Belagavi News In Kannada | News Belgaum

ಸಂಸ್ಕಾರವಂತ ಸಮಾಜ ನಿರ್ಮಾಣವಾಗಲಿ : ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ


ಶತಮಾನಗಳ ಹಿಂದೆ ಜನರ ಬಳಿ ಸಂಸ್ಕಾರವಿತ್ತು ಆದರೆ ಶಿಕ್ಷಣವಿರಲಿಲ್ಲ. ಪ್ರಸ್ತುತ ಯುವ ಜನತೆ ಬಳಿ ಶಿಕ್ಷಣವಿದ್ದು ಆದರೆ ಅವರು ಸಂಸ್ಕಾರದಿಂದ ವಂಚಿತರಾಗುತ್ತಿದ್ದಾರೆ. ಇದು ಅತ್ಯಂತ ಆತಂಕದ ವಿಷಯ. ಇದರಿಂದ ಸಮಾಜದಲ್ಲಿ ತಂದೆ, ತಾಯಿ, ಗುರು, ಹಿರಿಯರ ಬಗೆಗಿನ ಗೌರವ ಕಡಿಮೆಯಾಗುತ್ತಿದ್ದು ಯುವ ಜನತೆ ದಾರಿತಪ್ಪಿ ವ್ಯಸನಿಗಳಾಗುತ್ತಿರುವುದು ನೋವಿನ ಸಂಗತಿ. ಕಾರಣ ಸಂಸ್ಕಾರಯುತ ಸಮಾಜ ನಿರ್ಮಾಣದ ಅನಿವಾರ್ಯತೆ ಇದೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾ ಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ನಾಗನೂರು ರುದ್ರಾಕ್ಷಿ ಮಠದ ಸಯೋಗದೊಂದಿಗೆ ಪ್ರಭುದೇವ ಸಭಾಗ್ರಹದಲ್ಲಿ ಆಯೋಜಿಸಿದ್ದ 3 ದಿನಗಳ ಬಸವ ಜಯಂತಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ಮಾತನಾಡಿದರು. ಮುಂದುವರೆದು ಮಾತನಾಡಿದ ಸ್ವಾಮೀಜಿ ಅಂದು ಲಿಂಗಾಯತ ಮಠಮಾನ್ಯಗಳು ಹಾಗೂ ಸಮಾಜದ ಹಿರಿಯರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸದೆ ಹೋಗಿದ್ದರೆ ಇಂದು ಕರ್ನಾಟಕ ಮತ್ತೊಂದು ಬಿಹಾರವಾಗುತ್ತಿತ್ತು. ಭಾರತದಲ್ಲಿ ಇಂದು ಕರ್ನಾಟಕಕ್ಕೆ ವಿಶೇಷ ಗೌರವ ಸ್ಥಾನಮಾನ ದೊರೆಯುತ್ತಿದ್ದರೆ ಅದು ನಮ್ಮ ಪೂರ್ವಜರು ಅಂದು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳಿಂದಾಗಿದೆ. ‘ಕೊಲುವೆನೆಂಬ ಭಾಷೆ ದೇವನದಾದರೆ, ಗೆಲುವೆನೆಂಬ ಭಾಷೆ ಭಕ್ತನದು’ ಎಂಬಂತೆ ಸಮಾಜ ಬಾಂಧವರು ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ಅಪಾರ ಸಂಖ್ಯೆಯಲ್ಲಿ ಬಸವ ಜಯಂತಿ ಉತ್ಸವದಲ್ಲಿ ಪಾಲ್ಗೊಂಡಿರುವುದು ಸಂತಸದ ವಿಷಯ ಎಂದು ಶ್ರೀಗಳು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಮಾರೋಪ ನುಡಿಗಳನ್ನಾಡಿದ ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಎಮ್. ಜಾಮದಾರ್ ಮಾತನಾಡಿ 12ನೇ ಶತಮಾನದಲ್ಲಿ ಬಸವಾದಿ ಶಿವ ಶರಣರು ಮಾಡಿದ ಕ್ರಾಂತಿ ಯಶಸ್ವಿಯಾಗಲಿಲ್ಲ. ಅಂದು ಅದು ಯಶಸ್ವಿಯಾಗಿದ್ದರೆ ಇಂದು ಜಾತಿ ಉಪಜಾತಿಗಳ ನಡುವೆ ಸಮಾಜ ಹರಿದು ಹಂಚಿ ಹೋಗುತ್ತಿರಲಿಲ್ಲ‌. ಜಾತಿ ವ್ಯವಸ್ಥೆ ಹೋಗಲಾಡಿಸಲು ಶ್ರಮಿಸಿದ ಬಸವಣ್ಣನವರ ಅನುಯಾಯಿಗಳಲ್ಲಿಯೇ ಇವತ್ತು ನೂರಾರು ಜಾತಿ ಉಪಜಾತಿಗಳಾಗಿದ್ದುದು ಬೇಸರದ ಸಂಗತಿ. ಬಸವಣ್ಣನ ಕ್ರಾಂತಿ ಅಂದು ಯಶಸ್ವಿಯಾಗಿದ್ದರೆ ಇಂದು ಜಾತ್ಯಾತೀತ ಸಮಾಜ ನಿರ್ಮಾಣವಾಗುತ್ತಿತ್ತು ಎಂದರು.

ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದ ಅರಳಿಕಟ್ಟಿ ತೋಂಟದಾರ್ಯ ವಿರಕ್ತ ಮಠದ ಶಿವಮೂರ್ತಿ ಸ್ವಾಮಿಗಳು ಮಾತನಾಡಿ ಕುಂದಾನಗರಿ ಬೆಳಗಾವಿ ಬಸವನಗರಿ ಆಗುತ್ತಿರುವುದು ಸಂತಸದ ವಿಷಯ. ಸಮಾಜ ಬಾಂಧವರು ತಮ್ಮ ಮನೆಯಲ್ಲಿನ ವಿವಿಧ ಕಾರ್ಯಕ್ರಮಗಳಿಗೆ ಆಗಮಿಸುವ ಅತಿಥಿ ಮಹೋದಯರಿಗೆ ಕಾಣಿಕೆ ನೀಡುವ ಬದಲು ವಚನಾದಾರಿತ ಪುಸ್ತಕ ನೀಡಿದರೆ ಶರಣ ಸಂಸ್ಕೃತಿಯ ಜೊತೆ ಜೊತೆಗೆ ಕನ್ನಡ ಭಾಷೆಯ ಬೆಳವಣಿಗೆಯೂ ಆಗುತ್ತದೆ ಎಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ  ಬೆಳ್ಳೆರಿಯ ಬಸವಾನಂದ ಸ್ವಾಮಿಗಳು ಮಾತನಾಡಿ ಫ್ರಾನ್ಸ್, ರಷ್ಯಾ, ಅಮೆರಿಕಾ ಸೇರಿದಂತೆ ಉಕ್ರೇನ್ ದೇಶಗಳಲ್ಲಿ ಹೆಣ್ಣು, ಹೊನ್ನು ಮಣ್ಣು ಹಾಗೂ ಅಧಿಕಾರಕ್ಕಾಗಿ ಕ್ರಾಂತಿ ನಡೆದರೆ ಕಲ್ಯಾಣದಲ್ಲಿ ಸತ್ಯ, ಸಮಾನತೆ ಹಾಗೂ ಧರ್ಮದ ಉಳಿವಿಗಾಗಿ ಕ್ರಾಂತಿ ನಡೆಯಿತು ಎಂದು ಶರಣರ ಕ್ರಾಂತಿ ಸ್ಮರಿಸಿಕೊಂಡರು.

ಸಮಾರಂಭಕ್ಕೂ ಮುಂಚೆ ರಾಜ್ಯ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ಆಕರ್ಷಕವಾಗಿ ಮೂಡಿಬಂದಿತು. ಪ್ರಾರಂಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಖಜಾಂಚಿ ಮುರಿಗೆಪ್ಪ ಬಾಳಿ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ವಂದಿಸಿದರು. ಮಂಜುನಾಥ ಶರಣಪ್ಪ ನವರ ನಿರೂಪಿಸಿದರು.