Belagavi News In Kannada | News Belgaum

ಹಸಿರು ಹುಕ್ಕೇರಿ ನಿರ್ಮಿಸಲು ಅರಣ್ಯ ಇಲಾಖೆ ಪಣ: ತಾಪಂ ಇಒ ಮಲ್ಲಾಡದ

ಹುಕ್ಕೇರಿ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಹಾಗಾಗಿ ಅರಣ್ಯ ಪ್ರದೇಶ ಸೇರಿದಂತೆ ಖಾಲಿ ಜಾಗದಲ್ಲಿ ಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್.ಮಲ್ಲಾಡದ ಹೇಳಿದರು.
ತಾಲೂಕಿನ ಹಿಡಕಲ್ ಡ್ಯಾಮ್‍ನ ರಾಜಾ ಲಖಮಗೌಡ ಜಲಾಶಯ ಮುಂಭಾಗದಲ್ಲಿ ನಿರ್ಮಾಣ ಹಂತದ ಉದ್ಯಾನಕಾಶಿ ಆವರಣದಲ್ಲಿ ಬುಧವಾರ ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ವಲಯಗಳ ಸಹಯೋಗದಲ್ಲಿ ಏರ್ಪಡಿಸಿದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯಗಳ ಜೊತೆಗೆ ಪರಿಸರ ರಕ್ಷಣೆಯೂ ಅವಶ್ಯವಿದೆ. ಯುವ ಸಮೂಹ ಈಗಿನಿಂದಲೇ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದರು.
ಪರಿಸರ ರಕ್ಷಣೆಯೊಂದಿಗೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು. ನಿಸರ್ಗ ಸಂಪತ್ತು ಹೆಚ್ಚಾದರೆ ನಾಡು ಸಂಪತ್ತು ಸಂಪದ್ಭರಿತವಾಗುತ್ತದೆ. ತಾಲೂಕಿನ ಅರಣ್ಯ ಇಲಾಖೆಯಿಂದ ಗೋಮಾಳ, ಸ್ಮಶಾನ, ಗಾಯರಾಣ, ಸರ್ಕಾರಿ ಕಚೇರಿ ಆವರಣ, ಶಾಲಾ-ಕಾಲೇಜು, ಅಂಗನವಾಡಿ ಬಳಿ, ರಸ್ತೆ ಅಕ್ಕ ಪಕ್ಕ ಸೇರಿದಂತೆ ಖಾಲಿ ಜಾಗದಲ್ಲಿ ಹೆಚ್ಚಿನ ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸುತ್ತಿರುವುದು ಉತ್ತಮ ಬೆಳವಣಿಗೆ. ಈ ಮೂಲಕ ಇಡೀ ತಾಲೂಕನ್ನು ಹಸಿರು ಹುಕ್ಕೇರಿಯಾಗಿ ನಿರ್ಮಿಸಬೇಕು ಎಂದು ಅವರು ಸಲಹೆ ಮಾಡಿದರು.
ಅರಣ್ಯ ಇಲಾಖೆ ಆರ್‍ಎಫ್‍ಒಗಳಾದ ಪ್ರಸನ್ನ್ ಬೆಲ್ಲದ, ಮಹಾಂತೇಶ ಸಜ್ಜನ ಮಾತನಾಡಿ, ಈ ಸಲ ಅರಣ್ಯೀಕರಣಕ್ಕೆ ಆದ್ಯತೆ ನೀಡಲಾಗಿದೆ. ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಲಯಗಳಿಂದ ತಾಲೂಕಿನ ವಿವಿಧ ಕಡೆಗಳಲ್ಲಿ 60 ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಈ ಮೂಲಕ ಅರಣ್ಯ ಕ್ಷೇತ್ರಾಭಿವೃದ್ಧಿ ಮತ್ತಷ್ಟು ವಿಸ್ತರಿಸುವ ಉದ್ದೇಶವಿದೆ. ಗಿಡ-ಮರಗಳು ಇದ್ದಲ್ಲಿ ತಾಪಮಾನ ಕಡಿಮೆ ಆಗುವುದರೊಂದಿಗೆ ಅಂತರ್ಜಲ ಹೆಚ್ಚಾಗುತ್ತದೆ ಎಂದರು.
ತೋಟಗಾರಿಕೆ ಸಹಾಯಕ ನಿರ್ದೇಶಕ ರಾಜಶೇಖರ ಪಾಟೀಲ, ಬಿಇಒ ಪ್ರಭಾವತಿ ಪಾಟೀಲ, ದೈಹಿಕ ಶಿಕ್ಷಣಾಧಿಕಾರಿ ರವೀಂದ್ರ ಶೆಟ್ಟಿಮನಿ, ನರೇಗಾ ಸಹಾಯಕ ನಿರ್ದೇಶಕ ಪಿ.ಲಕ್ಷ್ಮೀನಾರಾಯಣ, ತಾಂತ್ರಿಕ ಸಂಯೋಜಕ ಅರ್ಷದ ನೇರ್ಲಿ, ಎಂಐಎಸ್ ಸಂಯೋಜಕ ಶಂಕರ ಶಿರಗುಪ್ಪಿ, ಐಇಸಿ ಸಂಯೋಜಕ ಮಹಾಂತೇಶ ಬಾದವಾನಮಠ, ಆಡಳಿತ ಸಹಾಯಕಿ ಪ್ರೀತಿ ಜವಳಿ, ಕಿರಣ ಚೌಗಲಾ ಮತ್ತಿತರರು ಉಪಸ್ಥಿತರಿದ್ದರು.
ಉಪವಲಯ ಅರಣ್ಯ ಅಧಿಕಾರಿ ಎಸ್.ಎಸ್.ಕೋರಿ ಸ್ವಾಗತಿಸಿದರು. ಅರಣ್ಯ ವೀಕ್ಷಕ ಶಿವುಕುಮಾರ ನಾಯಿಕ, ಅರಣ್ಯ ರಕ್ಷಕ ರಾಜು ಅಮರಾಯಿಗೋಳ ನಿರೂಪಿಸಿದರು. ಶಿವಪ್ಪ ಶಾಂಡಗಿ ವಂದಿಸಿದರು. ಇದೇ ವೇಳೆ ಪರಿಸರ ರಕ್ಷಣೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.