ಜ.31 ರಂದು ರಾಣಿ ಚನ್ನಮ್ಮ ವಿವಿ ಘಟಿಕೋತ್ಸವ

Rani Chennamma Vivi Convention on January 31

ಬೆಳಗಾವಿ:( news belgaum) ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವ ಸಮಾರಂಭವನ್ನು ಜ.31 ರಂದು ಬೆಳಿಗ್ಗೆ 11 ಗಂಟೆಗೆ ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮುಖ್ಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ|| ಶಿವಾನಂದ ಬಿ. ಹೊಸಮನಿ ಅವರು ತಿಳಿಸಿದರು.
ರಾಜ್ಯಪಾಲರು ಹಾಗೂ ರಾಜ್ಯದ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾದ ವಜುಬಾಯಿ ಆರ್. ವಾಲಾ ಅವರು ಅಧ್ಯಕ್ಷತೆ ವಹಿಸುವರು. ನವದೆಹಲಿಯ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಮಾಜಿ ಅಧ್ಯಕ್ಷರಾದ ಡಾ|| ವಿ.ಎಸ್. ಚವ್ಹಾಣ ಅವರು ಘಟಿಕೋತ್ಸವ ಭಾಷಣ ಮಾಡುವರು. ಸಹಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರಡ್ಡಿ ಅವರು ಉಪಸ್ಥಿತರಿರುವರು ಎಂದು ಹೇಳಿದರು.
ಕುಲಪತಿ ಪ್ರೊ|| ಶಿವಾನಂದ ಹೊಸಮನಿ, ಕುಲಸಚಿವ ಪ್ರೊ|| ಸಿದ್ದು ಅಲಗೂರ, ಮೌಲ್ಯಮಾಪನ ಕುಲಸಚಿವ ಪ್ರೊ|| ರಂಗರಾಜ ವನದುರ್ಗ, ಹಣಕಾಸು ಅಧಿಕಾರಿ ಪರಶುರಾಮ ದುಡಗುಂಟಿ ಸೇರಿದಂತೆ ಸಿಂಡಿಕೇಟ್ ಸದಸ್ಯರು ಮತ್ತು ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯರು ಪಾಲ್ಗೊಳ್ಳುವರು ಎಂದರು.
ಘಟಿಕೋತ್ಸವದಲ್ಲಿ 8 ಸ್ನಾತಕ ವಿದ್ಯಾರ್ಥಿಗಳಿಗೆ ಹಾಗೂ 23 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು. ವಿವಿಧ ವಿಷಯಗಳಲ್ಲಿ ಅತಿಹೆಚ್ಚು ಅಂಕ ಪಡೆದ 15 ಬಿ.ಎ, 12 ಬಿ.ಕಾಂ, 10 ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಲಾಗುವುದು. 18 ಪಿಎಚ್‍ಡಿ ಪದವಿ ಹಾಗೂ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ 176 ರ್ಯಾಂಕ್ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಘಟಿಕೋತ್ಸವದಲ್ಲಿ 23,436 ಸ್ನಾತಕ ಪದವಿ ಹಾಗೂ 2507 ಸ್ನಾತಕೋತ್ತರ ಪದವಿ ಮತ್ತು 18 ಪಿಎಚ್‍ಡಿ ಪದವಿ ಸೇರಿದಂತೆ ಒಟ್ಟು 25,943 ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಘಟಿಕೋತ್ಸವಕ್ಕೆ ಸಂಬಂಧಿಸಿದಂತೆ ಎಲ್ಲ ಕಾರ್ಯಗಳನ್ನು ಕೈಗೊಳ್ಳಲು ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಒಳಗೊಂಡ 17 ಸಮಿತಿಗಳನ್ನು ರಚಿಸಲಾಗಿದೆ. ಘಟಿಕೋತ್ಸವಕ್ಕೆ ಆಗಮಿಸುವ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಅನುಕೂಲವಾಗುವಂತೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಕುಲಪತಿ ಪ್ರೊ|| ಶಿವಾನಂದ ಹೊಸಮನಿ ಅವರು ತಿಳಿಸಿದರು.
ಚಿನ್ನದ ಹುಡುಗಿ ಶೈಜಲ್:
ನಗರದ ಕೆ.ಎಲ್.ಇ ಸಂಸ್ಥೆಯ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ಶೈಜಲ್ ಆರ್. ಪಸಾರಿ ಬಿ.ಕಾಂ ವಿಭಾಗದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗಳಿಸುವ ಮೂಲಕ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸದಾಶಿವ ಗಾಣಿಗೇರ 2 ಚಿನ್ನದ ಪದಕಗಳನ್ನು ಪಡೆದು ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾನೆ.
ಹಾರೂಗೇರಿಯ ಎಸ್.ವಿ.ಎಸ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಕಾಂತಪ್ಪ ಪಾಟೀಲ, ಉಗಾರ-ಖುರ್ದದ ತುಸ್ವಸೆಟ್ಸ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪೂಜಾ ಮಾಕನ್ನವರ, ಸಾವಳಗಿಯ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಮೇಘಾ ದೋನಾಜ, ಮುದ್ದೇಬಿಹಾಳದ ಎಂ.ಜಿ.ವಿ.ಸಿ ಮಹಾವಿದ್ಯಾಲಯದ ಹೀನಾಕೌಸರ ಜಾನ್ವೇಕರ, ಜಮಖಂಡಿಯ ಬಿಎಲ್‍ಡಿ ಮಹಾವಿದ್ಯಾಲಯದ ರಜತ ರೇವನಕರ, ಚಿಕ್ಕೋಡಿಯ ಬಿ.ಕೆ. ಕಾಲೇಜಿನ ಅಶೋಕ ಲಟ್ಟೆ, ಬೆಳಗಾವಿಯ ಎಸ್‍ಕೆಇಎಸ್ ಜಿ.ಎಸ್. ವಿಜ್ಞಾನ ಮಹಾವಿದ್ಯಾಲಯದ ಶ್ವೇತಾ ಸೋನಾಲ್ಕರ್, ವಿಜಯಪುರದ ಅಂಜುಮನ್ ಮಹಾವಿದ್ಯಾಲಯದ ಅಜರ್ ಸುಮನ್ ಮದ್ರಾಸಿ, ಇಳಕಲ್‍ದ ವಿದ್ಯಾರ್ಥಿ ಮೊನಾಲ್ ಭಂಡಾರಿ ಅವರು ಎರಡು ಚಿನ್ನದ ಪದಕಗಳನ್ನು ಪಡೆದಿದ್ದಾರೆ ಎಂದು ತಿಳಿಸಿದರು.
ಕುಲಸಚಿವ ಪ್ರೊ|| ಸಿದ್ದು ಅಲಗೂರ, ಮೌಲ್ಯಮಾಪನ ಕುಲಸಚಿವ ಪ್ರೊ|| ರಂಗರಾಜ ವನದುರ್ಗ ಹಾಗೂ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

| Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

Read Belgaum News & Updates for What’s Happening in Around You @ in News Belgaum Kannada News Portal.