Belagavi News In Kannada | News Belgaum

ಸತಿ-ಪತಿಗಳು ಪರಸ್ಪರ ಅರಿತು ಬದುಕಿದರೆ ಸುಖ ಸಂಸಾರ : ಗುರುಸಿದ್ಧ ಸ್ವಾಮಿಗಳು

ಸತಿ-ಪತಿಗಳು ಪರಸ್ಪರ ಅರಿತು ಬದುಕಿದರೆ ಸುಖ ಸಂಸಾರ : ಗುರುಸಿದ್ಧ ಸ್ವಾಮಿಗಳು

ಇಂದಿನ ಯುವಕ ಯುವತಿಯರು ವಿದ್ಯಾವಂತರು, ಉದ್ಯೋಗವಂತರಾಗಿ ಲಕ್ಷ ಲಕ್ಷ ಸಂಪಾದನೆ ಮಾಡುತ್ತಾರೆ. ಆದರೆ ತಮ್ಮ ಅಹಂಕಾರದಿಂದ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇಲ್ಲದೆ ಸುಖ ಸಂಸಾರ ನಡೆಸಲಾಗದೆ ಇವರ ದಾಂಪತ್ಯ ಜೀವನ ಮುರಿದು ಬೀಳುತ್ತದೆ. ಸತಿ ತಪ್ಪಿ ನಡೆದಾಗ ಪತಿ ಬುದ್ದಿ ಹೇಳುತ್ತಾ ಪತಿ ತಪ್ಪಿದಾಗ ಸತಿ ಎಚ್ಚರಿಸಬೇಕು. ಪರಸ್ಪರರು ಅರಿತು ಬದುಕಿದರೆ ಸುಖ ಸಂಸಾರವಾಗುತ್ತದೆ. ಸತಿಪತಿಗಳು ಒಂದಾಗಿದ್ದರೆ ಅದು ಶಿವನಿಗೂ ಸಹ ಪ್ರಿಯವಾಗಿರುತ್ತದೆ ಎಂದು ಕಾರಂಜಿ ಮಠದ ಗುರುಸಿದ್ಧ ಸ್ವಾಮಿಗಳು ಅಭಿಮತ ವ್ಯಕ್ತಪಡಿಸಿದರು. ಅವರು  ಇಂದು ಕಾರಂಜಿ ಮಠದ 275 ನೆಯ ಮಾಸಿಕ ಶಿವಾನುಭವ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರಂಜಿ ಮಠದ ಉತ್ತರಾಧಿಕಾರಿ ಡಾ. ಶಿವಯೋಗಿ ದೇವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಬಸವರಾಜ ಗಾರ್ಗಿ 12ನೇ ಶತಮಾನದ ಶರಣ ದಂಪತಿಗಳ ಜೀವನ ಎಲ್ಲ ಕಾಲಘಟ್ಟದಲ್ಲಿ ವಿಶ್ವಕ್ಕೆ ಮಾದರಿಯಾಗಿದೆ ಎಂದರು‌. ಯರಗಟ್ಟಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ “ಬಸವಾದಿ ಶರಣರ ಅನುರೂಪದ ದಾಂಪತ್ಯ” ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ದಂಪತಿಗಳಲ್ಲಿ ಏಕ ನಿಷ್ಠೆ ಇರಬೇಕು. ದೇಹವೆರಡು ಪ್ರಾಣ ಒಂದು ಎಂದು ಬದುಕಬೇಕು. ಬಸವಣ್ಣನವರ ಪುಣ್ಯ ಸ್ತ್ರೀಯರಾದ ಗಂಗಾಂಬಿಕೆ, ನೀಲಾಂಬಿಕೆ, ದೇವರ ದಾಸಿಮಯ್ಯ- ದುಗ್ಗಳೆ, ಆಯ್ದಕ್ಕಿ ಲಕ್ಕಮ್ಮ – ಮಾರಯ್ಯ ಹೀಗೆ ಹಲವಾರು ಶರಣ ದಂಪತಿಗಳ ಜೀವನ ಪ್ರಸ್ತುತ ಸಮಾಜಕ್ಕೆ ಆದರ್ಶ ಪ್ರಾಯವೆಂದರು.  ಉಪನ್ಯಾಸಕ ಏ.ಕೆ. ಪಾಟೀಲ ಸ್ವಾಗತಿಸಿ ನಿರೂಪಿಸಿದರು. ಕ.ಸಾ.ಪ. ತಾಲೂಕು ಅಧ್ಯಕ್ಷ ಎಂ. ವೈ. ಮೆಣಸಿನಕಾಯಿ ಶರಣು ಸಮರ್ಪಣೆ ಮಾಡಿದರು.