Belagavi News In Kannada | News Belgaum

ದ್ವಾರಕೀಶ್ ಅಗಲಿಕೆ ಕನ್ನಡ ಚಿತ್ರರಂಗ ಹಾಗೂ ಕರುನಾಡಿಗೆ ತುಂಬಲಾರದ ನಷ್ಟ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಂಬನಿ

ಬೆಳಗಾವಿ:  ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ  ದ್ವಾರಕೀಶ್ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತೀವ್ರ ಸಂತಾಪ ಸೂಚಿಸಿದ್ದಾರೆ.

ನಟ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ದ್ವಾರಕೀಶ್ ಅವರು ನೀಡಿರುವ ಕೊಡುಗೆ ಅಪಾರ. ಓರ್ವ ಮಹಾನ್ ನಟ, ಉತ್ತಮ ನಿರ್ದೇಶಕನನ್ನು ಕಳೆದೊಂಡಿದ್ದೇವೆ.  ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ, ಕರುನಾಡಿಗೆ ತುಂಬಲಾರದ ನಷ್ಟ ಎಂದು ಹೆಬ್ಬಾಳಕರ್ ಹೇಳಿದ್ದಾರೆ.

ಇಡೀ ಕನ್ನಡ ಚಿತ್ರರಂಗಕ್ಕೆ ದ್ವಾರಕೀಶ್  ಹೊಸ ಚೈತನ್ಯವನ್ನು ತುಂಬಿದ್ದರು. ಸೋಲು- ಗೆಲುವು ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಬದುಕಿನ ಏರಿಳಿತಗಳ ನಡುವೆಯೂ ಒಬ್ಬ ಪ್ರಜ್ಞಾವಂತ ಹಾಸ್ಯ ಕಲಾವಿದನಾಗಿ ಜನರನ್ನು ನಗಿಸುವ, ರಂಜಿಸುವ ಕೆಲಸ ಮಾಡಿದ್ದರು. ದ್ವಾರಕೀಶ್ ಅವರ ಅಗಲಿಕೆ ತೀವ್ರ ದು:ಖವನ್ನುಂಟುಮಾಡಿದೆ ಎಂದು ಕಂಬನಿ ಮಿಡಿದಿದ್ದಾರೆ.

ಹಿರಿಯ ಚೇತನರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ದು:ಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಸಚಿವರು ಪ್ರಾರ್ಥಿಸಿದ್ದಾರೆ.