Belagavi News In Kannada | News Belgaum

ಸಚಿವೆ ಹೆಬ್ಬಾಳಕರ್ ವಿರುದ್ಧ ಶೆಟ್ಟರ್ ಗರಂ

ಬೆಳಗಾವಿ: ಚುನಾವಣೆಯ ಪ್ರಚಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನನ್ನ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಬೆಳಗಾವಿ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಂದ ಮೇಲೆ ಈ ವಿಚಾರವನ್ನು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳಲಿಲ್ಲ. ಈಗ್ಯಾಕೆ ಹೇಳುತ್ತಿದ್ದಾರೆ. ಚುನಾವಣೆಯ ಪ್ರಚಾರದಲ್ಲಿ ಇಷ್ಟೊಂದು ಕೀಳುಮಟ್ಟದ ಪ್ರಚಾರದ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಕಾಂಗ್ರೆಸ್‌ನವರಿಗೆ ಜಗದೀಶ್ ಶೆಟ್ಟರ್ ಹಾಗೂ ಬಿಜೆಪಿಯ ಬಗ್ಗೆ ಮಾತನಾಡಲು ಯಾವುದೇ ವಿಷಯಗಳು ಇಲ್ಲ. ಇದು ಲೋಕಸಭಾ ಚುನಾವಣೆ ಯಾವುದೋ ಜಿಪಂ, ವಿಧಾನಸಭೆ ಚುನಾವಣೆ ಎಂದು ತಿಳಿದುಕೊಂಡಿದ್ದಾರೋ ಹೆಬ್ಬಾಳ್ಕರ್ ಎಂದು ಅರ್ಥವಾಗುತ್ತಿಲ್ಲ. ಇಂಥ ಕೀಳು ಮಟ್ಟದ ಭಾಷೆ, ಅಪ್ರಚಾರಕ್ಕೆ ನಾನು ಅಷ್ಟೊಂದು ಕೀಳುಮಟ್ಟಕ್ಕೆ ಹೋಗುವುದಿಲ್ಲ ಎಂದು ಕುಟುಕಿದರು.
ನಾನು ಕಾಂಗ್ರೆಸ್ ಸೇರಿದಾಗ ಅವರ ಪಕ್ಷದ ನಾಯಕರೇ ದೊಡ್ಡ ಶಕ್ತಿ ಬಂದಿದೆ ಎಂದಿದ್ದರು. ಇಂಥ ಹಸಿ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಸೋಲಿನ ಹತಾಶೆಯಿಂದ ಕಾಂಗ್ರೆಸ್ ಈ ರೀತಿಯ ಹೇಳಿಕೆ ಅಪ್ರಚಾರ ಮಾಡುವುದು ಪ್ರಾರಂಭವಾಗಿದೆ. ಇದಕ್ಕೆ ಮತದಾನದ ದಿನ ಜನರು ಉತ್ತರ ಕೊಡುತ್ತಾರೆ ಎಂದರು.
ಏ.28ಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ಬರುತ್ತಿರುವುದು ಸಂತಸ ತಂದಿದೆ. ಬೆಳಗಾವಿ ಜನರು ಬಹಿರಂಗ ಸಮಾವೇಶದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಆಗಮಿಸಿ ಯಶಸ್ವಿಗೊಳಿಸಬೇಕು ಎಂದರು./////