Belagavi News In Kannada | News Belgaum

ದೇಶದ ಬೆಳವಣಿಗೆಯಲ್ಲಿ ಜ್ಞಾನ, ಕೌಶಲ್ಯ ಪ್ರಮುಖ ಪಾತ್ರ-ಮಲ್ಲಾಡದ • ಗ್ರಂಥಾಲಯ-ಮಾಹಿತಿ ಕೇಂದ್ರಗಳಿಗೆ ಕಂಪ್ಯೂಟರ್ ವಿತರಣೆ

 

ಹುಕ್ಕೇರಿ : ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬ ಯುವಕ-ಯುವತಿಯರು ಕೌಶಲ್ಯಭರಿತ ಉದ್ಯೋಗಿಗಳಾಗುವುದು ಬಹಳ ಪ್ರಮುಖವಿದ್ದು ದೇಶದ ಬೆಳವಣಿಗೆಗೆ ಜ್ಞಾನ, ಕೌಶಲ್ಯ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್.ಮಲ್ಲಾಡದ ಅಭಿಪ್ರಾಯಪಟ್ಟರು.
ತಾಪಂ ಕಚೇರಿಯಲ್ಲಿ ಮಂಗಳವಾರ ತಾಲೂಕಿನ ಆಯ್ದ ಗ್ರಾಮ ಪಂಚಾಯತಿಗಳ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳಿಗೆ ಕಂಪ್ಯೂಟರ್, ಮೊಬೈಲ್ ವಿತರಿಸಿ ಮಾತನಾಡಿದ ಅವರು, ಈಗಾಗಲೇ ಗ್ರಾಮೀಣ ಗ್ರಂಥಾಲಯಗಳನ್ನು ಪುನಶ್ಚೇತನಗೊಳಿಸಲಾಗಿದ್ದು ಅದರ ಮುಂದುವರಿದ ಭಾಗವಾಗಿ ಈಗ ವಿದ್ಯಾರ್ಥಿಗಳು, ಯುವಕ-ಯುವತಿಯರಿಗೆ ಅನುಕೂಲ ಕಲ್ಪಿಸುವ ದಿಸೆಯಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಬಹುತೇಕ ಉದ್ಯೋಗಾವಕಾಶಗಳು ಕೌಶಲ್ಯ ಆಧಾರಿತವಾಗಿರಲಿವೆ. ಯುವಕರು ಸ್ವ-ಸಾಮಥ್ರ್ಯ ಹೆಚ್ಚಿಸಿಕೊಂಡು ವೃತ್ತಿ ಮಾರ್ಗಗಳನ್ನು ಸಕ್ರೀಯಗೊಳಿಸುವ ಉದ್ದೇಶ ಹೊಂದಲಾಗಿದೆ. ಶಿಕ್ಷಣ ಪೌಂಡೇಶನ್ ಮತ್ತು ಡೇಲ್ ಸಂಸ್ಥೆ ಸಹಯೋಗದಲ್ಲಿ ಗ್ರಾಮ ಡಿಜಿ ವಿಕಸನ ಕೇಂದ್ರ ಮತ್ತು ಶಿಕ್ಷಣ ಯುವ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಡಿ ಗ್ರಂಥಾಲಯಗಳಿಗೆ ಕಂಪ್ಯೂಟರ್ ವಿತರಿಸಲಾಗಿದೆ ಎಂದು ಅವರು ಹೇಳಿದರು.
ಶಿಕ್ಷಣ ಪೌಂಡೇಶನ್ ಜಿಲ್ಲಾ ಸಂಯೋಜಕ ಕಲ್ಮೇಶ ಉಗರಗೋಳ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಆಧುನಿಕ ಮಾಹಿತಿ ತಂತ್ರಜ್ಞಾನದ ಅರಿವು ಮೂಡಿಸಲಾಗುತ್ತಿದೆ. ಇಲ್ಲಿ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನ ಲಭ್ಯವಿದ್ದು ವ್ಯವಹಾರಿಕ ಜ್ಞಾನ, ಸಂವಹನ ಕೌಶಲ್ಯ ವೃದ್ಧಿಸಿಕೊಳ್ಳಲಿದೆ. ಈಗಾಗಲೇ ಹುಕ್ಕೇರಿ ತಾಲೂಕಿನ ಕೇಸ್ತಿ, ಗೋಟೂರ, ಹೆಬ್ಬಾಳ, ಇಸ್ಲಾಂಪುರ, ಕೋಣನಕೇರಿ, ನಿಡಸೋಸಿ, ಯಮಕನಮರಡಿ ಗ್ರಾಪಂಗಳಿಗೆ ಕಂಪ್ಯೂಟರ್ ಕೊಡಲಾಗಿದ್ದು ಇದೀಗ ಬೆಲ್ಲದ ಬಾಗೇವಾಡಿ, ಉಳ್ಳಾಗಡ್ಡಿ ಖಾನಾಪುರ ಗ್ರಾಪಂಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
ವ್ಯವಸ್ಥಾಪಕ ಅವಿನಾಶ ಹೊಳೆಪ್ಪಗೋಳ, ಸಹಾಯಕ ನಿರ್ದೇಶಕರಾದ ರಾಜು ಢಾಂಗೆ, ಪಿ.ಲಕ್ಷ್ಮೀನಾರಾಯಣ, ಯೋಜನಾಧಿಕಾರಿ ಪ್ರಶಾಂತ ಮುನ್ನೋಳಿ, ಅರ್ಷದ ನೇರ್ಲಿ, ಮಹಾಂತೇಶ ಬಾದವಾನಮಠ, ಚಿದಾನಂದ ಮಡ್ಡೆ, ಗ್ರಂಥ ಪಾಲಕರಾದ ಶಂಕರಯ್ಯ ಮಠಪತಿ, ಚಂದ್ರಶೇಖರ ಗಡಕರಿ ಮತ್ತಿತರರು ಉಪಸ್ಥಿತರಿದ್ದರು.