Belagavi News In Kannada | News Belgaum

ಮತದಾನ ಪ್ರತಿಯೊಬ್ಬರ ಹಕ್ಕು: ಭಾಗ್ಯಶ್ರೀ ಜಹಾಗೀರದಾರ ಮತದಾನ ಜಾಗೃತಿಗಾಗಿ ಬೈಕ್ ರ್ಯಾಲಿ

ಖಾನಾಪುರ: ತಾಲೂಕಾ ಸ್ವೀಪ್ ಸಮಿತಿ ಹಾಗೂ ಪಟ್ಟಣ ಪಂಚಾಯತ ಸಹಯೋಗದಲ್ಲಿ ಮತದಾನ ಜಾಗೃತಿಗಾಗಿ ಪಟ್ಟಣ ಹಾಗೂ ಸುತ್ತಲಿನ ವಿವಿಧ ಗ್ರಾಮಗಳಲ್ಲಿ ಬುಧವಾರ ಬೈಕ್ ರ್ಯಾಲಿ ಜರುಗಿತು.

ಇಲ್ಲಿನ ತಾಪಂ ಕಾರ್ಯಾಲಯದ ಆವರಣದಲ್ಲಿ ತಾಲೂಕಾ ಸ್ವೀಪ್ ಸಮಿತಿ ಅಧ್ಯಕ್ಷೆ ಭಾಗ್ಯಶ್ರೀ ಜಹಾಗೀರದಾರ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಮತದಾನ ಪ್ರತಿಯೊಬ್ಬರ ಸಂವಿಧಾನಬದ್ಧ ಹಕ್ಕು. ಶಕ್ತಿಶಾಲಿ ಅಸ್ತ್ರವಾದ ಮತವನ್ನು ರಾಷ್ಟ್ರದ ಹಿತ, ಅಭಿವೃದ್ಧಿ ಹಾಗೂ ಪ್ರಜಾತಂತ್ರದ ಸುಭದ್ರತೆಗೆ ಬಳಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.

ಮುಕ್ತ ಮತ್ತು ನಿರ್ಭೀತವಾಗಿ ಪ್ರತಿಯೊಬ್ಬರು ಮತಚಲಾಯಿಸಲು ತಾಲೂಕಿನ ವ್ಯಾಪ್ತಿಯಲ್ಲಿ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಖಾನಾಪುರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಶೇ.100 ರಷ್ಟು ಮತದಾನವಾಗಲು ಎಲ್ಲರೂ ತಪ್ಪದೇ ಮತಚಲಾಯಿಸಬೇಕು. ತಾವು ಜಾಗೃತರಾಗುವುದರ ಜೊತೆಗೆ ತಮ್ಮ ನೆರೆಹೊರೆಯವರು, ಬಂಧುಗಳನ್ನು ಕೂಡ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಗೊಳಿಸಬೇಕು ಎಂದರು.

ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ವೈ.ಎಮ್. ಮಾವಿನಕಾಯಿ ಮಾತನಾಡಿ, ಸುಶಿಕ್ಷಿತ ಜನರೇ ಹೆಚ್ಚಿನ ಪ್ರಮಾಣದಲ್ಲಿ ಇದ್ದರೂ ಕೂಡ ನಗರಪ್ರದೇಶದಲ್ಲಿ ಎಲ್ಲ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಹೀಗಾಗಿ, ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಅರಿತು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂದು ಹೇಳಿದರು.


ಬೈಕ್ ರ್ಯಾಲಿ ಮೂಲಕ ಜಾಗೃತಿ:
ತಾಪಂ ಕಾರ್ಯಾಲಯದ ಆವರಣದಿಂದ ಆರಂಭವಾದ ಬೈಕ್ ರ್ಯಾಲಿ ಶಿವಸ್ಮಾರಕ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ರುಮೇವಾಡಿ, ಕರಂಬಳ, ಕೌಂದಲ್, ಲಾಲವಾಡಿ, ಕಾರಲಗಾ, ಶಿವೋಲಿ, ಚಾಪಗಾವ, ಜಳಗೆ ಗ್ರಾಮಗಳಲ್ಲಿ ಸಂಚರಿಸಿ ತಾಪಂ ಕಾರ್ಯಾಲಯದ ಆವರಣದಲ್ಲಿ ಮುಕ್ತಾಯವಾಯಿತು.

ಚಾಪಗಾವ ಗ್ರಾಮದ ಶಿವಾಜಿ ಮಹಾರಾಜ ವೃತ್ತದಲ್ಲಿ ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ರಸ್ತೆಯುದ್ದಕ್ಕೂ ಭಿತ್ತಿಪತ್ರಗಳ ಪ್ರದರ್ಶನ, ಘೋಷಣೆಗಳನ್ನು ಕೂಗುವುದು ಹಾಗೂ ವಾಹನದಲ್ಲಿ ಜಿಂಗಲ್ಸ್ ಗಳನ್ನು ಭಿತ್ತರಿಸುವ ಮೂಲಕ ಮತದಾನದ ಜಾಗೃತಿ ಮೂಡಿಸಲಾಯಿತು.

ರ್ಯಾಲಿಯಲ್ಲಿ ತಾಪಂ ಸಹಾಯಕ ನಿರ್ದೇಶಕಿ ರೂಪಾಲಿ ಬಡಕುಂದ್ರಿ, ತಾಪಂ ಸಿಬ್ಬಂದಿ ಅಶ್ಪಾಕ ಚಾಂದನವರ, ಪ್ರಹ್ಲಾದ ಗುಂಡಪೀಕರ, ಪಪಂ ಸಿಬ್ಬಂದಿ ರಾಜೇಶ ಜಾಂಬೋಟಿ, ಪ್ರೇಮಾನಂದ ನಾಯ್ಕ್ ಸೇರಿದಂತೆ ತಾಪಂ, ಪಪಂ, ತಹಶೀಲ್ದಾರ ಕಚೇರಿ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಗಣಕಯಂತ್ರ ನಿರ್ವಾಹಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು