ಸೌಲಭ್ಯಗಳ ಸಮರ್ಪಕ ವಿತರಣೆ: ಸಚಿವ ಜಾರಕಿಹೊಳಿ ಭರವಸೆ

Adequate delivery of facilities: Minister Jarkihili hopes

ಬೆಳಗಾವಿ:(news belgaum) ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸರ್ಕಾರಿ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಲು ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಭರವಸೆ ನೀಡಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೋಮವಾರ (ಜ.29) ನಡೆದ 2017-18ನೇ ಸಾಲಿನ ಮೂರನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದ್ದು, ಕೆಲವು ತಾಲೂಕುಗಳಲ್ಲಿ ಸಕಾಲಕ್ಕೆ ಸೌಲಭ್ಯಗಳು ದೊರಕದೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗಗಳ ಅರ್ಜಿದಾರರು ತೀವ್ರ ನಿರಾಶೆಗೆ ಒಳಗಾಗಿದ್ದಾರೆ. ಇದರಿಂದ ಎಲ್ಲ ಅರ್ಜಿದಾರರಿಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸರ್ಕಾರಿ ಸೌಲಭ್ಯಗಳು ದೊರೆವುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬೋರವೆಲ್; 7 ದಿನಗಳಲ್ಲಿ ಅನುಮೋದನೆ:

ಜಿಲ್ಲಾಧಿಕಾರಿಗಳಾದ ಎಸ್.ಜಿಯಾವುಲ್ಲಾ ಅವರು ಮಾತನಾಡಿ, ಕ್ರಮಬದ್ಧವಾಗಿರುವ ಹಳೆ ಬೋರವೆಲ್ ಮತ್ತು ನೀರಿನ ಸಮಸ್ಯೆ ಇರುವ ಪ್ರದೇಶಗಳಲ್ಲಿ ಹೊಸ ಬೋರವೆಲ್‍ಗಾಗಿ 7 ದಿನಗಳಲ್ಲಿ ಅನುಮೋದನೆ ನೀಡಬೇಕು ಎಂದು ತಾಲೂಕು ಅಧಿಕಾರಿಗಳಿಗೆ ಸೂಚಿಸಿದರು.
ಯಮಕನಮರ್ಡಿ ಮತಕ್ಷೇತ್ರದ ಶಾಸಕರಾದ ಸತೀಶ ಜಾರಕಿಹೊಳಿ ಅವರು ಮಾತನಾಡಿ, ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಒಬ್ಬರ ಹೆಸರಲ್ಲಿ 2 ಪಡಿತರ ಚೀಟಿ ಕಂಡು ಬಂದಿದ್ದು, ಅಂತವರ ವಿರುದ್ಧ ಕ್ರಮ ತೆಗೆದುಕೊಂಡು ಬಡವರಿಗೆ ಪಡಿತರ ಚೀಟಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಕುಡಚಿ ಮತಕ್ಷೇತ್ರದ ಶಾಸಕರಾದ ಪಿ. ರಾಜೀವ ಅವರು ಮಾತನಾಡಿ, ರಾಯಬಾಗ ತಾಲೂಕಿನಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚು ಇರುವುದರಿಂದ ಮಹಿಳೆಯರ ಆರೋಗ್ಯದ ದೃಷ್ಠಿಯಿಂದ ಐ.ಸಿ.ಯು ಘಟಕ ಸ್ಥಾಪಿಸಬೇಕು ಮತ್ತು ಕುಡಚಿ ಭಾಗದಲ್ಲಿ ಮಹಿಳಾ ವೈದ್ಯರನ್ನು ನೇಮಕ ಮಾಡುವಂತೆ ಒತ್ತಾಯಿಸಿದರು.
ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಗಣೇಶ ಹುಕ್ಕೇರಿ, ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಸಂಜಯ ಪಾಟೀಲ, ಅಥಣಿ ಮತಕ್ಷೇತ್ರದ ಶಾಸಕರಾದ ಲಕ್ಷ್ಮಣ ಸವದಿ, ಖಾನಾಪೂರ ಮತಕ್ಷೇತ್ರದ ಶಾಸಕರಾದ ಅರವಿಂದ ಪಾಟೀಲ, ರಾಯಬಾಗ ಮತಕ್ಷೇತ್ರದ ಶಾಸಕರಾದ ದುರ್ಯೋಧನ ಐಹೊಳೆ, ಕಾಗವಾಡ ಮತಕ್ಷೇತ್ರದ ಶಾಸಕರಾದ ಭರಮಗೌಡಾ ಕಾಗೆ. ಜಿಲ್ಲಾ ಪಂಚಾಯತ ಅಧ್ಯಕ್ಷೆ ಶ್ರೀಮತಿ ಆಶಾ ಐಹೊಳೆ, ಉಪಾಧ್ಯಕ್ಷರಾದ ಅರುಣ ಕಟಾಂಬಳೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಚಂದ್ರನ್ ಆರ್. ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

Read Belgaum News & Updates for What’s Happening in Around You @ in News Belgaum Kannada News Portal.