ವೈದ್ಯರು ರೋಗಿಗಳಿಗೆ ತಾರತಮ್ಯವಿಲ್ಲದೆ ಚಿಕಿತ್ಸೆ ನೀಡಿಲಿ : ಸಿಇಓ ರಾಮಚಂದ್ರನ್ ಆರ್.

Doctors treat patients without discrimination: CEO Ramachandran R.

ಬೆಳಗಾವಿ:(news belgaum)ಕುಷ್ಠ ರೋಗದಿಂದ ರೋಗಿಗಳು ಬೇಗ ಗುಣಮುಖವಾಗಬೇಕಾದರೆ ಚಿಕಿತ್ಸೆಯ ಜೊತೆಗೆ ವೈದ್ಯರ ಸಲಹೆ ಮತ್ತು ಸಹಕಾರವು ಅಗತ್ಯವಾಗಿದ್ದು, ವೈದ್ಯರು ರೋಗಿಗಳಿಗೆ ಯಾವುದೇ ರೀತಿಯ ತಾರತಮ್ಯವಿಲ್ಲದೆ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಚಂದ್ರನ್ ಆರ್. ಅವರು ಹೇಳಿದರು.
ನಗರದ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಜಿಲ್ಲಾ ಕುಷ್ಠ ರೋಗ ವಿಭಾಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ (ಜ.30) ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸ್ಪರ್ಶ ಕುಷ್ಠ ಅರಿವು ಆಂದೋಲನ ಪಾಕ್ಷಿಕ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುಷ್ಠ ರೋಗಿಗಳು ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬೇಕಾದರೆ ಬಿ.ಪಿ.ಎಲ್ ಪಡಿತರ ಚೀಟಿ ಕಡ್ದಾಯವಾಗಿದ್ದು, ಕೆಲವು ಬಡ ರೋಗಿಗಳಿಗೆ ಬಿ.ಪಿ.ಎಲ್ ಪಡಿತರ ಚೀಟಿ ಇಲ್ಲದೇ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಡ ಕುಟುಂಬಗಳಿಗೆ ಕೂಡಲೇ ಬಿ.ಪಿ.ಎಲ್ ಪಡಿತರ ಚೀಟಿ ನೀಡಲು ಬೇಕಾದ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಕುಷ್ಠರೋಗ ನಿವಾರಣೆಗಾಗಿ ಜಿಲ್ಲೆಯ ವಿವಿಧ ಗ್ರಾಮ ಅಥವಾ ಹಳ್ಳಿಗಳಲ್ಲಿ ಕಾರ್ಯಕ್ರಗಳನ್ನು ಆಯೋಜಿಸಲು ಜಿಲ್ಲಾ ಪಂಚಾಯತ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ವೈದ್ಯರಿಗೆ ಭರವಸೆ ನೀಡಿದರು. ಮತ್ತು ಬಡರೋಗಿಗಳಿಗೆ ಸಹಕಾರ ಅಗತ್ಯವಾಗಿದ್ದು, ನಮ್ಮ ಸುತ್ತ-ಮುತ್ತಲಿನಲ್ಲಿ ಕುಷ್ಠರೋಗಿಗಳು ಕಂಡು ಬಂದರೆ ಚಿಕಿತ್ಸೆ ನೀಡಲು ಸಹಾಯ ಮಾಡಿ, ದೇಶವನ್ನು ಕುಷ್ಠರೋಗದಿಂದ ಮುಕ್ತಗೊಳಿಸೋಣ ಎಂದು ಹೇಳಿದರು.
ಬಿ.ಪಿ.ಎಲ್. ಪಡಿತರ ಚೀಟಿ ಬಡ ಕುಟುಂಬದವರಿಗೆ ತಲುಪಬೇಕಾದರೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ. ಅಂತಹ ಪ್ರಕರಣಗಳು ಕಂಡುಬಂದಲ್ಲಿ ನನ್ನ ಗಮನಕ್ಕೆ ತನ್ನಿ. ಅಂತಹವರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕುಷ್ಠ ರೋಗದಿಂದ ಗುಣಮುಖರಾದ ರೋಗಿಗಳಿಗೆ ಔಷಧಿ-ಉಪಯುಕ್ತ ಸಲಕರಣೆ ನೀಡಿ ಸನ್ಮಾನಿಸಲಾಯಿತು. ವೈದ್ಯಕೀಯ ಮಹಾವಿದ್ಯಾಲಯ ವಿದ್ಯಾರ್ಥಿಗಳು ಕುಷ್ಠರೋಗದ ಕುರಿತು ಕಿರು ನಾಟಕ ಪ್ರಸ್ತುತ ಪಡಿಸಿದರು. ಡಾ. ಜಯಶ್ರೀ ನಾಯಕ ಮತ್ತು ಡಾ. ಗಜಾನನ ಪೀಸೆ ಅವರು ಕುಷ್ಠರೋಗದ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳಾದ ಡಾ. ಚಾಂದನಿ ದೇವಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಚಂದ್ರನ್ ಆರ್. ಅವರು ಕುಷ್ಠರೋಗ ನಿವಾರಣೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಡಾ. ಅಪ್ಪಾ ಸಾಹೇಬ ನರಟ್ಟಿ, ಬಿಮ್ಸ್‍ನ ನಿರ್ದೇಶಕರಾದ ಎಸ್.ಟಿ. ಕಳಸದ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಎಚ್.ಎಂ ಖಾಜಿ, ಬಿಮ್ಸ್‍ನ ಚರ್ಮರೋಗ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಎನ್. ಪಾಟೀಲ ಅವರು ಸೇರಿದಂತೆ ಇನ್ನಿತರರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.
ಮಹೇಶ್ವರಿ ಅಂಧ ಮಕ್ಕಳ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.

ಜಾಥಾಕ್ಕೆ ಚಾಲನೆ :

ಜಿಲ್ಲಾ ಮಟ್ಟದ ಸ್ಪರ್ಶ ಕುಷ್ಠ ಅರಿವು ಆಂದೋಲನ ಪಾಕ್ಷಿಕ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಚಂದ್ರನ್ ಆರ್. ಅವರು ಚಾಲನೆ ನೀಡಿದರು.
ಜಿಲ್ಲಾ ಮಟ್ಟದ ಸ್ಪರ್ಶ ಕುಷ್ಠ ಅರಿವು ಆಂದೋಲನ ಪಾಕ್ಷಿಕ ಜಾಥಾ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಪ್ರಾರಂಭವಾಗಿ ಚನ್ನಮ್ಮ ವೃತ್ತ ಮಾರ್ಗವಾಗಿ ವೈದ್ಯಕೀಯ ಮಹಾವಿದ್ಯಾಲಯ ತಲುಪಿತು. ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಆಯುಕ್ತರಾದ ಡಾ. ಡಿ.ಸಿ. ರಾಜಪ್ಪ, ಡಿಸಿಪಿ ಸೀಮಾ ಲಾಟಕರ್, ಜಿಲ್ಲಾ ವೈದ್ಯಕೀಯ ಮಹಾವಿದ್ಯಾಲಯದ ಅಧಿಕಾರಿಗಳು ಹಾಗೂ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ಈ ಜಾಥಾ ಕಾರ್ಯಕ್ರದಲ್ಲಿ ಡೊಳ್ಳು ಮೇಳದವರು ಭಾಗವಸಿದ್ದು ವಿಶೇಷವಾಗಿತ್ತು. ಈ ಜಿಲ್ಲಾ ಮಟ್ಟದ ಸ್ಪರ್ಶ ಕುಷ್ಠ ಅರಿವು ಆಂದೋಲನ ಪಾಕ್ಷಿಕ ಕಾರ್ಯಕ್ರಮವು ಜನವರಿ 30 ರಿಂದ ಫೆಬ್ರವರಿ 13 ರವರೆಗೆ ಜರುಗಲಿದೆ.

| Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

Read Belgaum News & Updates for What’s Happening in Around You @ in News Belgaum Kannada News Portal.