ಧಾರವಾಡ: ರಾಜ್ಯದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳ ಪೈಕಿ ಹೆಚ್ಚು ಸುದ್ದಿಯಾಗುತ್ತಿರುವುದು ಧಾರವಾಡ ಲೋಕಸಭಾ ಕ್ಷೇತ್ರ. ಧಾರವಾಡದಿಂದ ಪಕ್ಷೇತರ ಅಭ್ಯರ್ಥಿಯಾಗಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಈಗಾಗಲೇ ಕಾಂಗ್ರೆಸ್, ಬಿಜೆಪ ಅಭ್ಯರ್ಥಿ ಘೋಷಿಸಿವೆ. ಬಿಜೆಪಿ ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ವಿನಯ್ ಅಸೂಟಿ ಅವರನ್ನು ಕಣಕ್ಕಿಳಿಸಿದೆ. ಹೀಗಾಗಿ ಎರಡು ಪಕ್ಷಗಳ ಮಧ್ಯೆಯಿದ್ದ ಸ್ಪರ್ಧೆ ದಿಂಗಾಲೇಶ್ವರ ಶ್ರೀ ಪ್ರವೇಶದಿಂದಾಗಿ ತ್ರಿಕೋನ ಸ್ಪರ್ಧೆಯಾಗಿ ಮಾರ್ಪಟ್ಟಿದೆ.
ಧಾರವಾಡ ಲೋಕಸಭಾ ಕ್ಷೇತ್ರದಿಂದ ದಿಂಗಾಲೇಶ್ವರ ಶ್ರೀ ಸ್ಪರ್ಧೆಯಿಂದ ಯಾರಿಗೆ ಲಾಭ..? ಯಾರಿಗೆ ನಷ್ಟ..? ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಯಿಂದ ಲಿಂಗಾಯತ ಮತ ಬ್ಯಾಂಕ್‌ ಒಡೆದು, ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಸಂಕಷ್ಟಕ್ಕೆ ಒಳಗಾಗುತ್ತಾರೆ ಎನ್ನಲಾಗಿತ್ತು. ಆದರೆ, ಈಗ ಅದು ಉಲ್ಟಾ ಆಗುತ್ತಿದ್ದು, ಕಾಂಗ್ರೆಸ್‌ ಪಕ್ಷವನ್ನೇ ಆತಂಕಕ್ಕೆ ನೂಕುವಂತಿದೆ.
ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆ ಬಗ್ಗೆ ಪ್ರಹ್ಲಾದ್ ಜೋಶಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಈ ವಿಷಯಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಅವರೇ ಹೇಳಿದ್ದಾರೆ. ಜೊತೆಗೆ ಗಂಭೀರವಾಗಿ ಪರಿಗಣಿಸಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ, ಹೊಸ ಅಪ್‌ಡೇಟ್‌ನಲ್ಲಿ ದಿಂಗಾಳೇಶ್ವರ ಸ್ವಾಮೀಜಿ ಸ್ಪರ್ಧೆಯಿಂದ ಕಾಂಗ್ರೆಸ್ ವೋಟ್ ಬ್ಯಾಂಕ್‌ಗೆ ಹೊಡೆತ ಬೀಳಲಿದೆ.
ಸೌಹಾರ್ದತೆಯ ಪ್ರತೀಕವಾಗಿರುವ ಶಿರಹಟ್ಟಿಯ ಖ್ಯಾತ ಫಕೀರೇಶ್ವರ ಮಠಕ್ಕೆ ಅತಿ ಹೆಚ್ಚು ಭಕ್ತರಿರುವುದು ತಳಸಮುದಾಯದವರು. ಕಾಂಗ್ರೆಸ್‌ಗೂ ಹೆಚ್ಚಾಗಿ ಮತ ಹಾಕುವುದು ಇದೇ ಸಮುದಾಯದವರು. ಇವರ ಜೊತೆಗೆ ನದಾಫ್ ಸಮುದಾಯ ಅಂದರೆ ಪಿಂಜಾರರ ಮತಗಳನ್ನು ದಿಂಗಾಲೇಶ್ವರ ಸ್ವಾಮೀಜಿ ಸೆಳೆಯಲಿದ್ದಾರೆ. ಜಂಗಮ ಲಿಂಗಾಯತ ಮತಗಳು ಸಹ ದಿಂಗಾಲೇಶ್ವರ ಶ್ರೀಗಳ ಪಾಲಾಗಬಹುದು.
ಇನ್ನು, ಧಾರವಾಡದಲ್ಲಿ ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡಬೇಕೆಂಬ ಬೇಡಿಕೆಗೆ ಬಿಜೆಪಿ ಸ್ಪಂದಿಸಿಲ್ಲ ಎಂದು ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಗೆ ನಿರ್ಧರಿಸಿದ್ದಾರೆ. ಹೀಗಾಗಿ ಅವರನ್ನೇ ಕಾಂಗ್ರೆಸ್‌ ತನ್ನ ಅಭ್ಯರ್ಥಿಯಾನ್ನಾಗಿಸಿದರೇ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬುದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಭಿಪ್ರಾಯ. ಆದರೆ, ಇದಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿಲ್ಲ.
ಕಾಂಗ್ರೆಸ್‌ ನಾಯಕರ ಸಂಪರ್ಕದಲ್ಲಿ ದಿಂಗಾಲೇಶ್ವರ ಸ್ವಾಮೀಜಿಗಳು ಇದ್ದಾರೆ ಎನ್ನುವ ಚರ್ಚೆ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿದೆ. ಡಿ ಕೆ ಶಿವಕುಮಾರ್‌ ಕೂಡ ಇದಕ್ಕೆ ಒಂದು ರೀತಿಯಲ್ಲಿ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಸಾಮಾಜಿಕ ನ್ಯಾಯ ಮತ್ತು ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ ಹಿಂದುಳಿದ ವರ್ಗದ (ಕುರುಬ) ವಿನೋದ್‌ ಅಸೂಟಿಗೆ ಧಾರವಾಡದಲ್ಲಿ ಟಿಕೆಟ್‌ ನೀಡಲಾಗಿದೆ. ಅದನ್ನು ಬದಲಾಯಿಸುವುದು ಸಾಧ್ಯವಿಲ್ಲ ಎಂಬುದು ಸಿದ್ದರಾಮಯ್ಯ ಅವರ ಅಭಿಪ್ರಾಯ. ಹೀಗಾಗಿ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಯಾರಿಗೆ ಲಾಭ, ನಷ್ಟ ಎಂಬುದು ಕೆಲವೇ ದಿನಗಳಲ್ಲಿ ಸ್ಪಷ್ಟವಾಗಲಿದೆ.//////