Belagavi News In Kannada | News Belgaum

ಒಬ್ಬ ಶಿಕ್ಷಕನ ಮನದಾಳ ಮಾತುಗಳು ಹೀಗೂ ಉಂಟೆ

ಬೆಳಗಾವಿ : ಮೇಷ್ಟ್ರು ಡೈರಿ 156: ಕಳೆದ ಮೊಬೈಲ್ ಸಿಕ್ತು!*

ನನ್ನ ಮೊಬೈಲ್ ಕಳೆದುಹೋದ ದಿನದಂದೇ ಪೋಲೀಸ್ ಸ್ಟೇಷನ್ನಲ್ಲಿ ಕಂಪ್ಲೆಂಟ್ ಕೊಟ್ಟಿದ್ದೆನಾದರೂ ಎರಡು ತಿಂಗಳುಗಳಿಂದ ಯಾವುದೇ ಸುಳಿವು ಸಿಗಲಿಲ್ಲ. ಈವತ್ತು ಸಂಜೆ ಪೋಲೀಸ್ ಸ್ಟೇಷನ್ ಗೆ ಬರುವಂತೆ ಕರೆ ಬಂತು. ಬಹುಶಃ ಮೊಬೈಲ್ ಕಾರಣಕ್ಕೆ ಇರಬಹುದೆಂದು ಸ್ಟೇಷನ್ ಗೆ ಹೋದೆ. ನನ್ನ ಊಹೆ ನಿಜವಾಗಿತ್ತು. ಸದ್ಯಕ್ಕೆ ಇರುವ ಟೆಕ್ನಾಲಜಿ ಬಳಸಿಕೊಂಡು ನನ್ನ ಮೊಬೈಲ್ ಅನ್ನು ರಿಕವರಿ ಮಾಡಲಾಗಿತ್ತು. ಇದಕ್ಕೆ ಕಾರಣವಾದ PC ಗಿರೀಶ್ರವರಿಗೆ ಒಂದು thanks ಹೇಳಿ, ಹೊರಗೆ ಬರುವಾಗ ಕ್ರೈಂ ಮತ್ತು ಸಿವಿಲ್ ಬ್ರಾಂಚಿನ ಇಬ್ಬರೂ PSI ಸಿಕ್ಕರು. ಕೈ ಕುಲುಕುತ್ತಾ ತುಂಬಾ ಫ್ರೆಂಡ್ಲಿಯಾಗಿ ಮಾತನಾಡುತ್ತಾ ನನ್ನ ಪೂರ್ವಾಪರ ತಿಳಿದುಕೊಂಡರು. ಈ ಹಿಂದೆ ಸಂಬಂಧಿಕರ ಕೇಸ್ ವಿಷಯವೊಂದರ ಸಂಬಂಧ, PSI ರವಿ ಸರ್ ಜೊತೆ ಫೋನಿನಲ್ಲಿ ಮಾತನಾಡಿದ್ದೆ. ಅವರ ಅಪ್ರೋಚ್ ಒಳ್ಳೆಯ ಶಿಕ್ಷಕನ ರೀತಿ ಇತ್ತು. ಈಗಲೂ, PSI ಎಂಬ ದರ್ಪ ಇರದ ಅಪರೂಪದ ಅದೇ ಜನಸ್ನೇಹಿ ಬಾಡಿ ಲಾಂಗ್ವೇಜ್ ನೋಡಿ ನನಗಂತೂ ಖುಷಿಯಾಯಿತು. ಯಾವುದೇ ವ್ಯಕ್ತಿಯ, ಯಾವುದೇ ಒಳ್ಳೆಯ ಗುಣಗಳನ್ನು ಕಂಡಾಗ, on face ಪ್ರಶಂಸಿಸುವ ನಾನು, ಅವರ ಜನಸ್ನೇಹಿ ನಡೆಯನ್ನು ಹೊಗಳಿದೆ. ಮತ್ತೋರ್ವ PSI ಮುತ್ತುರಾಜ್ ಅವರು, ‘ಪೋಲೀಸ್ ಅಂದ್ರೆ ಬರೀ ಕೆಟ್ದೇ ಅಲ್ಲ ಸಾರ್, ಇಲ್ಲಿಗೆ ಬರೋ ಎಷ್ಟೋ ಜನ್ಗಳು, ಲಫಂಗಗಳಿರ್ತಾರೆ, law and order ಗೆ ಚಾಲೆಂಜ್ ಆಗೋ educated ಕೂಡಾ ಇರ್ತಾರೆ, rogueಗಳಿರ್ತಾರೆ, ಇಂತವ್ರ ಮಧ್ಯೆ ಇರೋ ನಾವ್ ಏನಾಗ್ಬೇಡ?’ ಎಂದ ಅವರ ಮಾತಿನಲ್ಲಿ, ಸಾಮಾನ್ಯ ಜನರಿಗೆ rough and tough ಆಗಿ ಕಾಣುವ ಪೋಲೀಸರ ವರ್ತನೆಗೆ ಕಾರಣ ಇದ್ದವು. ಮುಂದುವರಿದು, ‘ಪೋಲೀಸ್ ಅಂದ್ರೆ ಇಷ್ಟೇ ಅಲ್ಲ ಸಾರ್, ಒಳ್ಳೇದು ಇರ್ತದೆ…’ ಎನ್ನುತ್ತಾ ಮತ್ತೇನೋ ಹೇಳಲು ಹೊರಟರು. ಅಷ್ಟರಲ್ಲಿ, ‘ಅಪ್ಪೀ, ಪಾಪು ಕಾಯ್ತಿರ್ತಾನೆ’ ಎನ್ನುವ ಹೆಂಡತಿಯ, ಮಗನ ಕಾಳಜಿಯ ಮಾತುಗಳೂ, ಹಾಗೂ ಕಳೆದು ಹೋದ ಮೊಬೈಲ್ ಹಿಡಿದು PC ಗಿರೀಶ್ ಅವರೂ ಹೊರಬಂದರು. ಮೊಬೈಲ್ ಕೈಗಿಡುತ್ತಾ PSI ಮುತ್ತುರಾಜ್, ‘ಒಳ್ಳೇದನ್ನ ಸ್ಪ್ರೆಡ್ ಮಾಡಿ ಸರ್, ಹಾಗೇನೇ ಪೋಲೀಸ್ರುಗೆ ಏನ್ ಗೊತ್ತಾಗುತ್ತೆ ಅನ್ಕಂಡು, ಮೊಬೈಲ್ ಕದ್ಯೋ ಕಳ್ರಿಗೂ, ಕಳ್ತನ, ಮೋಸ, ವಂಚನೆ ಮಾಡೋ ಅಯೋಗ್ಯರಿಗೂ, ಈಗಿರೋ ಪೋಲೀಸ್, technologyನಲ್ಲಿ ಉಳಿಗಾಲ ಇಲ್ಲ ಎನ್ನೋದೂ ಗೊತ್ತಾಗ್ಲಿ’ ಎಂದರು ಗೌರವದಿಂದ ಬೀಳ್ಕೊಡುಗೆಯ ಕೈ ಕುಲುಕುತ್ತಾ. ಬರುವ ದಾರಿಯಲ್ಲಿ, ಹೆಂಡತಿ, ‘ಅಯ್ಯೋ, ಇನ್ನೊಂದ್ ಸ್ವಲ್ಪ ದಿನ್ದಿಂದೆ ಸಿಕ್ಕಿದಿದ್ರೆ, ಉಂಗ್ರ ಅಡ ಇಟ್ಟು ಮೊಬೈಲ್ ತಕಳದು ತಪ್ತಿತಲ್ವಾ?’ ಎಂದಳು. ನಾನೂ ಮನಸ್ಸಿನಲ್ಲೇ ಹ್ಞೂಂ ಎಂದುಕೊಂಡು, ಇಂತಹ ಕೇಸುಗಳಲ್ಲಿ ಸಾಮಾನ್ಯ ಜನರೂ, ನ್ಯಾಯ ಸಿಗುತ್ತದೆ ಎನ್ನುವ ಭರವಸೆ ಹೊಂದುವಂತೆ ಕಾರ್ಯ ನಿರ್ವಹಿಸುತ್ತಿರುವ ಪೋಲೀಸರ ಬಗೆಗೂ, ಮತ್ತು technology ಬಗೆಗೂ ಗೌರವ ಮೂಡಿ ಮನಸೊಳಗೆ ಖುಷಿ ಪಟ್ಟುಕೊಳ್ಳುತ್ತಾ ಮನೆಗೆ ಹೊರಟೆ.

ಲಿಂಗರಾಜು ಕೆ ಮಧುಗಿರಿ
8310413465