Belagavi News In Kannada | News Belgaum

ಪವರ್‌ ಟಿವಿ ಪ್ರಸಾರ ಸ್ಥಗಿತಕ್ಕೆ ಕರ್ನಾಟಕ ಹೈಕೋರ್ಟ್‌ ಆದೇಶ

ಬೆಂಗಳೂರು: ಪರವಾನಗಿ ನವೀಕರಿಸದ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಸುದ್ದಿ ವಾಹಿನಿ ಪವರ್‌ ಟಿವಿ ಕೂಡಲೇ ತನ್ನೆಲ್ಲಾ ಕಾರ್ಯಕ್ರಮಗಳ ಪ್ರಸಾರ ಸ್ಥಗಿತಗೊಳಿಸಬೇಕೆಂದು ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ..

ಕೇಂದ್ರ ವಲಯದ ಐಜಿ ಬಿಆರ್‌ ರವಿಕಾಂತೇಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌ಎಂ ರಮೇಶ್‌ ಗೌಡ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎಸ್‌ಆರ್‌ ಕೃಷ್ಣಕುಮಾರ್‌ ಅವರಿದ್ದ ಏಕಸದಸ್ಯ ಪೀಠ, ಈ ಮಹತ್ವದ ಆದೇಶ ನೀಡಿದೆ. ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್‌ಗಳ (ನಿಯಂತ್ರಣ) ಕಾಯಿದೆ – 1995ರ ಆದೇಶ ಉಲ್ಲಂಘಿಸಿರುವ ಕಾರಣ ತಕ್ಷಣದಿಂದಲೇ ತಮ್ಮ ಚಾನೆಲ್‌ನಲ್ಲಿ ಸುದ್ದಿಗಳೂ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ಜುಲೈ 8ರವರೆಗೆ ಪ್ರಸಾರ ಮಾಡಬಾರದು, ಎಂದು ಕರ್ನಾಟಕ ಹೈಕೋರ್ಟ್‌ ಕಟ್ಟಪ್ಪಣೆ ನೀಡಿದೆ.

ಪ್ರಕರಣದ ಪ್ರತಿವಾದಿಯಾದ ಪವರ್‌ ಟಿವಿಯ ಮಾತೃ ಸಂಸ್ಥೆ ಮೆಸರ್ಸ್‌ ಪವರ್‌ ಸ್ಮಾರ್ಟ್‌ ಮೀಡಿಯಾ ಪ್ರೈವೆಟ್‌ ಲಿಮಿಟೆಡ್‌ ಕಂಪನಿಯ ಪ್ರತಿನಿಧಿಯಾಗಿರುವ ಹೆಚ್ಚುವರಿ ನಿರ್ದೇಶಕ ರಾಕೇಶ್‌ ಸಂಜೀವ ಶೆಟ್ಟಿ ಅಲಿಯಾಸ್‌ ರಾಕೇಶ್‌ ಶೆಟ್ಟಿಗೆ ಕರ್ನಾಟಕ ಹೈಕೋರ್ಟ್‌ ನಿರ್ದೇಶನ ನೀಡಿ ಆದೇಶ ಹೊರಡಿಸಿತು..

ಅರ್ಜಿದಾರರ ಪರ ಹೈಕೋರ್ಟ್‌ನ ಹಿರಿಯ ವಕೀಲರಾದ ಪ್ರಭುಲಿಂಗ ಕೆ ನಾವಡಗಿ, ಸಂದೇಶ್‌ ಜೆ ಚೌಟ ಹಾಗೂ ಡಿಆರ್‌ ರವಿಶಂಕರ್‌ ವಾದ ಮಂಡಿಸಿ, “ಪ್ರತಿವಾದಿ ರಾಕೇಶ್‌ ಶೆಟ್ಟಿ, ಅರ್ಜಿದಾರರ ವಿರುದ್ಧ ಮಾನಹಾನಿಕರ ಸುದ್ದಿಗಳನ್ನು ಬಿತ್ತರಿಸುತ್ತಿದ್ದಾರೆ. ವಾಸ್ತವದಲ್ಲಿ ಅವರು ಚಾನೆಲ್‌ ಅನ್ನು ಕಾನೂನು ಬಾಹಿರವಾಗಿ ನಡೆಸುತ್ತಿದ್ದಾರೆ. 2021ರಿಂದಲೂ ಚಾನೆಲ್‌ ಪರವಾನಗಿ ನವೀಕರಿಸಿಲ್ಲ,” ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ಈ ಆದೇಶ ಹೊರಡಿಸಿದೆ..

ಪವರ್‌ ಟಿವಿ ವಿರುದ್ಧ ಜೆಡಿಎಸ್‌ನಿಂದ ದೂರು: ಪವರ್ ಟಿವಿ ಮುಖ್ಯಸ್ಥರು ಮತ್ತು ನಿರೂಪಕರಾದ ರಾಕೇಶ್ ಶೆಟ್ಟಿ ಅವರು ಮಾಜಿ ಪ್ರಧಾನ ಮಂತ್ರಿಗಳಾದ ಎಚ್‌ಡಿ ದೇವೇಗೌಡರು, ಕೇಂದ್ರ ಸಚಿವರಾದ ಎಚ್‌ಡಿ ಕುಮಾರಸ್ವಾಮಿ ಹಾಗೂ ಅವರ ಕುಟುಂಬದ ಬಗ್ಗೆ ಪವರ್ ಟಿವಿ ನೇರಪ್ರಸಾರ ಕಾರ್ಯಕ್ರಮದಲ್ಲಿ ಅತ್ಯಂತ ಕೀಳು ಮಟ್ಟದಲ್ಲಿ, ಲಘುವಾಗಿ ಏಕವಚನದಲ್ಲಿ, ಅವಾಚ್ಯ ಶಬ್ದಗಳಿಂದ ಅವಮಾನ ಮಾಡಿ ಮಾತನಾಡಿದ್ದಾರೆ..

ಈ ಹಿನ್ನೆಲೆಯಲ್ಲಿ ಪವರ್‌ ಟಿವಿ ಮುಖ್ಯಸ್ಥರಾದ ರಾಕೇಶ್ ಶೆಟ್ಟಿ ಮತ್ತು ಸಂಸ್ಥೆಯ ಸಿಬ್ಬಂದಿಗಳ ಮೇಲೆ ಸೂಕ್ತವಾದ ಕಾನೂನು ಕ್ರಮ ಜರುಗಿಸಿ, ಈ ಕೂಡಲೇ ಜೆಡಿಎಸ್‌ ಪಕ್ಷದ ನಾಯಕರಾದ ದೇವೇಗೌಡರು ಮತ್ತು ಕುಮಾರಸ್ವಾಮಿ ವಿರುದ್ಧ ಅಪಪ್ರಚಾರ ಮಾಡುವ ಕಾರ್ಯಕ್ರಮ ಪ್ರಸಾರ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಜೆಡಿಎಸ್‌ ಪಕ್ಷದ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ಕುಮಾರ್‌ ಎಸ್‌ಪಿ ಶ್ರೀರಾಂಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.