Belagavi News In Kannada | News Belgaum

ಸೋಯಾಅವರೆ ಹಾಗೂ ಬೇಳೆಕಾಳು ಬೆಳೆಗಳಲ್ಲಿ ತಾಂತ್ರಿಕ ಮಾಹಿತಿ

ಸೋಯಾಅವರೆ ಹಾಗೂ ಬೇಳೆಕಾಳು ಬೆಳೆಗಳಲ್ಲಿ ತಾಂತ್ರಿಕ ಮಾಹಿತಿ
ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರ ಸಂಸ್ಥೆಯ ಅಧಿಕಾರವನ್ನು ವಹಿಸಿ 40 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಮತ್ತಿಕೊಪ್ಪದ ಐಸಿಎಆರ್-ಕೆಎಲ್‍ಇ ಕೃಷಿ ವಿಜ್ಞಾನ ಕೇಂದ್ರ ಹಾಗೂ ಎಡಿಎಮ್ ಅಗ್ರೋ ಇಂಡಸ್ಟ್ರೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇವರ ಸಹಯೋಗದಲ್ಲಿ ಜಿಲ್ಲೆಯ ರೈತರಿಗೆ ಸೋಯಾಬಿನ್ ಬೀಜಗಳನ್ನು ವಿತರಣೆ ಮಾಡಲಾಯಿತು.
ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಜರುಗಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ವಿಜ್ಞಾನ ಕೇಂದ್ರದ ಕಾರ್ಯಾಧ್ಯಕ್ಷ ಹಾಗೂ ಕೆಎಲ್‍ಇ ಸಂಸ್ಥೆಯ ನಿರ್ದೇಶಕರಾದ ಶ್ರೀ ಬಿ. ಆರ್. ಪಾಟೀಲ ವಹಿಸಿದ್ದರು. ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀ ಬಿ. ಆರ್. ಪಾಟೀಲ, ಪ್ರತಿಷ್ಠಿತ ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರು ರೈತರ ಕುಟುಂಬದಲ್ಲಿ ಜನಿಸಿ ರೈತರ ಬದುಕನ್ನು ಹತ್ತಿರದಿಂದ ಕಂಡವರಾಗಿದ್ದು, ಕೃಷಿಯಲ್ಲಿ ರೈತರಿಗೆ ಹೊಸ ಮಾರ್ಗ ಕಂಡುಕೊಳ್ಳಲು ಕನಸನ್ನು ಕಂಡು, ಕನಸು ನನಸು ಮಾಡುವ ದಿಸೆಯಲ್ಲಿ ಈ ಭಾಗದಲ್ಲಿ ಕೃಷಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಅದರಂತೆ ಕೃಷಿ ವಿಜ್ಞಾನ ಕೇಂದ್ರವು ಅನೇಕ ಬೆಳೆಗಳ ಅಧಿಕ ಇಳುವರಿ ನೀಡುವ ತಳಿಗಳ ಗುಣಮಟ್ಟದ ಬೀಜಗಳನ್ನು ಉತ್ಪಾದಿಸಿ ರೈತರಿಗೆ ಪೂರೈಕೆ ಮಾಡುವಲ್ಲಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿದೆ. ಅದೇರೀತಿ ರೈತನ ಜೀವಾಳು ಹಾಗೂ ನೈಸರ್ಗಿಕ ಸಂಪನ್ಮೂಲವಾದ ಜಮೀನಿನ ಮಣ್ಣಿನ ಉತ್ತಮ ಆರೋಗ್ಯವನ್ನು ಕಾಪಾಡಲು ಮಣ್ಣು ಪರೀಕ್ಷಾ ಪ್ರಯೋಗಾಲಯ ಸೇವೆಯನ್ನು ಒದಗಿಸುತ್ತಿದೆ ಮತ್ತು ಪರಿಸರಸ್ನೇಹಿ ಜೈವಿಕ ಪರಿಕರಗಳನ್ನು ಉತ್ಪಾದಿಸಿ ರೈತರಿಗೆ ನೀಡುವಲ್ಲಿ ಯಶಸ್ವಿಯಾಗಿ ರಾಜ್ಯದಲ್ಲಿ ಮನ್ನಣೆ ಪಡೆದಿದೆ. ಕೃಷಿ ವಿಜ್ಞಾನ ಕೇಂದ್ರದ ಈ ಯಶಸ್ಸಿಗೆ
ಡಾ. ಪ್ರಭಾಕರ ಕೋರೆಯವರ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಮುಖ್ಯ ಕಾರಣವಾಗಿದೆ, ಆದ್ದರಿಂದ ಅವರ 40 ವರ್ಷ ಅಧಿಕಾರ ಅವಧಿ ಪೂರೈಸಿದ ಅಂಗವಾಗಿ ರೈತರಿಗೆ ಉಚಿತವಾಗಿ ಸೋಯಾಬಿನ್ ಬೆಳೆಯ ಉತ್ತಮ ತಳಿಯಾದ ಡಿಎಸ್‍ಬಿ-34 ಬೀಜವನ್ನು ರೈತರಿಗೆ ಪೂರೈಸಲಾಗುತ್ತಿದೆ ಎಂದರು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸೇವೆಯನ್ನು ಪಡೆಯಲು ಸಲಹೆ ನೀಡಿದರು.
ಎಡಿಎಮ್ ಅಗ್ರೋ ಇಂಡಸ್ಟ್ರೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕರಾದ ಶ್ರೀ ಅನಿಲ ತೇರದಾಳ ಮಾತನಾಡಿ, ಎಡಿಎಮ್ ಸಂಸ್ಥೆಯ ಕಾರ್ಪೋರೆಟ್ ಸೋಸಿಯಲ್ ಜವಾಬ್ದಾರಿ ಭಾಗವಾಗಿ ಸಾಮಾಜಿಕ ಕಾಳಜಿ ಯೋಜನೆಯಡಿ ರೈತರಿಗೆ ಬೀಜ ವಿತರಣೆ ಹಾಗೂ ತಂತ್ರಜ್ಞಾನದ ವರ್ಗಾವಣೆ ಮೂಲಕ ರೈತರ ಆದಾಯ ಹೆಚ್ಚಿಸುವ ದೃಷ್ಟಿಯಿಂದ ಹಮ್ಮಿಕೊಳ್ಳುತ್ತಿರುವ ಈ ಯೋಜನೆಯನ್ನು ಕೆಎಲ್‍ಇ ಕೃಷಿ ವಿಜ್ಞಾನ ಕೇಂದ್ರದ ಸಮರ್ಥತೆಯನ್ನು ಗುರುತಿಸಿ ನೀಡಲಾಗಿದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಶ್ರೀಮತಿ ಶ್ರೀದೇವಿ ಬಿ. ಅಂಗಡಿಯವರು ಮಾತನಾಡಿ ಪ್ರಸ್ತುತ ರೈತರು ಬೆಳೆಯುತ್ತಿರುವ ಜೆಎಸ್-335 ತಳಿಯು ಕಡಿಮೆ ಇಳುವರಿಯನ್ನು ನೀಡುತ್ತಿದ್ದು, ಈ ಭಾಗದಲ್ಲಿ ಹೆಚ್ಚು ಇಳುವರಿ ನೀಡುವ ತಳಿಯನ್ನು ಬೆಳೆಯಬೇಕಾದ ಅವಶ್ಯಕತೆ ಇದೆ. ಆದ್ದರಿಂದ ಕೃಷಿ ವಿಜ್ಞಾನ ಕೇಂದ್ರವು ಅಧಿಕ ಇಳುವರಿ ನೀಡುವ ತಳಿಗಳಾದ ಡಿಎಸ್‍ಬಿ-34 ತಳಿಯನ್ನು ರೈತರಿಗೆ ಪೂರೈಸಲಾಗುತ್ತಿದೆ. ಕೇಂದ್ರದಲ್ಲಿ ವಿವಿಧ ವಿಷಯಗಳ ವಿಜ್ಞಾನಿಗಳಿದ್ದು ರೈತರು ಅವರ ಸಲಹೆಯಂತೆ ತಂತ್ರಜ್ಞಾನಗಳನ್ನು ಬಳಸಿ ಕೃಷಿಯಲ್ಲಿ ಯಶಸ್ಸನ್ನು ಕಂಡುಕೊಳ್ಳಲು ಸಲಹೆ ನೀಡಿದರು. ಅದರಂತೆ, ಎಡಿಎಮ್‍ನ ಸಹಾಯಕ ವ್ಯವಸ್ಥಾಪಕರಾದ ಶ್ರೀಮತಿ ರಕ್ಷಿತಾ ಕೆ. ಆರ್. ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮಲ್ಲಿ ಕೇಂದ್ರದ ವಿಜ್ಞಾನಿಗಳಾದ ಜಿ. ಬಿ. ವಿಶ್ವನಾಥ, ಡಾ. ಎಸ್. ಎಸ್. ಹಿರೇಮಠ ಹಾಗೂ ಎಸ್. ಎಮ್. ವಾರದ ತಾಂತ್ರಿಕ ಮಾಹಿತಿ ನೀಡಿದರು.
ಎಸ್. ಎಮ್. ವಾರದ ಸ್ವಾಗತಿಸಿದರು ಹಾಗೂ ಜಿ. ಬಿ. ವಿಶ್ವನಾಥ ವಂದಿಸಿದರು. ಕಾರ್ಯಕ್ರಮದಲ್ಲಿ 120 ರೈತರು ಭಾಗವಹಿಸಿದ್ದರು.