Belagavi News In Kannada | News Belgaum

ವೃತ್ತಿ- ಪ್ರವೃತ್ತಿಗಳನ್ನು ಮೇಳೈಸಿ ಸಾಧನೆಗೈದ ಬಹುಮುಖ ವ್ಯಕ್ತಿತ್ವದ ಹಿರೀಯ ಸಂಗೀತಗಾರ ಸುರೇಶ ಸರದೇಸಾಯಿ

ವೃತ್ತಿ- ಪ್ರವೃತ್ತಿಗಳನ್ನು ಮೇಳೈಸಿ ಸಾಧನೆಗೈದ
ಬಹುಮುಖ ವ್ಯಕ್ತಿತ್ವದ ಹಿರೀಯ ಸಂಗೀತಗಾರ
ಸುರೇಶ ಸರದೇಸಾಯಿ : ಅನಂತ ಪಪ್ಪು

ಸಂಗೀತ ಒಂದು ವಿಶೇಷವಾದ ಕಲೆ. ಅದು ಅನಂತವಾದುದು. ಸಾಗರದಷ್ಟು ಆಳ ಅಗಲ ಹಾಗೂ ಆಗಸದಷ್ಟು ವಿಶಾಲವಾಗಿದೆ. ಸಂಗೀತ ಜ್ಞಾನ ಸುಲಭವಾಗಿ ಎಲ್ಲರಿಗೂ ಲಭಿಸುವಂತದ್ಧಲ್ಲ. ಸಂಗೀತ ಜ್ಞಾನದ ಸಿದ್ಧಿಗೆ ತಪಸ್ಸೆ ಮಾಡಬೇಕಾಗುತ್ತದೆ. ಸಂಗೀತವನ್ನು ಶ್ರದ್ದೆ ಮತ್ತು ನಿಷ್ಠೆ ಹಾಗೂ ಭಕ್ತಿಯಿಂದ ಕಲಿತು ಅಭ್ಯಾಸ ಮಾಡುವವರು ಮಾತ್ರ ಸಂಗೀತ ವಿದ್ವಾಂಸರೆನಿಸಿಕೊಳ್ಳುತ್ತಾರೆ.
ನಮ್ಮಲ್ಲಿ ಸಂಗೀತ ಕಲಿಯುವ, ಕಲಿಸುವ ವ್ಯವಸ್ಥೆ ಪರಂಪರಾಗತವಾಗಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಅನೇಕ ದಿಗ್ಗಜರು ಪ್ರಾತ:ಸ್ಮರಣೀಯರಾಗಿದ್ದಾರೆ. ಅಂತವರ ಸಾಲಿನಲ್ಲಿ ಪಂ.ಟಿ.ಎ.ಗುರವ, ಪಂ.ಆರ್.ಕೆ.ಬೊಜಾಪುರೆ, ಪಂ.ಬಿ.ವಿ.ಕಡ್ಲಾಸ್ಕರ, ಪಂ.ನಾರಯಣ ಚಿಕ್ಕೋಡಿಕರ, ಪಂ.ಮನಮೋಹನ ಕುಂಬಾರೆ ಮುಂತಾದವರಿದ್ದು, ಇವರ ಸಂಗೀತ ಪರಂಪರೆಯ ಗರಡಿಯಲ್ಲಿ ಮೂಡಿಬಂದ ಮತ್ತೊಬ್ಬ ಸಂಗೀತಗಾರ ಸುರೇಶ ಶಂಕರರಾವ್ ಸರದೇಸಾಯಿ.

ಸುರೇಶ ಸರದೇಸಾಯಿ. ವೃತ್ತಿಯಿಂದ ಇಂಜನೀಯರ್ ಆಗಿದ್ದು ಪ್ರವೃತ್ತಿಯಿಂದ ಸಂಗೀತಗಾರರಾಗಿದ್ದಾರೆ. ಇವರು ತಬಲಾ ವಾದನ, ಹಾರ್ಮೋನೊಯಂ ವಾದನ, ಗಾಯನ ಈ ಮೂರರಲ್ಲೂ ಪ್ರಾವಿಣ್ಯತೆಯನ್ನು ಹೊಂದಿದ್ದು ಇಂಥ ಬಹುಮುಖ ವ್ಯಕ್ತಿತ್ವದ ಕಲಾವಿದನ ಬದುಕು-ಸಾಧನೆ ಕುರಿತಾಗಿ ಒಂದು ಕಿರು ಪಕ್ಷಿನೋಟ ಲೇಖನಿ ಮೂಲಕ ನೀಡುವ ಪ್ರಯತ್ನ ನನ್ನದು.
ಸುರೇಶ ಸರದೇಸಾಯಿ 22 ಜುಲೈ 1962 ರಂದು ಪಾಶ್ಚಾಪುರದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಂದೆ ಶಂಕರರಾವ್ ರೈಲ್ವೆ ನೌಕರರಾಗಿದ್ದರು. ತಾಯಿ ಸುಲೋಚನಾ ಸಂಗೀತದಲ್ಲಿ ತುಂಬಾ ಆಸಕ್ತಿ ಇಟ್ಟುಕೊಂಡವರು.
ತಾಯಿ ಸುಲೋಚನಾ ಮನೆಯಲ್ಲಿ ದೇವರ ಹಾಡುಗಳನ್ನು ಲಯಬದ್ಧವಾಗಿ ಹಾಡುತ್ತಿದ್ದರು. ಅದನ್ನು ತದೇಕ ಚಿತ್ತದಿಂದ ಆಲಿಸುತ್ತಿದ್ದ ಸುರೇಶ ಸರದೇಸಾಯಿ ಅವರಿಗೆ ಸಹಜವಾಗಿಯೇ ಚಿಕ್ಕಂದಿನಿಂದ ಸಂಗೀತದಲ್ಲಿ ಆಸಕ್ತಿ ಬೆಳೆಯಿತು. ಹೀಗಾಗಿ ತಾಯಿಯೇ ಸಂಗೀತದ ಮೊದಲ ಗುರುವಾಗಿದ್ದು, ಸಂಗೀತವು
ಸರದೇಸಾಯಿ ಅವರಿಗೆ ತಾಯಿಯಿಂದ ಬಳುವಳಿಯಾಗಿ ಬಂದ ಕೊಡುಗೆಯಾಗಿದೆ.
ಶಾಲಾದಿನಗಳಲ್ಲಿ ತನ್ನ ಓದಿನ ಜೊತೆಯಲ್ಲಿ ಸಂಗೀತದಲ್ಲೂ ಅಪಾರ ಆಸಕ್ತಿಯನ್ನು ಹೊಂದಿದ್ದ ಸರದೇಸಾಯಿ ಆಟಗಳಲ್ಲೂ ಮುಂದಿದ್ದರು. ಸುರೇಶ ಸರದೇಸಾಯಿ ಪ್ರಾಥಮಿಕ ಶಿಕ್ಷಣವನ್ನು ಪಾಶ್ಚಾಪುರದಲ್ಲಿ ಮುಗಿಸಿ ಪ್ರೌಢ ಶಿಕ್ಷಣಕ್ಕಾಗಿ ಬೆಳಗಾವಿಗೆ ಆಗಮಿಸಿದರು.
ತಮ್ಮ ವಿದ್ಯಾಭ್ಯಾಸದ ಜೊತೆಯಲ್ಲಿ ಸಂಗೀತಾಭ್ಯಾಸವನ್ನು ಜೊತೆ ಜೊತೆಯಾಗಿ ಪ್ರಾರಂಭಿಸಲು ನಿಶ್ಚಯಿಸಿದ ಸರದೇಸಾಯಿ ಬೆಳಗಾವಿಯಲ್ಲಿ ಕಿರಾಣಾ ಘರಾಣೆಯ ಸಂಗೀತವನ್ನು ಮೈಗೂಡಿಸಿಕೊಂಡಿದ್ದ ಹೆಸರಾಂತ ಸಂಗೀತಗಾರ ಪಂ.ತಮ್ಮಣ್ಣ ಗುರವ ಅವರ ಹತ್ತಿರ ತಬಲಾ, ಹಾರ್ಮೋನಿಯಂ, ಗಾಯನ ಪ್ರಾಥಮಿಕ ಸಂಗೀತ ಅಭ್ಯಾಸವನ್ನು 8 ವರ್ಷಗಳ ಮಾಡಿದರು.
10ನೇ ತರಗತಿಯಲ್ಲಿರುವಾಗಲೇ ಬೆಳಗಾವಿ ಆರ್ಟ ಸರ್ಕಲ್ ಹಮ್ಮಿಕೊಳ್ಳುವ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಸಿ ಹಾರ್ಮೋನಿಯಂ ವಾದನದಲ್ಲಿ ಸತತ ಮೂರು ವರ್ಷಗಳ ಕಾಲ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಪ್ರಾಥಮಿಕ ಸಂಗೀತ ಅಭ್ಯಾಸವನ್ನು ಪಂ.ತಮ್ಮಣ್ಣ ಗುರವ ಅವರಲ್ಲಿ ಕಲಿತಾಗಿತ್ತು. ಹೆಚ್ಚಿನ ಸಂಗೀತ ಅಭ್ಯಾಸವನ್ನು ನಾರಾಯಣರಾವ್ ಚಿಕ್ಕೋಡಿಕರ್ ಅವರಲ್ಲಿ 6 ವರ್ಷಗಳ ಕಾಲ ತಬಲಾ ವಾದನ ಅಭ್ಯಾಸ ಮಾಡುತ್ತಲೇ ವಾರಕ್ಕೊಮ್ಮೆ ಪಂ.ರಾಮಬಾವು ಬಿಜಾಪುರೆ ಅವರಲ್ಲಿ ಹಾರ್ಮೋನಿಯಂ ವಾದನ ಕಲೆಯಲು ಹೋಗಿದ್ದು ಉಂಟು.
ಕಲಿಕೆ ನಿರಂತರ ಎನ್ನುವಂತೆ ಪಂ.ಬಿ.ವಿ.ಕಡ್ಲಾಸ್ಕರ ಅವರಲ್ಲಿ ಗಾಯನ ಹಾಗೂ ಭಜನೆ ಕಲೆಯುವ ಮೂಲಕ ಹಿಂದುಸ್ಥಾನಿ ರಾಗ ಹಾಗೂ ಅವುಗಳ ವಿಸ್ತಾರ ಕುರಿತಾದ ಆಳ ಅಭ್ಯಾಸ ಮಾಡಿದ ಸರದೇಸಾಯಿ ಪಾಂಡಿತ್ಯ ಪೂರ್ಣತೆಯೊಂದಿಗೆ ಸಂಗೀತದ ಹೊಸ ಹೊಸ ಆಯಾಮುಗಳನ್ನು ಕರಗತ ಮಾಡಿಕೊಂಡು ಓರ್ವ ಪರಿಪೂರ್ಣ ಸಂಗೀತಗಾರರಾಗಿ ಹೊರಹೊಮ್ಮಿದ್ದಾರೆ.

ಗಂಧರ್ವ ಮಹಾವಿಧ್ಯಾಲಯದಿಂದ ಸಂಗೀತ ಪದವಿಯನ್ನು ಪಡೆದಿರುವ ಸರದೇಸಾಯಿ, ಇವರ ಶಾಸ್ತ್ರಬದ್ಧ ಸಂಗೀತಕ್ಕೆ ತಲೆದೂಗದವರಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು.
ಸಂಗೀತಗಾರರಲ್ಲಿ ಕಲಿಕೆಯ ಬುನಾದಿ ಭದ್ರವಾಗಿರಬೇಕು ಮಹಾನ್ ಗುರುವಿನ ಮಾಗ್ದರ್ಶನ ಹಾಗೂ ವಿಧ್ಯಾರ್ಥಿಯ ಪರಿಶ್ರಮವು ಬಹಳ ಮುಖ್ಯ ಪಾತ್ರವಹಿಸುತ್ತದೆ ಎಂದು ಹೇಳುವ ಸರದೇಸಾಯಿ, ಈ ಅಂಶಗಳನ್ನೊಳಗೊಂಡ ನಿರಂತರ ಸುದೀರ್ಘ ಪಯಣವೇ ಸಾಧನೆಯ ಗುರಿಯಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ ಎನ್ನುತ್ತಾರೆ.
ಸಂಗೀತದ ಜೊತೆಗೆ ಶಿಕ್ಷಣವನ್ನು ಮುಂದುವರೆಸಿದ ಸುರೇಶ ಸರದೇಸಾಯಿ ಬಿ.ಇ (ಇಲೆಕ್ಟ್ರಿಕಲ್) ಪದವಿ ಪಡೆದು ಉಗಾರ ಶುಗರ್ಸ್ ಫ್ಯಾಕ್ಟರಿಯಲ್ಲಿ ಇಂಜನೀಯರ್ ಆಗಿ ಸೇವೆಗೆ ಸೇರಿಕೊಳ್ಳುತ್ತಾರೆ. ಯಾಂತ್ರಿಕತೆ ಕ್ಷೇತ್ರದಲ್ಲಿಯೂ ಮೂಡಿಸಿರುವ ಇವರ ಕ್ರಿಯಾಶೀಲತೆ ಛಾಪು ಹಿರಿದಾಗಿದ್ದು, ಇವರು ಸಾಧನೆ ಮಾಡುವಲ್ಲಿ ಹಿಂದಿರುವ ಪರಿಶ್ರಮಗಳು ಕಾಣದ ಬೆಟ್ಟದಂತೆ ಎನಿಸದೆ ಇರದು.
ಆಗ ಊಗಾರ ಶುಗರ್ಸ್ ಫ್ಯಾಕ್ಟರಿಯಲ್ಲಿ ಪ್ರತಿ ದಿನಕ್ಕೆ ಕೇವಲ 3000 ಟನ್ ಕಬ್ಬನ್ನು ಅರಿಯುತ್ತಿದ್ದದನ್ನು 15000 ಟನ್ ಹೆಚ್ಚಿಸುವ ಯೋಜನೆಯ ತಂಡದ ಮುಂದಾಳತ್ವದಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಶಸ್ವಿಯಾಗುತ್ತಾರೆ.
ಯಾವುದೇ ಕ್ಷೇತ್ರವಿರಲಿ ಹೊಸದನ್ನು ಹುಡುಕುವ ಇವರ ಹವ್ಯಾಸ ಮುಂದುವರೆದು ಶುಗರ್ಸ್ ಫ್ಯಾಕ್ಟರಿಗಳಲ್ಲಿ ಕಬ್ಬನ್ನು ನುರಿಸಿದ ನಂತರ ಉಳಿದ ಕಸ, ಸಿಪ್ಪೆಗಳಿಂದ ವಿದ್ಯುತ್‍ನ್ನು ತಯಾರಿಸುವ ಯೋಜನೆಯ ತಂಡದ ಮುಂದಾಳತ್ವ ವಹಿಸಿದ ಸರೇಶ ಸರದೇಸಾಯಿ ಕಸದಿಂದ ರಸ ಎಂಬಂತೆ 44ಮ್ಯೆಗಾ ವ್ಯಾಟ ವಿದ್ಯುತ್‍ನ್ನು ಉತ್ಪಾದಿಸುವಲ್ಲಿ ಯಶಸ್ವಿಯಾಗುತ್ತಾರೆ. ಈ ಮಹತ್ವದ ಇವರ ಯೋಜನೆ, ಕಬ್ಬಿನ ಸಿಪ್ಪೆಯಿಂದ ವಿದ್ಯುತ್ ತಯಾರಿಸಿದ ಕರ್ನಾಟಕದ ಮೊಟ್ಟ ಮೊದಲ ಉಗಾರ ಶುಗರ್ಸ್ ಫ್ಯಾಕ್ಟರಿ ಎಂಬ ಕೀರ್ತಿಗೆ ಪಾತ್ರವಾಗುತ್ತದೆ. ಅಷ್ಟೇ ಅಲ್ಲ ಫ್ಯಾಕ್ಟರಿಯಲ್ಲಿ ತಯಾರಿಸಿದ ವಿದ್ಯುತ್‍ನ್ನು ಮಾರುವ ಯೋಜನೆಯನ್ನು ಹಮ್ಮಿಕೊಂಡು ಅಂತರರಾಜ್ಯಗಳಿಗೆ ವಿದ್ಯುತ್‍ನ್ನು ಮಾರುವ ಮೂಲಕ ಊಗಾರ್
ಶುಗರ್ಸ್, ಇವರಿಗೆ ಆದಾಯವನ್ನು ಹೆಚ್ಚಿಸಿಕೊಟ್ಟು ಫ್ಯಾಕ್ಟರಿ ಆಡಳಿತ ಮಂಡಳಿಯ ಪ್ರಶಂಸೆಗೆ ಪಾತ್ರರಾಗುತ್ತರೆ.
ಇದನ್ನು ಗಮನಿಸಿದ ಕರ್ನಾಟಕ ಸರ್ಕಾರ ಶುಗರ್ ಫ್ಯಾಕ್ಟರಿ ಪ್ರಾರಂಭಿಸುವ ಅನುಮತಿಗೆ ಬರುವ ಪ್ರಸ್ತಾವನೆಗಳಲ್ಲಿ ತಮ್ಮ ಫ್ಯಾಕ್ಟರಿಯಲ್ಲಿಯೇ ವಿದ್ಯುತ್‍ನ್ನು ತಯಾರಿಸಿಕೊಳ್ಳುವ ಷರತ್ತನ್ನು ವಿಧಿಸುತ್ತದೆ. ಅಂತ: ಹೊಸದಾಗಿ ಆರಂಭವಾಗುವ ಶುಗರ್ಸ್ ಫ್ಯಾಕ್ಟರಿಗಳಿಗೆ ಭೇಟಿಕೊಟ್ಟು ಸಮಾಲೋಚಕರಾಗಿ ಕಾರ್ಯ ಪ್ರಾರಂಭಿಸಿ ಯಶಸ್ವಿಯಾಗುತ್ತಾರೆ.
ವೃತ್ತಿ ಜೀವನದ ನಡುವೆ ಪ್ರವೃತ್ತಿಯ ತುಡಿತ ಇದ್ದೇ ಇರುತ್ತದೆ. ಇದಕ್ಕೆ ಸಮಯ ಹೊಂದಿಸಿಕೊಳ್ಳಲು ಯೋಚನೆ-ಯೋಜನೆ ಇರಬೇಕಾಗುತ್ತದೆ. ಓದು-ಬರವಣಿಗೆ, ಸಂಗೀತ ಹೀಗೆ ಹಲವಾರು ರೀತಿಯ ಮನಸ್ಸಿಗೆ ಮುದ ನೀಡುವ ಪ್ರವೃತ್ತಿಗಳು ಇರುತ್ತವೆ. ಅವು ಮನುಷ್ಯನ ಮನೋವಿಕಾಸಕ್ಕೆ ಇರಬೇಕಾದುದು ಅಗತ್ಯ ಕೂಡ. ಉತ್ತಮ ಹವ್ಯಾಸಗಳಿಂದ ವೃತ್ತಿಯಲ್ಲಿ ಆಸಕ್ತಿಯೂ ಹೆಚ್ಚಾಗುತ್ತದೆ. ಹೀಗಾಗಿ ಸಾಧನೆಗೆ ಸೇತುವೆ ಮಾಡಿಕೊಂಡ ಸುರೇಶ ಸರದೇಸಾಯಿ ವೃತ್ತಿ ಹಾಗೂ ಪ್ರವೃತ್ತಿ ಎರಡರಲ್ಲೂ ಸಾದನೆಗೈದು ವೃತಿ ಮತ್ತು ಪ್ರವೃತ್ತಿಗಳ ನಡುವೆ ಸಮನ್ವಯ ಸಾಧಿಸಿ ಜೀವನವನ್ನು ರಸಮಯಮಾಡಿಕೊಂಡಿದ್ದಾರೆ
ಹಿಂದುಸ್ಥಾನಿ ಸಂಗೀತದ ಕಿರಾಣಾ ಘರಾಣೆಯ ಶೈಲಿಯ ಸಂಗೀತದ ರಸದೌತಣವನ್ನು ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ನಾಡಿನ ಉದ್ದಗಲಕ್ಕೂ ಉಣಬಡಿಸಿದ ಮಹಾನ್ ಸಂಗೀತಗಾರ ಸುರೇಶ ಸರದೇಸಾಯಿ ತಬಲಾ ವಾದನ , ಹಾರ್ಮೋನಿಂ ವಾದನ ಹಾಗೂ ಗಾಯನ ಮೂರರಲ್ಲೂ ಸಾಧನೆ ಮಾಡುವ ಮೂಲಕ ಪ್ರಾವಿಣ್ಯತೆಯನ್ನು ಹೊಂದಿದ್ದು, ನಾಡಿನ ಹೆಸರಾಂತ ಹಿರೀಯ ಸಂಗೀತ ಕಲಾವಿದರಾದ ಪಂ.ಭೀಮಸೇನ ಜೋಶಿ, ಪಂ.ಮಾಧವ ಗುಡಿ, ಪಂ.ಅನಂತ ತೇರದಾಳ. ಪಂ.ಅಪ್ಪಾಸಾಹೇಬ ದೇಶಪಾಂಡೆ, ವಿಧುಷಿ ಮಂಗಲಾತಾಯಿ ಜೋಶಿ, ಪಂ.ಕಣೆಬುವಾ (ಇಚಲಕರಂಜಿ) ಸೇರಿದಂತೆ ಮುಂತಾದವರಿಗೆ ತಬಲಾ ಹಾಗೂ ಹಾರ್ಮೋನಿಯಂ ಸಾತ ನೀಡುವ ಮೂಲಕ ಹಿರೀಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಇವರ ಸಾಧನೆ ಗುರುತಿಸಿದ ಈ-ಟಿವಿ ಚಾನೆಲ್ ಇವರು 2006-07ರಲ್ಲಿ ಎಸ್.ಪಿ.ಬಾಲಸುಭ್ರಣ್ಯಂ ಅವರ ನೇತ್ರತ್ವದ “ಎದೆ ತುಂಬಿ ಹಾಡುವೆನು” ಎಂಬ ಜನಪ್ರೀಯ ಕಾರ್ಯಕ್ರಮಕ್ಕೆ ನಿರ್ಣಾಯಕರನ್ನಾಗಿ ಅಹ್ವಾನಿಸಿದೆ.
ಸುರೇಶ ಸರದೇಸಾಯಿ ಅವರ ಮಾರ್ಗದರ್ಶನದೊಂದಿಗೆ ಅವರ ಶಿಷ್ಯರಾದ ಶ್ರೀ.ಮನೋಹರ್ ಕೋಕಟನೂರ ಇವರು ಈ-ಟಿವಿಯ “ಎದೆ ತುಂಬಿ ಹಾಡುವೆನು “ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂತಿಮ ಸುತ್ತಿನಲ್ಲಿ ಬಹುಮಾನ ಗಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಮ್ಮಿಕೊಳ್ಳುವ ರಾಜ್ಯಮಟ್ಟದ “ಪ್ರತಿಭಾ ಕಾರಂಜಿ” ಕಾರ್ಯಕ್ರಮದಲ್ಲಿ ಅವರ ಶಿಷ್ಯೆ ಕು.ಅನಘಾ ಕುಲಕರ್ಣಿ, ಭಕ್ತಿಗೀತೆ ವಿಭಾಗದಲ್ಲಿ ಸತತ ಎರಡು ವರ್ಷಗಳ ಕಾಲ ಅಂತಿಮ ಸುತ್ತಿನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಹೇಳುವ ಇವರು ಕು.ಪಾವನಿ ಬರ್ವೆ, ಕು.ಅತ್ರೆ ಭಟ್, ಕು.ಸ್ನೇಹಾ ಶ್ರೀಮತಿ ಅರ್ಚನಾ ದೇಶಪಾಂಡೆ ಸೇರಿದಂತೆ ಮುಂತಾದ ಶಿಷ್ಯರ ಹೆಸರುಗಳನ್ನು ಹೆಮ್ಮೆಯಿಂದ ಹೇಳುತ್ತಾರೆ.
ಇಂಜನೀಯರಿಂಗ್ ವೃತ್ತಿಯ ಜೊತೆಗೆ ಸಂಗೀತವನ್ನು ಪ್ರವೃತ್ತಿಯನ್ನಾಗಿ ರೂಡಿಸಿಕೊಂಡು ಬಂದಿರುವ ದೇಸಾಯಿ ಪ್ರತಿ ದಿನ ಐದು ಗಂಟೆಯಾದರೂ ಸಂಗೀತಕ್ಕೆ ಮೀಸಲಿರುಸುವೆ. ಇದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಎನ್ನುತ್ತಾರೆ. ಗಾಯನ ವಾದನಗಳಲ್ಲಿ ಮುಂಚುಣಿಯಲ್ಲಿರುವ ಇವರು ನಾದಜಗತ್ತಿನಲ್ಲಿ ವಿಹರಿಸುವ ಸಹೃದಯರಿಗೆ ಹೊಸತನವನ್ನು ಕೊಡುವದರಲ್ಲಿ ಸಂದೇಹವಿಲ್ಲ. ಸಾತಿ ವಾದ್ಯಗಳಾದ ತಬಲಾ, ಹಾರ್ಮೋನಿಯಂ, ಗಳಲ್ಲಿ ಮೂಡಿಸಿರುವ ಇವರ ಹೆಜ್ಜೆಗುರುತು ವಿಶಿಷ್ಟವಾಗಿವೆ.
ಇವರ ಗಾಯನ, ವಾದನಗಳಲ್ಲೂ ಮಿಂಚಿನ ಸೆಳೆತವಿದೆ. ಆಕರ್ಷಕ ಕಂಠ, ಸ್ವರವಿಸ್ತಾರದಲ್ಲಿ ನೈಪುಣ್ಯತೆ, ಅದ್ಭುತ ಉಸಿರು ನಿಯಂತ್ರಣ ಸಾಮಥ್ರ್ಯ, ತಾರಕ, ಅತಿತಾರಕ ಸ್ಥಾಯಿಗಳಲ್ಲಿ ಲೀಲಾಜಾಲವಾಗಿ ಹೊರಹೊಮ್ಮುವ ಸ್ವರ, ಆಕಾರಗಳಿಂದ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿರುವ ಸರದೇಸಾಯಿ ಅವರನ್ನು ಹುಡುಕಿಕೊಂಡು ಬಂದ ಪ್ರಶಸ್ತಿ ಪುರಸ್ಕಾರಗಳು ಅನೇಕ. ಎಲೆಯ ಮರೆಯ ಕಾಯಿಯಂತಿರುವ ಇವರು ಪ್ರಚಾರ ಪ್ರೀಯರಲ್ಲ.
ಇತ್ತೀಚೆಗೆ ಹಿರಿಯ ಸಂಗೀತಗಾರ ಸುರೇಶ ಸರದೇಸಾಯಿ ಇವರು ವೃತ್ತಿಯಿಂದ ನಿವೃತ್ತಿ ಹೊಂದಿದ್ದು, ದಣೀವರಿಯದ ಜೀವಿ. ಪತ್ನಿ ಕೀರ್ತಿ ಸರದೇಸಾಯಿ ಮಗ ನಿನಾದ ಜೊತೆಯಲ್ಲಿ ಈಗ ಬೆಳಗಾವಿಯಲ್ಲಿ ವಾಸಿಸುತ್ತಿದ್ದಾರೆ.
ಪತ್ನಿ ಕೀರ್ತಿ ಸರದೇಸಾಯಿ ಅವರು ಕೂಡ ಸಂಗೀತಗಾರರಾಗಿದ್ದು, ಕರ್ನಾಟಕ ವಿಶ್ವವಿಧ್ಯಾಲಯದಿಂದ ಎಂ.ಎ ಮ್ಯೂಸಿಕ್ ಪದವಿಯನ್ನು ಪಡೆದಿದ್ದಾರೆ.
ತಮ್ಮ ಜೀವನದಲ್ಲಿ ಹತ್ತರಗಿ ಹರಿಮಂದಿರ ಗೋಸಾವಿ ಮಠಾದೀಶರ ಆಶೀರ್ವಾದ ಅನುಗ್ರಹ ಮುಖ್ಯಪಾತ್ರ ವಹಿಸಿದ್ದು, ಅದರಂತೆ ಊಗಾರ್ ಶುಗರ್ಸ್‍ನ ಶಿರಗಾಂವಕರ ಬಂಧುಗಳ ಬೆಂಬಲ ನನ್ನ ಬದುಕಿನ ಬದಲಾವಣೆಗೆ ನಾಂದಿಯಾಗಿದೆ ಎಂಬುದನ್ನು ಸುರೇಶ ಸರದೇಸಾಯಿ ಸ್ಮರಿಸುತ್ತಾರೆ.
ಕಿರಾಣಾ ಘರಾಣೆಯ ಮೇರು ಪ್ರತಿಭೆ ಹಿರೀಯ ಸಂಗೀತಗಾರ ಸುರೇಶ ಸರದೇಸಾಯಿ ಅವರದು ಸರಳ ಸಜ್ಜನಿಕೆಯ ವ್ಯಕ್ತಿತ್ವ ಸಂಗೀತವನ್ನು ಉಸಿರಾಗಿಸಿಕೊಂಡವರು ಸಂಗೀತಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದು, ಸಂಗೀತದ ಉದಾತ್ತ ಪರಂಪರೆಯನ್ನು ತಮ್ಮ ನಂತರದ ತಲೆಮಾರಿಗೆ ದಾಟಿಸಲು ಶಿಷ್ಯ ಮಂಡಳಿಯನ್ನು ಹೊಂದಿದ್ದು, ಆಸಕ್ತಿಯಿಂದ ಸಂಗೀತ ಕಲಿಯಲು ಬರುವ ವಿದ್ಯಾಥಿಗಳಿಗೆ ತಬಲಾ, ಹಾರ್ಮೋನಿಂ, ಗಾಯನ ಇವುಗಳನ್ನು ಖುಶಿಯಿಂದ ಕಲಿಸಿಕೊಡುತ್ತಿದ್ದಾರೆ. ಇವರು ಸಂಗೀತ ಹೇಳಿಕೊಡುವ ಶೈಲಿ ಅನನ್ಯವಾಗಿದೆ. ಸಂಗೀತದ ಜೊತೆಗೆ ಸಂಸ್ಕಾರವನ್ನು ಕಲಿಸಿಕೊಡುವ ರೀತಿ ವಿಶೇಷವಾಗಿದೆ. ಸಂಸ್ಕಾರವಿದ್ದರೆ ಸಮಾಜದಲ್ಲಿ ಮಕ್ಕಳು ಚನ್ನಾಗಿ ಬಾಳುತ್ತಾರೆ ಎನ್ನುತ್ತಾರೆ.

ಅನಂತ ಪಪ್ಪು