Belagavi News In Kannada | News Belgaum

ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿಗೆ ಜೈನ ಸಮುದಾಯದವರು ಬೆಂಬಲಿಸಿ: ಸಚಿವ ಸತೀಶ್ ಜಾರಕಿಹೊಳಿ

ಕಾಗವಾಡ: ಜೈನ ಸಮುದಾಯದವರು ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಬೆಂಬಲಿಸುವ ಮೂಲಕ ಹೆಚ್ಚಿನ ಮತಗಳನ್ನು ನೀಡಿ ಆಯ್ಕೆಮಾಡಬೇಕೆಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜೈನ ಸಮುದಾಯದ ಮುಖಂಡರ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರ ಪರ ಮತಯಾಚಿಸಿ ಅವರು ಮಾತನಾಡಿ, ಜೈನ ಸಮುದಾಯ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದೆ. ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದರು.

ನಿಮ್ಮ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ. ಆದರೆ ನಮಗೆ ಜೈನ ಸಮುದಾಯದ ರಾಜಕೀಯ ಶಕ್ತಿ ನೀಡಿದರೆ, ನಿಮಗೂ ನಾವು ರಾಜಕೀಯವಾಗಿ ಇನ್ನಷ್ಟು ಹೆಚ್ಚಿನ ಶಕ್ತಿಯನ್ನು ನೀಡುತ್ತೇವೆಂದು ಭರವಸೆ ನೀಡಿದರು.

ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ನಿಮ್ಮ ಸಮುದಾಯವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಚರ್ಚಿಸೋಣ ಎಂದು ತಿಳಿಸಿದರು.

ಮಾಜಿ ಸಚಿವ ವೀರಕುಮಾರ ಪಾಟೀಲ್ ಮಾತನಾಡಿ, ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಪ್ರಿಯಂಕಾ ಜಾರಕಿಹೊಳಿ ಅವರನ್ನು ಆಯ್ಕೆಮಾಡಲು ಜೈನ ಸಮುದಾಯದ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಕರೆ ನೀಡಿದರು.

ಕಾಂಗ್ರೆಸ್ ಮುಖಂಡ ಅಶೋಕ ಮಗದುಮ್ ಮಾತನಾಡಿ, ಬಿ. ಶಂಕರಾನಂದ ಅವರ ನಂತರ ನಮ್ಮ ಸಮುದಾಯದ ಸರ್ವ ರೀತಿಯ ಕೆಲಸ, ಕಾರ್ಯಗಳನ್ನು ಸಚಿವರಾದ ಸತೀಶ್ ಜಾರಕಿಹೊಳಿ ಅವರು ಮಾಡುತ್ತಿದ್ದಾರೆ. ನಮ್ಮ ಸಮುದಾಯದ ಹಲವರಿಗೆ ರಾಜಕೀಯ ಸ್ಥಾನ ಮಾನ ಕಲ್ಪಿಸಿದ್ದಾರೆ. ಅದಕ್ಕಾಗಿಯೇ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸೋಣ, ಈಚೆಗೆ ಸಿಎಂ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ನಲ್ಲಿ ನಮ್ಮ ಸಮುದಾಯಕ್ಕೆ50 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಇನ್ನು ನಮ್ಮ ಸಮಸ್ಯೆಗಳಿಗೆ ಸದಾ ಸ್ಪಂದಿಸುವ, ನಮ್ಮ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಆಯ್ಕೆಗೊಳಿಸೋಣ ಎಂದು ಹೇಳಿದರು.

ಈ ವೇಳೆ ಜೈನ ಸಮುದಾಯದ ಮುಖಂಡರು ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಚುನಾವಣೆ ಮುಗಿದ ಬಳಿಕ ಸಮುದಾಯದ ಒಬ್ಬರನ್ನು ಎಂಎಲ್ ಸಿ ಮಾಡಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಜೈನ ಸಮುದಾಯದಿಂದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ಯಾಮ್ ಘಾಟಗೆ, ಮೋಹನ್ ಶಾ, ಅಮರೆಗೌಡ ಬಯ್ಯಾಪುರ್, ಕಾಂಗ್ರೆಸ್ ಮುಖಂಡರಾದ ಅಭಿನಂದನ ಪಾಟೀಲ್,  ಸುರೇಶ್ ಚೌಗಲೆ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.//////