Belagavi News In Kannada | News Belgaum

ಭರವಸೆ ಈಡೇರಿಸಿದ ಕಾಂಗ್ರೆಸ್‌ ಬೆಂಬಲಿಸಿ: ಶಾಸಕ ರಾಜು ಕಾಗೆ

ನೀರಾವರಿ, ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡುತ್ತೇನೆ-ಶಾಸಕರ ಸಲಹೆ, ಸೂಚನೆ ಮೇರೆಗೆ ನಿಮ್ಮ ಪ್ರತಿ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆಂದ ಪ್ರಿಯಂಕಾ ಜಾರಕಿಹೊಳಿ

ನೀರಾವರಿ, ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡುತ್ತೇನೆ-ಶಾಸಕರ ಸಲಹೆ, ಸೂಚನೆ ಮೇರೆಗೆ ನಿಮ್ಮ ಪ್ರತಿ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆಂದ ಪ್ರಿಯಂಕಾ ಜಾರಕಿಹೊಳಿ

ಅಥಣಿ: ರಾಜ್ಯ ಕಾಂಗ್ರೆಸ್‌ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ ಐದು ಭರವಸೆಗಳನ್ನು ಈಡೇರಿಸಿದೆ. ಅಧಿಕಾರಕ್ಕೆ ಬಂದು ಎಂಟು ತಿಂಗಳಲ್ಲೇ ಎಲ್ಲಾ ಭರವಸೆಗಳ್ಳನ್ನು ಈಡೇರಿಸಿದ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತಿರೋ ಅಥವಾ ಹತ್ತು ವರ್ಷಗಳಿಂದ ಸುಳ್ಳು ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಬೆಂಬಲಿಸುತ್ತಿರೋ ಎಂದು ನೀವೇ ಸಿರ್ಧರಿಸಬೇಕೆಂದು ಶಾಸಕ ರಾಜು ಕಾಗೆ ಹೇಳಿದರು.
ಅಥಣಿ ತಾಲೂಕಿನ ಕಾಗವಾಡ ಮತಕ್ಷೇತ್ರದ ಗುಂಡೇವಾಡಿ, ಅನಂತಪೂರ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯಲ್ಲಿ ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರ ಪ್ರಚಾರಾರ್ಥ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಈ ಭಾಗಕ್ಕೆ ನೀರಾವರಿ ಕಲ್ಪಿಸುವುದಕ್ಕಾಗಿ ಜಾರಿಗೆ ತಂದ ಬಸವೇಶ್ವರ ಏತ ನೀರಾವರಿ ಯೋಜನೆಗೆ ಸಿಎಂ ಸಿದ್ದರಾಮಯ್ಯನವರೇ ಚಾಲನೆ ನೀಡಿದ್ದರು. ಈಗಾಗಲೇ ಈ ಯೋಜನೆ ಪೂರ್ಣಗೊಳ್ಳಲು ಬಹಳ ದಿನ ಕಾಯಬೇಕಿಲ್ಲ. ಕೃಷ್ಣಾ ನದಿಗೆ ನೀರು ಬಂದರೆ ಸಾಕು ನಿಮ್ಮ ಭಾಗಕ್ಕೆ ನೀರು ಹರಿಸುತ್ತೇವೆ. ಆದ್ದರಿಂದ ನಮ್ಮ ಕೈ ಬಲಪಡಿಸಲು ಪ್ರಿಯಂಕಾ ಜಾರಕಿಹೊಳಿ ಅವರನ್ನು ಬೆಂಬಲಿಸುವ ಮೂಲಕ ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಾವುಟ ಹಾರಿಸಬೇಕೆಂದು ಮನವಿ ಮಾಡಿದರು.

ಭಾರತ ದೇಶದಲ್ಲಿ ಬದಲಾವಣೆ ಆಗಬೇಕು. ಬದಲಾವಣೆ ಏಂದರೆ ಶಿಕ್ಷಣ, ಕುಡಿಯುವ ನೀರು, ಆಸ್ಪತ್ರೆಗಳು, ಬಡವರಿಗೆ ಮನೆಗಳನ್ನು ನಿರ್ಮಿಸಬೇಕಾಗಿರುವದು ಬದಲಾವಣೆ. ಆದರೆ ಸ್ವಾತಂತ್ರ್ಯ ದೊರಕಿ 75 ವರ್ಷಗಳು ಕಳೆದರೂ ಇನ್ನು ಬಡತನ ನಿವಾರಣೆ ಆಗಿಲ್ಲ. ಬಡವರಿಗೆ ಮನೆಗಳು ಇಲ್ಲಾ. ಯುವಕರಿಗೆ ಉದ್ಯೋಗ ಇಲ್ಲಾ. ಇನ್ನು ದೇಶದ ದೀನ ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರೂ ಒಂದೇ ಎನ್ನುವ ಮನೋಭಾವ ಮೂಡಬೇಕು. ಆದರೆ ಈ ಬಿಜೆಪಿಯವರು ಜಾತಿ, ಜಾತಿಗಳ, ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿರುವ ಕೋಮುವಾದಿ ಪಕ್ಷವಾದ ಬಿಜೆಪಿಗೆ ಮನ ನೀಡಬೇಡಿ ಎಂದರು.
ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಮಾತನಾಡಿ, ನಿಮ್ಮ ಭಾಗದ ಅಭಿವೃದ್ದಿಗೆ ನಾನು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಕಳೆದ ಅವಧಿಯಲ್ಲಿ ಬಿಜೆಪಿಯ 25 ಜನ ಸಂಸದರು ರಾಜ್ಯದಿಂದ ಆಯ್ಕೆಯಾದರೋ ಸಂಸತ್ತಿನಲ್ಲಿ ರಾಜ್ಯದ ಪರ ಧ್ವನಿ ಎತ್ತಲಿಲ್ಲ. ಕಾರಣ ಕಾಂಗ್ರೆಸ್‌ ಸರ್ವರ ಪ್ರಗತಿಯನ್ನು ಬಯಸುವ ಪಕ್ಷ. ಹೀಗಾಗಿ ಚಿಕ್ಕೋಡಿ ಲೋಕಸಭೆಯ ಅಧಿಕೃತ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಿ ಎಂದು ಕೈ ಮುಗಿದು ಮನವಿ ಮಾಡಿದರು.

ಯಾವತ್ತು ಕೊಟ್ಟ ಮಾತಿನಂತೆ ನಡೆದುಕೊಂಡಿರುವ ಪಕ್ಷ ಕಾಂಗ್ರೆಸ್. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಯುವ ನ್ಯಾಯ, ನಾರಿ ನ್ಯಾಯ, ರೈತ ನ್ಯಾಯ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಎಲ್ಲ ಅಶ್ವಾಸನೆಗಳ್ನು ಈಡೇರಿಸುವುದು ಗ್ಯಾರಂಟಿ ಎಂದು ತಿಳಿಸಿದರು.

ಚಿಕ್ಕೋಡಿ ಲೋಕಸಭೆಯಿಂದ ಆಯ್ಕೆಯಾದರೆ ನೀರಾವರಿ, ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡುತ್ತೇನೆ. ಸ್ಥಳೀಯ ಶಾಸಕರ ಸಲಹೆ, ಸೂಚನೆ ಮೇರೆಗೆ ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಸ್ಪಂದಿಸುತ್ತೇನೆಂದು ಭರವಸೆ ನೀಡಿದರು.

ಮಾಜಿ ಶಾಸಕ ಕೇಶವಮೂರ್ತಿ ಮಾತನಾಡಿ, ಸಚಿವ ಸತೀಶ್ ಜಾರಕಿಹೊಳಿಯವರು ಬರೀ ಬೆಳಗಾವಿ ಜಿಲ್ಲೆಗೆ ಅಷ್ಟೇ ಸಿಮೀತವಾಗಿಲ್ಲ. ರಾಜ್ಯಾದ್ಯಂತ ತಮ್ಮ ಅಭಿವೃದ್ಧಿ ಕೆಲಸಗಳಿಂದಲೇ ಗುರುತಿಸಿಕೊಂಡಿದ್ದಾರೆ. ಅಂತಹ ನಾಯಕರ ಮಗಳು ಚಿಕ್ಕೋಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಅವರನ್ನು ಬಹು ಅಂತರದಿಂದ ಗೆಲ್ಲಿಸುವ ಮೂಕ ನಿಮ್ಮ ಸೇವೆ ಮಾಡಲು ಒಂದು ಅವಕಾಶ ಕಲ್ಪಿಸಿ ಎಂದರು.
ಅನಂತಪೂರ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಓಂ ಪಕ್ರಾಶ ಪಾಟೀಲ್ ಮಾತನಾಡಿ, ಚಿಕ್ಕೋಡಿ ಜನತೆಯ ಕೂಗು ದೆಹಲಿಗೆ ಮುಟ್ಟಬೇಕಾದರೆ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಹೆಚ್ಚು ಮತಗಳನ್ನು ನೀಡಬೇಕು. ವಿಧಾನಸಭೆ ಚುನಾವಣೆಯಲ್ಲಿ ಅನಂತಪೂರ ಜನತೆ ಕಾಂಗ್ರೆಸ್ ಗೆ ಲಿಡ್ ನೀಡಿದ್ದಿರಿ. ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಅಭ್ಯರ್ಥಿಗೆ ಲಿಡ್ ನೀಡಬೇಕೆಂದು ಮನವಿ ಮಾಡಿದರು.

ಗುಂಡೇವಾಡಿ ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ ಕಾಂಬಳೆ ಸೇರಿದಂತೆ ಹಲವರು ಬಿಜೆಪಿ ತೊರೆದು ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ದಿಗ್ವಿಜಯ ಪವಾರ್ ದೇಸಾಯಿ, ಅನಂತಪುರ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಓಂ ಪ್ರಕಾಶ ಪಾಟೀಲ್, ಕಾಗವಾಡ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ವಿಜಯ ಅಕ್ಕಿವಾಟೆ, ಜಿಪಂ ಮಾಜಿ ಅಧ್ಯಕ್ಷೆ ಆಶಾ ಐಹೊಳೆ, ಜಿಪಂ ಮಾಜಿ‌ ಅಧ್ಯಕ್ಷ ಬಸವರಾಜ, ಕಾಂಗ್ರೆಸ್‌ ಮುಖಂಡರಾದ ರವಿಕುಮಾರ, ಸಿದ್ದರಾಯ ತೇಲಿ, ಮಹಾಂತೇಶ ಸಾಲಿಮಠ, ಸಂಗಪ್ಪಾ ಜಾಗವಾಡ, ತುಕಾರಾಂ ಈರಕರ್, ರೇಖಾ ಪಂಚಾಪುರ ಸೇರಿದಂತೆ ಕಾಗವಾಡ ಮತಕ್ಷೇತ್ರದ ಗುಂಡೇವಾಡಿ, ಅನಂತಪೂರ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ ಸಾವಿರಾರು ಕಾರ್ಯಕರ್ತರು, ಮಹಿಳೆಯರು ಇದ್ದರು.