before post

ತಡೆಯಾಜ್ಞೆ ತೆರವು ಬಳಿಕ ಕಳಸಾ ಬಂಡೂರಿ ಕಾಮಗಾರಿ: ಸಚಿವ ಡಿ.ಕೆ.ಶಿವಕುಮಾರ್

After the disposal of the stay Kalasa-Banduri Nala project Says DK Shivakumar

0 276

ತಡೆಯಾಜ್ಞೆ ತೆರವು ಬಳಿಕ ಕಳಸಾ ಬಂಡೂರಿ ಕಾಮಗಾರಿ:
ಸಚಿವ ಡಿ.ಕೆ.ಶಿವಕುಮಾರ್

ಬೆಳಗಾವಿ, ಕಳಸಾ-ಬಂಡೂರಿ ಕಾಮಗಾರಿಗೆ ಸುಪ್ರೀಂ ಕೋರ್ಟ್ 17-8-2017 ರಂದು ನೀಡಿರುವ ತಡೆಯಾಜ್ಞೆ ತೆರವುಗೊಳಿಸಿ ಮಹದಾಯಿ ನ್ಯಾಯಾಧೀಕರಣ ಹಂಚಿಕೆ ಮಾಡಿರುವ ನೀರು ಬಳಕೆ ಮಾಡಿಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಜಲಸಂಪನ್ಮೂಲ ಇಲಾಖೆಯ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಬುಧವಾರ(ಸೆ.26) ಕಳಸಾ-ಬಂಡೂರಿ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ತನ್ನ ಪಾಲಿನ ಒಟ್ಟಾರೆ 13.42 ಟಿಎಂಸಿ ನೀರು ಬಳಕೆಗೆ ಅಗತ್ಯವಿರುವ ಕಾಮಗಾರಿ ಕೈಗೊಳ್ಳಲು ಸುಪ್ರೀಂ ಕೋರ್ಟ್ ತಡೆಯಾಜ್ಞೆ ತೆರವು ಹಾಗೂ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಪಡೆಯಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ತಡೆಯಾಜ್ಞೆ ತೆರವು ಬಳಿಕ ತಕ್ಷಣವೇ ಅಗತ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಿ ರಾಜ್ಯದ ಪಾಲಿನ ನೀರು ಬಳಕೆ ಮಾಡಿಕೊಳ್ಳಲಾಗುವುದು. ಈ ಬಗ್ಗೆ ಈಗಾಗಲೇ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು. ಈಗಾಗಲೇ 250 ಕೋಟಿ ಖರ್ಚು ಮಾಡಲಾಗಿದೆ.

ನಾವು ಕೂಡ ಪರಿಸರಪ್ರೇಮಿಗಳಾಗಿದ್ದು, ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಯೋಜನೆ ಕೈಗೊಳ್ಳುತ್ತೇವೆ. ಕಳಸಾ-ಬಂಡೂರಿ ಕಾಮಗಾರಿಗೆ 499 ಹೆಕ್ಟೇರ್ ಅರಣ್ಯಭೂಮಿ ಹಾಗೂ 191 ಖಾಸಗಿ ಜಮೀನು ಅಗತ್ಯವಿದೆ. ಭೂಸ್ವಾಧೀನಕ್ಕೆ ಸರ್ಕಾರ ಸಿದ್ಧವಿದೆ ಎಂದರು.

ಸಮುದ್ರಕ್ಕೆ ವ್ಯರ್ಥವಾಗಿ ಹರಿಯುತ್ತಿರುವ 140 ಟಿಎಂಸಿ ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳು ಕೂಡ ತಮ್ಮ ಪಾಲಿನ ನೀರು ಬಳಕೆಗೆ ನಮ್ಮ ಯಾವುದೇ ವಿರೋಧವಿಲ್ಲ. ಇದನ್ನು ಅರಿತು ಸಹಕರಿಸಬೇಕು ಎಂದರು.

ಮೇಲ್ಮನವಿ ಸಲ್ಲಿಕೆ – ಪರಿಶೀಲನೆ :

ಮಹದಾಯಿ ನ್ಯಾಯಾಧೀಕರಣ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಈ ಬಗ್ಗೆ ಮೇಲ್ಮನವಿ ಸಲ್ಲಿಸಬೇಕು ಎಂಬುದು ಜನಾಭಿಪ್ರಾಯವಾಗಿದೆ. ಈ ಬಗ್ಗೆ ತಜ್ಞರ ಜತೆ ಚರ್ಚೆ ನಡೆಸಿರುವ ಸರ್ಕಾರ ಮೇಲ್ಮನವಿ ಸಲ್ಲಿಕೆ ಬಗ್ಗೆ ಪರಿಶೀಲನೆ ನಡೆಸಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ನ್ಯಾಯಾಲಯದ ಬಗ್ಗೆ ನಮಗೆ ಗೌರವವಿದೆ. ನಮ್ಮ ಪಾಲಿನ ನೀರಿನ ಹಕ್ಕಿಗಾಗಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಸದ್ಯಕ್ಕೆ ಹೋರಾಟಗಾರರು ಮತ್ತು ಜನರ ಅಭಿಪ್ರಾಯದಂತೆ ನ್ಯಾಯಾಧೀಕರಣ ತೀರ್ಪಿನಂತೆ ನಮ್ಮ ಪಾಲಿನ ನೀರು ಬಳಕೆಗೆ ಸರ್ಕಾರ ಆದ್ಯತೆ ನೀಡಲಾಗುವುದು. ಆ ನಿಟ್ಟಿನಲ್ಲಿ ಸರ್ಕಾರ ತನ್ನ ಸಿದ್ಧತೆ ನಡೆಸಿದೆ ಎಂದು ಸ್ಪಷ್ಟಪಡಿಸಿದರು.
ಕಳಸಾ-ಬಂಡೂರಿ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದ ಸಚಿವ ಡಿ.ಕೆ.ಶಿವಕುಮಾರ್ ಅವರು, ಯೋಜನೆಯ ಸದ್ಯದ ಸ್ಥಿತಿಗತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಖಾನಾಪುರ ಶಾಸಕರಾದ ಡಾ.ಅಂಜಲಿ ನಿಂಬಾಳ್ಕರ್, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ, ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು, ಹೋರಾಟಗಾರರು ಹಾಗೂ ರೈತ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು. ////

ನಿಮ್ಮ ಅನಿಸಿಕೆ ಅಭಿಪ್ರಾಯ , ಸುದ್ದಿಗಳನ್ನು newsbelagavi@gmail.com ಗೆ ಕಳುಹಿಸಿ.

>>> News Belgaum – No.1 Kannada News Portal in Belagavi

ಜಾಹೀರಾತು , ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ : Mobile : 82175 55800