ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ನಡೆಯಲಿ: – ಸಿಇಒ ರಾಮಚಂದ್ರನ್

Recognition and honors can be achieved: - CEO Ramachandran

ಬೆಳಗಾವಿ:(news belgaum) ಸಾಧಕರು ಹಾಗೂ ಸಮಾಜದಲ್ಲಿ ಉತ್ತಮ ಕಾರ್ಯ ಮಾಡುತ್ತಿರುವವರನ್ನು ಅಭಿನಂದಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್.ಆರ್ ಅವರು ಹೇಳಿದರು.
ಇಲ್ಲಿನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಚಿಕ್ಕೋಡಿ ಹಾಗೂ ಜಿಲ್ಲಾ ಪಂಚಾಯತ ವತಿಯಿಂದ ಮಂಗಳವಾರ (ಜ.30) ಹಮ್ಮಿಕೊಂಡಿದ್ದ ಮಾರ್ಚ್-2017ರ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆಯಲು ಪ್ರೇರಣೆ ನೀಡಿದ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಿಕ್ಷಕರು ಎಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಸಮಾಜಕ್ಕೆ ಅವರನ್ನು ಕೊಡುಗೆಯಾಗಿ ನೀಡಬೇಕು. ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದರು.
ಒಬ್ಬ ತಾಯಿ ಹೆರಿಗೆಯ ಸಂದರ್ಭದಲ್ಲಿ ತುಂಬಾ ನೋವು ಅನುಭವಿಸಿರುತ್ತಾಳೆ. ಮುಂದೆ ಆ ಮಗು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆದಾಗ ಮಾತ್ರ ತಾಯಿಗೆ ಆ ನೋವನ್ನು ಸಂಪೂರ್ಣವಾಗಿ ಮರೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಮಕ್ಕಳು ಉತ್ತಮ ಶಿಕ್ಷಣ ಹಾಗೂ ಸಂಸ್ಕಾರಗಳನ್ನು ಪಡೆದು ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಬೇಕು ಎಂದು ಹೇಳಿದರು.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಕ್ಕಳು ಉತ್ತಮ ಅಂಕಗಳನ್ನು ಪಡೆಯಲು ಪ್ರೇರಣೆ ನೀಡಿದಂತಹ ಶಿಕ್ಷಕರನ್ನು ಇಂದು ಅಭಿನಂದಿಸಲಾಗುತ್ತಿದ್ದು, ಅವರ ರೀತಿಯಲ್ಲಿ ಎಲ್ಲ ಶಿಕ್ಷಕರು ಸಹ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಪ್ರೇರೇಪಣೆ ನೀಡಬೇಕು. ಮಕ್ಕಳನ್ನು ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು. ಶಿಕ್ಷಕರು ಮಕ್ಕಳಿಗೆ ಸದಾ ಆದರ್ಶಪ್ರಾಯರಾಗಿರಬೇಕು ಎಂದು ಹೇಳಿದರು.
ಶಿಕ್ಷಕರು ಇದೇ ರೀತಿ ತಮ್ಮ ಕಾರ್ಯವನ್ನು ಮುಂದುವರೆಸಿಕೊಂಡು ಹೋಗಬೇಕು ಎಂಬ ಉದ್ದೇಶದಿಂದ ಇಂದು ಉತ್ತಮ ಫಲಿತಾಂಶಕ್ಕೆ ಕಾರಣರಾದ ಶಿಕ್ಷಕರನ್ನು ಸನ್ಮಾನಿಸಲಾಗುತ್ತಿದೆ. ಎಲ್ಲ ಜಿಲ್ಲೆಗಳಲ್ಲಿ ಇಂತಹ ಕಾರ್ಯಕ್ರಮಗಳು ನಡೆಯಬೇಕು ಎಂದರು.
ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಚಿಕ್ಕೋಡಿ ಜಿಲ್ಲೆಯಲ್ಲಿ ಒಟ್ಟು 953 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದಿದ್ದಾರೆ. ಇದರ ಶ್ರೇಯಸ್ಸು ವಿದ್ಯಾರ್ಥಿಗಳು ಉತ್ತಮವಾಗಿ ಅಧ್ಯಯನ ಕೈಗೊಂಡು ಪರೀಕ್ಷೆ ಎದುರಿಸಲು ಪ್ರೇರಣೆ ನೀಡಿದ ಶಿಕ್ಷಕರಿಗೆ ಸಲ್ಲುತ್ತದೆ. ಆದ್ದರಿಂದ ಅಂತಹ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಅವರು ಶಿಕ್ಷಕರ ಮೇಲೆ ಅಪಾರ ಅಭಿಮಾನವನ್ನು ಹೊಂದಿದ್ದು, ತಮ್ಮ ಕಚೇರಿಯಲ್ಲೇ ಈ ಕಾರ್ಯಕ್ರಮವಮನ್ನು ಏರ್ಪಡಿಸಿ ಶಿಕ್ಷಕರಿಗೆ ಗೌರವ ಸಲ್ಲಿಸಿದ್ದಾರೆ ಎಂದರು.

30 ಶಾಲೆಗಳು, 450 ಶಿಕ್ಷಕರು, 10 ವಿದ್ಯಾರ್ಥಿಗಳಿಗೆ ಸನ್ಮಾನ:

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯ 8 ವಲಯಗಳ 450 ಶಿಕ್ಷಕರು, 30 ಶಾಲಾ ಆಡಳಿತ ಮಂಡಳಿ ಹಾಗೂ 10 ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರಗಳನ್ನು ವಿತರಿಸಿ ಸನ್ಮಾನಿಸಲಾಯಿತು.
ಪ್ರತಿಶತ ನೂರಕ್ಕೆ ನೂರರಷ್ಟು ಅಂಕ ಪಡೆದ ಚಿಕ್ಕೋಡಿ ವಿಭಾಗದ 30 ಶಾಲೆಗಳಿಗೆ ಸರ್ಕಾರದ ಅನುದಾನ ಹಾಗೂ ಎಸ್ಸೆಸ್ಸೆಲ್ಸಿ ಬೋರ್ಡ್ ವತಿಯಿಂದ ತಲಾ ರೂ. 10 ಸಾವಿರ ಚೆಕ್ ಹಾಗೂ ಧಾರವಾಡ ವಿಭಾಗದ ಶಿಕ್ಷಣ ಆಯುಕ್ತರು ನೀಡಿದ ಮಧ್ಯಾಂಕ ಸರಾಸರಿ ಪ್ರಮಾಣ ಪತ್ರಗಳನ್ನು ನೀಡಿ ಪುರಸ್ಕರಿಸಲಾಯಿತು.

ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ಗಳಿಸಿದ 10 ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆಯಲು ಪ್ರೇರೇಪಣೆ ನೀಡಿದ ಒಟ್ಟು 450 ಶಿಕ್ಷಕರಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಅವರು ಕಾರ್ಯಕ್ರಮದ ಮುಕ್ತಾಯದವರೆಗೂ ಹಾಜರಿದ್ದು ಎಲ್ಲ ಶಿಕ್ಷಕರು, ಶಾಲೆಯ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರಗಳನ್ನು ವಿತರಿಸಿ ಶಿಕ್ಷಕರರಿಂದ ಮೆಚ್ಚುಗೆ ಪಡೆದರು.
ಚಿಕ್ಕೋಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ರಾಜೀವ ನಾಯಕ, ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ಪುಂಡಲೀಕ. ಎ.ಬಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಪುಂಡಲೀಕ ಅನವಾಲ, ನೂಡಲ್ ಅಧಿಕಾರಿ ಕೆ.ಎಚ್. ಹುದ್ದಾರ ಸೇರಿದಂತೆ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

| Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

Read Belgaum News & Updates for What’s Happening in Around You @ in News Belgaum Kannada News Portal.