Belagavi News In Kannada | News Belgaum

ಐಸಿಎಆರ್-ಕೆಎಲ್‍ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಐಸಿಎಆರ್-ಕೆಎಲ್‍ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ
ಐಸಿಎಆರ್-ಕೆಎಲ್‍ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ (ಕೆವಿಕೆ-ಬೆಳಗಾವಿ-II) ರಲ್ಲಿ ಜೂನ್ 5 ರಂದು ವಿಶ್ವ ಪರಿಸರ ದಿನದ ಅಂಗವಾಗಿ ಮೂರು ಹಂತದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


ಕಾರ್ಯಕ್ರಮವನ್ನು ನಾಗನೂರ ಗ್ರಾಮದ ಪ್ರಗತಿಪರ ರೈತ ಶ್ರೀ ಶಿವಲಿಂಗಪ್ಪ ತೋರಣಗಟ್ಟಿ ಉದ್ಘಾಟಿಸಿದರು. ಪರಿಸರದ ಕುರಿತು ಉಪನ್ಯಾಸ ನೀಡಿದ ಎಸ್. ಎಮ್. ವಾರದ, ವಿಜ್ಞಾನಿ (ಮಣ್ಣು ವಿಜ್ಞಾನ), ಪರಿಸರ ಮರುಸ್ಥಾಪನೆಯನ್ನು ಉತ್ತೇಜಿಸಲು ಪ್ರತಿವರ್ಷ ವಿಶೇಷ ಘೋಷವಾಕ್ಯದೊಂದಿಗೆ ಜೂನ್ 5 ರಂದು ವಿಶ್ವದಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. 2024 ರಲ್ಲಿ ಪರಿಸರ ದಿನವನ್ನು ಭೂ ಮರುಸ್ಥಾಪನೆ, ಮರುಭೂಮಿಕರಣವನ್ನು ತಡೆಯುವುದು ಮತ್ತು ಹವಾಮಾನ ಸೂಕ್ತ ಕ್ರಮಗಳನ್ನು ನಿರ್ಮಿಸುವುದರ ಮೇಲೆ ಕೇಂದ್ರಿಕರಿಸಿ ಆಚರಿಸಲಾಗುತ್ತಿದೆ. ದೇಶದಲ್ಲಿ ಮಣ್ಣಿನ ಸವಕಳಿ/ಭೂಮಿಯ ಅವನತಿಯು ಮರುಭೂಮಿಯ ನಿರ್ಮಾಣದತ್ತ ಸಾಗುತ್ತಿದೆ ಮತ್ತು ಕೃಷಿ ಉತ್ಪಾದನಾ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ದೊಡ್ಡ ಅಪಾಯವನ್ನುಂಟುಮಾಡುತ್ತಿದೆ. ಇದರ ಹೊರತಾಗಿ ಹವಾಮಾನ ವೈಪರೀತ್ಯದಿಂದ ಹಾಗೂ ಬರದ ಸಮಸ್ಯೆಗಳು ಉಲ್ಬಣವಾಗಿ ಅಧಿಕ ಆಹಾರ ಉತ್ಪಾದನೆಗೆ ಸವಾಲು ಹಾಕುತ್ತಿವೆ.

ಈ ಹಿನ್ನಲೆಯಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿಯು ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಪರಿಸರದ ರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಮೂರು ಹಂತಗಳಲ್ಲಿ ದೇಶದಾದ್ಯಂತ ಸಸಿ ನೆಡುವ ಅಭಿಯಾನವನ್ನು ಆಯೋಜಿಸಿ ಅನುಷ್ಠಾನಗೊಳಿಸುತ್ತಿದೆ. ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಕೈಗೊಳ್ಳುವ ಮೂಲಕ ದೇಶಾದ್ಯಂತ ಮೊದಲ ಹಂತದ ಸಸಿ ನೆಡುವ ಅಭಿಯಾನವನ್ನು ಪರಿಸರ ದಿನದಂದು (ಜೂನ್ 5 ರಂದು) ಜಾರಿಗೊಳಿಸಲಾಗಿದೆ.

ಎರಡನೇ ಹಂತವು ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಸಂಸ್ಥಾಪನಾ ದಿನದಂದು ಬರುವ ಜುಲೈ 16 ರಂದು ನಡೆಯಲಿದೆ ಮತ್ತು ರೈತರ ಹೊಲಗಳಲ್ಲಿ ನಾಟಿ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತದೆ. ಅದೇರೀತಿ, ಮೂರನೇ ಹಂತವನ್ನು ಆಗಷ್ಟ್ 15 ರಂದು ಸ್ವಾತಂತ್ರ್ಯ ದಿನದಂದು ಕೆವಿಕೆ ವ್ಯಾಪ್ತಿಯ ಗ್ರಾಮಗಳ ಸಮುದಾಯ ಪ್ರದೇಶಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.

ಮೊದಲ ಹಂತದ ಸಸಿ ನೆಡುವ ಜಾಗೃತಿ ಕಾರ್ಯಕ್ರಮದ ಅಂಗವಾಗಿ, ಪರಿಸರ ದಿನದಂದು ಕೆವಿಕೆ ಆವರಣದಲ್ಲಿ ಸುಮಾರು 250 ಬೇವು ಮತ್ತು ಮಹಾಗಣಿ ಜಾತಿಯ ಗಿಡಗಳನ್ನು ನೆಡಲಾಯಿತು ಮತ್ತು ಭಾಗವಹಿಸಿದ ರೈತರು/ರೈತ ಮಹಿಳೆಯರಿಗೆ ಅವರ ನಿವಾಸದ ಹಿತ್ತಲಿನಲ್ಲಿ ನೆಡಲು 100 ಸಸಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ನೇತೃತ್ವವನ್ನು ವಿಜ್ಞಾನಿ (ತೋಟಗಾರಿಕೆ) ಪ್ರವೀಣ ಯಡಹಳ್ಳಿ ವಹಿಸಿದ್ದರು. ಜಿ. ಬಿ. ವಿಶ್ವನಾಥ, ವಿನೋದ ಕೋಚಿ, ಶಂಕರಗೌಡ ಪಾಟೀಲ, ಮಂಜುನಾಥ ಪಿ. ಐ. ಮತ್ತು ಹತ್ತಿರದ ಗ್ರಾಮಗಳ 100 ರೈತರು/ರೈತ ಮಹಿಳೆಯರು ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.