Belagavi News In Kannada | News Belgaum

ಲೋಕಸಭಾ ಕ್ಷೇತ್ರದ ಬಿಜೆಪಿ ಬೆಳಗಾವಿ ಲೋಕಸಭಾ ಅಭ್ಯರ್ಥಿ ಶೆಟ್ಟರ್ ನಾಮಪತ್ರ ಸಲ್ಲಿಕೆ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು, ಬೃಹತ್ ಮೆರವಣಿಗೆ ಮೂಲಕ ಬುಧವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಇಲ್ಲಿನ ಸಮಾದೇವಿ ಗಲ್ಲಿಯಿಂದ ಆರಂಭಗೊಂಡ ರೋಡ್ ಶೋ ಖಡೇಬಜಾರ್, ಶನಿವಾರ ಖೂಟ್, ಕಾಕತಿವೇಸ್ ರಸ್ತೆ, ರಾಣಿ ಚನ್ನಮ್ಮನ ವೃತ್ತದ ಮಾರ್ಗವಾಗಿ ಸಾಗಿ, ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪಿತು. ಜಿಲ್ಲೆಯ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪರವಾಗಿ ಜೈಕಾರಗಳನ್ನು ಕೂಗಿದರು‌. ಜಾನಪದ ಕಲಾತಂಡಗಳ ಪ್ರದರ್ಶನ ಮನಸೆಳೆಯಿತು‌.

ಮೆರವಣಿಗೆಯಲದ್ಲಿ ಅಭಿಮಾನಿಗಳ ಜಯ ಘೊಷ ಮುಗಿಲು ಮುಟ್ಟಿತ್ತು. ವಿವಿಧ ಭಾಗದಿಂದ ಬಂದಿದ್ದ ಸಾವಿರಾರು ಕಾರ್ಯಕರ್ತರು ಮೋದಿ ಮೋದಿ ಎಂಬ ಘೋಷಣೆಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ವಢೋಲ್ ತಾಶ್, ಡೊಳ್ಳು ಕುಣಿತ ವಾದ್ಯಗಳು ಎಲ್ಲರ ಗಮನ ಸೆಳೆಯಿತು.‌ ವಿವಿಧ ಭಾಗದಿಂದ ಬಂದಿದ ಜನರು ವಾದ್ಯಗಳೊಂದಿಗೆ ಕುಣಿದು ಕುಪ್ಪಳಿಸಿದರು.‌ ಕೇಸರಿ ಪೇಟ ಧರಿಸಿದ ಸಾವಿರಾರು ಮಹಿಳೆಯರು ಮೆರವಣಿಗೆಯಲ್ಲಿ ಗಮನ ಸೆಳೆದರು.‌
ನಾಮಪತ್ರ ಸಲ್ಲಿಕೆಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್, ಸಂಸದೆ ಮಂಗಲಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ್, ಬಾಲಚಂದ್ರ ಜಾರಕಿಹೊಳಿ, ದುರ್ಯೋಧನನ ಐಹೊಳೆ, ವಿಧಾನ ಪರಿಷತ್ ಸದಸ್ಯ ಹನಂಮತ್ ನಿರಾಣಿ. ಮಾಜಿ ಶಾಸಕರಾದ ಅನಿಲ ಬೆನಕೆ, ಮಾಜಿ ಸಚಿವ ಮುರಗೇಶ್ ನಿರಾಣಿ, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮೊದಲಾದವರು ಸಾಥ್ ನೀಡಿದರು.